ॐ
ಹಂಬಲ
ಹಿಮಾಲಯ! ಆ ಹೆಸರಿನಲ್ಲೇ ಏನೋ ಚುಂಬಕ ಶಕ್ತಿ! ಶಾಲೆಯಲ್ಲಿ ಭೂಗೋಳ ಓದುವಾಗ ಭಾರತದ ಉತ್ತರದಲ್ಲಿ ಪೂರ್ವದಿಂದ ಪಶ್ಚಿಮದತನಕ ಹರಡಿನಿಂತು ದೇಶವನ್ನು ನಿರಂತರವಾಗಿ ಶತ್ರುಗಳಿಂದ ರಕ್ಷಿಸುವ ಪ್ರಹರಿ ಎಂದು ಓದುವಾಗ ಏನೋ ಭಯ,ಗೌರವ.ಆ ಹೆಸರಿನಲ್ಲಿಯ ಗಾಂಭೀರ್ಯವೇ ಆಕರ್ಷಣೆಯ ಕೇಂದ್ರಬಿಂದು ಅನಿಸುತ್ತಿತ್ತು.
S.L.Bhirappaನವರು ಮಾನಸ ಸರೋವರದ ಯಾತ್ರೆ ಮಾಡಿದ ಬಗ್ಗೆ ಭಿತ್ತಿಯಲ್ಲಿ ಓದಿದಾಗ ತುಡಿತ ಇನ್ನು ಹೆಚ್ಚಾಯಿತು.ಹಾಗೆಯೆ ರಾಮಕೃಷ್ಣಾಶ್ರಮದವರು ಮಾಡಿದ ಯಾತ್ರೆಯ ಸೀಡಿ ನೋಡಿದಾಗ ನಿರ್ಧಾರ ಘಟ್ತಿಯಾಗುತ್ತ ಯಿತ್ತು.ಹತ್ತಿರದ ಸಂಬಂಧಿಗಳಿಬ್ಬರು ಹೊಗಿಬಂದಾಗ ಅದೇ ಹಂಬಲವಾಯಿತು. ಕಳೆದ ಒಂದು ವರ್ಷದಿಂದ ಅದೇ ಧ್ಯಾನವಾಯಿತು. ಧ್ಯಾನಕ್ಕೆ ಕುಳಿತರೆ ಭ್ರೂಮಧ್ಯೆ ಕಾಣುತ್ತಿದ್ದುದು ಇಷ್ಟದೈವವಾದ ಮುದ್ದುಕ್ರಿಷ್ಣನಲ್ಲ,ಕೈಲಾಸ ಪರ್ವತ! KMVN websiteನಲ್ಲಿ ಯಾತ್ರೆಯ ಬಗ್ಗೆ ಓದಿದೆ.ಆದರೆ ಈ ಯಾತ್ರೆ ಇತರ ಎಲ್ಲ ಯಾತ್ರೆಗಳಂತೆ ನೆನೆದಾಗ ಹೋಗುವಂತಹುದಲ್ಲ. ೪-೫ ವರ್ಷಗಳ ಹಿಂದೆ ಕೇದಾರಪರ್ವತದ ಚಾರಣದಲ್ಲಿಹಿಮಾಲಯದ ಒಂದು ದಿನದ ಸಾನಿಧ್ಯ ಏನೂ ಸಾಲದೆನ್ನಿಸಿತ್ತು.ಆ ದೇವಭೂಮಿಯಲ್ಲಿ ಋಷಿಮುನಿಗಳ ತಪೋಭೂಮಿಯಲ್ಲಿ ದಿನ ದಿನದ ಅಡಿಗೆ ಊಟ ತಿಂಡಿಗಳ ಜಂಜಾಟವಿಲ್ಲದೆ ಮನದಣಿಯೆ ಅಲೆಯಬೇಕೆನಿಸುತ್ತಿತ್ತು. ಆದ್ದರಿಂದ ನೇಪಾಳದ ಮೂಲಕ ಹೋಗುವ ವಿಚಾರ ಇಷ್ಟವಾಗಲಿಲ್ಲ. ೨೦೦೫ ಜನವರಿಯಲ್ಲಿ ಅಪ್ಲಿಕೇಶನ್ ಕಳಿಸಿದ್ದಾಯಿತು. ಪಾಸ್ಪೋರ್ಟ್ ಬೇರೆ ಲ್ಯಾಪ್ಸ್ ಆಗುತ್ತಿತ್ತು. ಮಾರ್ಚ್ ಕೊನೆಯಲ್ಲಿ ಒಂದು ದಿನ ಬೆಳಿಗ್ಗೆ ಕ್ಯೂ ನಿಂತು renewal ಗೆ ಕೊಟ್ಟಿದ್ದಾಯಿತು. ನಂತರ ಶುರುವಾಯಿತು ನಿರೀಕ್ಷೆ ನಿರೀಕ್ಷೆ! ಎಂದೂ ಯಾವುದೇ ಚೀಟಿ ವ್ಯವಹಾರದಲ್ಲಿ ನನ್ನ ಹೆಸರು ಬಂದಿಲ್ಲ.ಆದರೆ ಈಸಲ ಬಂದೆ ಬರುವುದು ಎಂಬ ಒಳದನಿ!
ಭಾರತ ಸರ್ಕಾರವು ಪ್ರತಿವರ್ಷ ಜನವರಿ ಫೆಬ್ರವರಿಯಲ್ಲಿ application ಕರೆಯುತ್ತದೆ. ಯಾತ್ರೆ ಜೂನ್ ನಿಂದ ಸೆಪ್ಟೆಂಬರ್ ವರೆಗೆ. ಯಾತ್ರಿಗಳ ಆಯ್ಕೆ ಕಂಪ್ಯೂಟರ್ ಮೂಲಕ.ನನ್ನ application ತಲುಪಿ ನನ್ನ no s.೩೩೩ ಎಂದು ಒಂದು ಕಾರ್ಡ್ ಬಂತು. ನಂತರ ಅದೇ ಧ್ಯಾನ ಅದೇ ಜಪ. ಮೊದಲ ಕಂತಿನ ಯಾತ್ರೆ ಶುರುವಾದರೂ ನನಗೆ ಯಾವುದೇ ಸುದ್ದಿ ಬರಲಿಲ್ಲ.ಧ್ಯಾನದಲ್ಲೂ ಏಕಾಗ್ರತೆಯಿಲ್ಲ.ನನ್ನ ಗುರುವಾದ ರಾಧಿಕಾ ಗೋಪಾಲಕೃಷ್ಣ ಅವರ ಬಳಿ ಹೇಳಿಕೊಂಡಾಗ ಗುರುಮುಖೇನ ಮಂತ್ರೋಪದೇಶವಾದರೆ ಏಕಾಗ್ರತೆ ಸಧ್ಯ ಎಂದರು. ನಾನು ನೀವೇ ನನ್ನ ಗುರು,ನೀವೇ ಉಪದೇಶಿಸಿ ಎಂದಾಗ ಒಪ್ಪಿ ಪ್ರೀತಿಯಿಂದ ಮಂತ್ರೋಪದೇಶ ಕೊಟ್ಟರು.ನಿಧಾನವಾಗಿ ಏಕಾಗ್ರತೆ ಸಾಧಿಸಿತು. ಅದೇ ವಾರದಲ್ಲಿ ಈ ಯಾತ್ರೆಯ ಸಂಬಂಧ ಸಕಲ ವ್ಯವಹಾರಗಳನ್ನೂ ನೋಡಿಕೊಳ್ಳುವ ಶ್ರೀ ರಾಜಕುಮಾರ್ ಅವರ ಫೋನ್ no ಸಿಕ್ಕಿ ಅವರನ್ನು ಸಂಪರ್ಕಿಸಿದಾಗ s.೩೩೩ ಯನ್ನು ೧೫ನೇ ತಂಡದಲ್ಲಿ ಆಯ್ಕೆ ಮಾಡಿದ್ದೇವೆ.ನಿಮಗೆ ಟೆಲಿಗ್ರಾಂ ಕಳಿಸಿದ್ದೇವೆ ಎಂದರು. ಏನೋ ಸಾಮ್ರಾಜ್ಯ ಜಯಿಸಿದಷ್ಟು ಸಂತೊಷ. ಜೀವನದಲ್ಲಿ ಹಿಂದೆಯೂ ಕೆಲವು ಸಂಭ್ರಮದ ಕ್ಷಣಗಳು ಬಂದಿದ್ದವು. ಮಕ್ಕಳು ರಾಂಕ್ ಗಳಿಸಿದಾಗ, ಮಗಳಿಗೆ ವಿನಯ ಸಂಪನ್ನ ಸದ್ಗುಣಿ ವರ ದೊರಕಿದಾಗ ಸಂತಸಗೊಂಡಿದ್ದೆ.ಆದರೆ ಇದು ನಾನು ನನಗಾಗಿ ಮಾಡಿಕೊಂಡ ಕೋರಿಕೆಯನ್ನು ದೇವರು ಕರುಣಿಸಿದ್ದ. ಅಂದೇ ಹೋಗಿ ಗುರು ರಾಧಿಕಾ ಅವರ ಕಾಲಿಗೆರಗಿದೆ. ನಗೆಕೂಟದಲ್ಲಿ ಸಂತಸ ಹಂಚಿಕೊಂಡೆ.ಟೆಲಿಗ್ರಾಂ ಜೊತೆ ಯಾತ್ರೆಯ ಸಂಪೂರ್ಣ ಮಾಹಿತಿಯನ್ನು ಒಳಗೊಂಡ ಕಿರು ಪುಸ್ತಿಕೆಯೂ ಬಂತು.ಅಂತು ಮೊದಲ ಹಂತದ ಗೆಲುವು. ದಾಟಬೇಕದ ಮಜಲುಗಳು ಪರೀಕ್ಷೆಗಳು ಇನ್ನೂ ಮುಂದೆ ಇದ್ದವು. ಸರಿ ಟೆಲಿಗ್ರಾಂ ಗೆ ಉತ್ತರವಾಗಿ ೫೦೦೦/ರೂಗಳ ಡಿ. ಡಿಯನ್ನು K.M.V.N.ಗೆ ಕಳಿಸಿದ್ದಾಯಿತು. ಅಲ್ಲಿಂದ ನನ್ನ ಯಾತ್ರೆಯ ತಯಾರಿ ಪ್ರಾರಂಭವಾಯಿತು.
ಯಾತ್ರೆಯ ತಯಾರಿ.
ಮೊತ್ತ ಮೊದಲು ಮಾಡಿದ ಕೆಲಸವೆಂದರೆ ನನ್ನ ಅಳಿಯನ ಜೊತೆಗೆ ಹೋಗಿ ೨೫೦೦/ರೂಗೆ ಒಳ್ಳೆಯ ಟ್ರೆಕಿಂಗ್ ಶೂ ಕೊಂಡು ನಡೆಯಲು ಪ್ರಾರಂಭಿಸಿದ್ದು. ದಿನವೂ ಸಂಜೆ GKVKಗೆ ಹೋಗಿ ನಡೆಯಲು ಅಭ್ಯಾಸ ಮಾಡಿಕೊಂಡೆ.ನನ್ನಮಗ ಮೊದಲೇ ಎಚ್ಚರಿಸಿದ್ದ ಒಳ್ಳೆಯ ಶೂ ತೆಗೆದುಕೋ ಇಲ್ಲವಾದರೆ ಕಷ್ಟ ಪಡುತ್ತಿ ಎಂದು. ದಿನವು ೫-೬ ಕಿ.ಮೀ. ಒಂದು ಗಂಟೆಯಲ್ಲಿ ನಡೆದು ಅಭ್ಯಾಸ ಮಾಡಿಕೊಂಡೆ. ಎಂದೂ ಶೂ ಹಾಕಿ ಅಭ್ಯಾಸವೇ ಯಿರಲಿಲ್ಲವಾದ್ದರಿಂದ ಮೊದಲು ಕಷ್ಟವಾಯಿತು. ಆದರೆ ಕೈಲಾಸ ಯಾತ್ರೆಗಾಗಿ ಯಾವುದೇ ಕಷ್ಟವನ್ನೂ ಸಂತೋಷದಿಂದ ಸ್ವೀಕರಿಸುವ ಮನೋಭಾವ ಬೆಳೆಸಿಕೊಂಡೆ.ನನ್ನ ಸೊಸೆಯನ್ದಿರಿಬ್ಬರೂ.ತಮ್ಮ jeans, ಟೀ ಶರ್ಟ್ಸ್,ಗಳನ್ನೂ ಮಗಳು ತನ್ನ ಚೂಡಿದಾರವನ್ನೂ ಕೊಟ್ಟರು. ನನ್ನ ಸೊಸೆಯ ತಾಯಿ ಕಳೆದ ವರ್ಷ ಯಾತ್ರೆ ಮಾಡಿದ್ದರು. ಅವರು raincoat,ಶೂ,ಮೊದಲಾಗಿ ಯಾತ್ರೆಯಲ್ಲಿ ಉಪಯೋಗಕ್ಕೆ ಬರುವಂತಹವನ್ನು ಕಳಿಸಿದರು. ಗ್ಲೌಸ್[ಕಾಟನ್, ವೂಲೆನ್,leather]ಗಳು ಬೆಲ್ಟ್ ಪೌಚ್, ಎಲ್ಲ ಮಗಳು ಕೊಟ್ಟಳು.ಸೊಸೆ ಮತ್ತೆರಡು sweatshirts,ಡ್ರೈ fruits, cereal ಬಾರ್ಸ್ ಮುಂತಾದವನ್ನು ಕಳಿಸಿದಳು.ನನ್ನ ಮೊಮ್ಮಗ ಟ್ರೆಕಿಂಗ್ ದಿನಗಳಲ್ಲಿ ಉಪಯೋಗಕ್ಕೆಂದು ೧೨ ಬೇರೆ ಬೇರೆ ಪ್ಯಾಕೆಟ್ ಮಾಡಿ ಕೊಟ್ಟ.ನನ್ನ ಪತಿ ಯಾತ್ರೆಗೆ ಬೇಕಾದ indemnity ಬಾಂಡ್ ಮುಂತಾದ ಇತರೆ ಎಲ್ಲಾ ತಯಾರಿಗಳಲ್ಲಿ ಸಹಾಯ ಮಾಡಿದರು.ಕೂಲಿಂಗ್ ಗ್ಲಾಸ್, ಕಾಫಿ, ಸಕ್ಕರೆ horlicks, ಬಿಸ್ಕೆಟ್, ಬ್ರಷ್,ಪೇಸ್ಟ್, ಸೋಪ್,ಅಗತ್ಯ ಬೀಳಬಹುದಾದ ಔಷಧಗಳು ಎಲ್ಲವನ್ನು ಜೊತೆ ಮಾಡಿದ್ದಾಯಿತು. ATM ಇನ್ನೂಅಷ್ಟು ಅಭ್ಯಾಸವಾ ಗಿರಲಿಲ್ಲವಾದ್ದರಿಂದ ೭೦,೦೦೦-೮೦,೦೦೦/ರೂಗಳೊಂದಿಗೆ ಟ್ರೈನ್ನಲ್ಲಿ ೨ದಿನ ಒಬ್ಬಳೇ ಪ್ರಯಾಣ ಮಾಡುವುದು ಕಷ್ಟ ಎಂದು jet airways ನಲ್ಲಿ ೮೦೦೦/ಕ್ಕೆ roundtrip ಟಿಕೆಟ್ ಸಿಕ್ಕಿತು.ಜುಲೈ ೯ಕ್ಕೆ ಹೋಗಿ ಆಗಸ್ಟ್ ೯ಕ್ಕೆ ಬರುವ ಟಿಕೆಟ್ ಬುಕ್ ಮಾಡಿಕೊಂಡೆ. ಯಾತ್ರೆಯವೇಳೆ ನಮ್ಮ ಲಗೇಜ್ ಕುದುರೆಗಳ ಬೆನ್ನಮೇಲೆ ಹೊರಿಸುವುದರಿಂದ ಶೋಲ್ಡರ್ ಬ್ಯಾಗ್ ಮತ್ತು backpack ನಲ್ಲಿ ಜೋಡಿಸಿದೆ.ತಲಾ ೨೫ಕೆ.ಜಿ. ಯಲ್ಲಿ ೨೦ಅಷ್ಟೇ ನಮ್ಮ ಲಗೇಜ್ ಇರಬೇಕು.ಉಳಿದ ೫ ಟಿಬೆಟ್ ನಲ್ಲಿ ಅಡಿಗೆ ಮಾಡಿಕೊಳ್ಳುವ ಅಕ್ಕಿ ಬೇಳೆ ಉಪ್ಪು ಸಕ್ಕರೆ ಗೋದಿಹಿಟ್ಟುಕಾಫಿ ಟೀ ಖಾರದಪುಡಿ ಮೊದಲಾಗಿ ಬೇಕಾದ ಸಾಮಾನು. ೨ ಶೋಲ್ಡರ್ ಬ್ಯಾಗ್ ಗಳನ್ನೂ ಎರಡುಪ್ಲಾಸ್ಟಿಕ್ ಬ್ಯಾಗ್ ಗಳಿಗೆ zip ಹೊಲಿಸಿ ಕುದುರೆಗಳ ಬೆನ್ನಮೇಲೆ ಹೊರಿಸಲು ಅನುಕೂಲವಾಗುವಂತೆ ಮಾಡಿದ್ದಾಯಿತು.ಓಂ ನಮಃ ಶಿವಾಯ ವೆಂಬ ಮಂತ್ರದ ಭರವಸೆಯೊಂದಿಗೆ ಶಿವಾಲಯವಾದ ಹಿಮಾಲಯಕ್ಕೆ ಹೊರಡಲು ತಯಾರಾದೆ.ಇನ್ನೊಂದು ತಲೆಬಿಸಿ ಯಿತ್ತು. ನನ್ನನ್ನು ಅವರು ಆರಿಸಿದ್ದು ೧೫ನೆ ತಂಡಕ್ಕೆ.ಆಗಸ್ಟ್ ೨೧ಕ್ಕೆ ಹೊರಡುವಂತೆ. ಆದರೆ ಶ್ರಾವಣದ ಹಬ್ಬಗಳು ಗಣೇಶ ಚತುರ್ಥಿಯ ವೇಳೆ. ಆದ್ದರಿಂದ ಮತ್ತೆ ರಾಜಕುಮಾರ್ ಅವರಿಗೆ ಫೋನ್ ಮಾಡಿ ಜುಲೈ ೧೦ರ ತಂಡಕ್ಕೆ ಹಾಕಿಸಿಕೊಂಡಿದ್ದೆ. ಜುಲೈ ತಿಂಗಳು ಹಿಮಾಲಯದ ಚಾರಣಕ್ಕೆ ಅತ್ಯಂತ ಅನುಕೂಲವೆoದು ಸ್ವಾಮಿ ರಾಮ ಅವರ ಲಿವಿಂಗ್ ವಿಥ್ ಹಿಮಾಲಯನ್ ಮಾಸ್ಟರ್ಸ್ ಅವರ ಪುಸ್ತಕದಲ್ಲಿ ಓದಿದ್ದೆ. ಆದರೆ ನನ್ನ ಹತ್ತಿರ ಜುಲೈ ೧೦ರ ತಂಡದಲ್ಲಿ ಸೇರ್ಪಡೆ ಯಾದಂತೆ ಯಾವುದೇ ದಾಖಲೆ ಯಿರಲಿಲ್ಲ. kmvn ಗೆ ಬರೆದು ಒಂದು e-mail ಬರೆಸಿಕೊಂಡೆ. ಅಲ್ಲಿಗೆ ಎಲ್ಲ ತಯಾರಿ ಮುಗಿದಂತೆ ಆಯಿತು.
ಬೆಂಗಳೂರಿನಿಂದ ದೆಹಲಿಗೆ. ೯. ಜುಲೈ.
ಬೆಳಿಗ್ಗೆ ೭. ೪೫ರ ಜೆಟ್ ಏರ್ವೇಸ್ ನಲ್ಲಿ ನನ್ನ ಟಿಕೆಟ್.ನನ್ನ ಅಳಿಯ ತುಳಸಿರಾಮ್ ನನ್ನನ್ನು ವಿಮಾನನಿಲ್ದಾಣಕ್ಕೆ ಬಿಟ್ಟು ಹಾಗೇ ಆಫೀಸಿಗೆ ಹೋಗುತ್ತೇನೆಂದರು ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಪೂಜೆ ಸುದರ್ಶನಕ್ರಿಯೆ ಎಲ್ಲ ಮುಗಿಸಿ ತಯಾರಾಗುವಾಗ ಉಷಾ,ತುಳಸಿರಾಮ,ಅವರ ಚಿಕ್ಕಪ್ಪ, ಪ್ರಣವ್,ಎಲ್ಲರೂ ಬಂದು ಶುಭ ಕೋರಿದರು. ಪ್ರಣವ್ ಗೆ ನಾನು ಹೋಗುವುದು ಅಷ್ಟು ಇಷ್ಟವಿಲ್ಲದಿದ್ದರೂ ಮಗು ಪಾಪ ನನ್ನ ಆಸೆಯನ್ನು ಅರ್ಥಮಾಡಿಕೊಂಡು ನನ್ನನ್ನು ಬೀಳ್ಕೊಟ್ಟಿತು.ಶ್ರೀ ರಘುನಾಥ್ ಭಟ್ ಅವರು ದೊಡ್ಡ ಸಾಹಸವನ್ನೇ ಕೈಗೊಂಡಿದ್ದಿ,ದೇವರು ಒಳ್ಳೆಯದನ್ನು ಮಾಡಲಿ ಎಂದು ಹರಸಿದರು.ದೇವರಿಗೆ ಬಾರಿ ಬಾರಿಗೂ ನಮಿಸಿ ನನ್ನ ಪತಿಗೂ ನಮಸ್ಕರಿಸಿ ಓಂ ನಮಃ ಶಿವಾಯಎಂಬ ಮಂತ್ರದೊಂದಿಗೆ ಹೊರಟೆ.ತುಳಸಿರಾಮ್ ವಿಮಾನನಿಲ್ದಾಣದ ಬಾಗಿಲಿನತನಕ ಬಂದು ಬೀಳ್ಕೊಟ್ಟರು.ಅವರಿಗೆ ಥ್ಯಾಂಕ್ಸ್ ಹೇಳಲು ಮರೆತೆ,ಅಷ್ಟು ಆತಂಕ.ಇಷ್ಟೆಲ್ಲಾ ಏಕೆಂದರೆ ೨೦೦೫ರಲ್ಲಿ ನಾನು ಯಾತ್ರೆ ಕೈಗೊಂಡಾಗ ಕೈಲಾಸದ ಬಗ್ಗೆ ಓದಿದ್ದೆಷ್ಟೋ ಅಷ್ಟೇ. ಹೋಗಿಬಂದವರು ಅದರ ಬಗ್ಗೆ ಹೆದರಿಸಿದ್ದರಷ್ಟೇ ಹೊರತು ಯಾರೂ ಪ್ರೋತ್ಸಾಹ ಕೊಟ್ಟಿರಲಿಲ್ಲ. ಅಂತೂ ಬಾಗ್ಸ್ ಚೆಕ್ಕಿನ್ ಮಾಡಿ ಡೆಲ್ಲಿ ತಲುಪಿದಾಗ ೧೦.೨೦.ಪ್ರಿಪೇಯ್ಡ್ ಟ್ಯಾಕ್ಸಿ ಗೊತ್ತುಮಾಡಿಕೊಂಡು ಗುಜರಾತಿ ಭವನ ತಲುಪಿದೆ.೨೦kg ಹೊತ್ತುಕೊಂಡು ವಿಚಾರಣೆಯಲ್ಲಿ ನನ್ನ ಗುರುತಿನ ಚೀಟಿ ತೋರಿಸಿ ರೂಂ ನಂ೫ ತಲುಪಿದಾಗ ಮಧ್ಯಾಹ್ನ ೧ ಗಂಟೆ.ರೂಂ ಪರವಾಗಿಲ್ಲ ಕ್ಲೀನ್ ಆಗೇ ಇತ್ತು.ಮನೆಗೆ ಫೋನ್ ಮಾಡಿ ಸುಖವಾಗಿ ತಲುಪಿದ ಸುದ್ದಿ ಮುಟ್ಟಿಸಿದೆ.
ಮೂರನೇ ಬ್ಯಾಚ್ ನ ಯಾತ್ರಿಗಳು ಹಿಂದಿನ ರಾತ್ರಿಯಷ್ಟೇ ವಾಪಾಸ್ ಬಂದಿದ್ದರು.ಅವರನ್ನೆಲ್ಲ ಮಾತನಾಡಿಸಿ ಅವರ ಅನುಭವಗಳನ್ನು ಕೇಳಿಕೊಂಡೆ.ಚಡ್ಡ ದಂಪತಿ ರೂಂ ಖಾಲಿಮಾಡಿದ್ದರಿಂದ ತಮ್ಮ ಲಗೇಜ್ ಅನ್ನು ನನ್ನ ರೂಮ್ನಲ್ಲಿ ಇಟ್ಟುಕೊಂಡು ಕುಳಿತರು.ಹೀಗಾಗಿ ಸ್ವಲ್ಪ ನಿದ್ರೆ ಮಾಡುವ ಆಸೆ ಕೈಗೂಡಲಿಲ್ಲ.aircooler ಇದ್ದರೂ ಸೆಖೆ ಇತ್ತು.ಸಂಜೆ ಮುಖ ತೊಳೆದುಕೊಂಡು ಬಟ್ಟೆ ಬದಲಿಸಿ ಲಾಬಿ ಯಲ್ಲಿ ಕುಳಿತು ಮತ್ತೆ ಮೂರನೇ ಬ್ಯಾಚ್ ನವರಿಂದಿಗೆ ವಿಚಾರವಿನಿಮಯ ಆಯಿತು.ಒಬ್ಬರು ಕುದುರೆ ಕೂಲಿ ಎರಡೂ ಮಾಡದೇ ತಮ್ಮ ಲಗೇಜ್ ಹೊತ್ತುಕೊಂಡು ಯಾತ್ರೆಮಾ
ಡಿ ಬಂದಿದ್ದರು. ಅಷ್ಟಪಾದದಿಂದ ಹಿಂದಿರುಗುವಾಗ ಇದ್ದಕ್ಕಿದ್ದಂತೆ ವಾತಾವರಣ ಕೆಟ್ಟು ಎಲ್ಲರೂ ಧಾವಿಸಿ ಬರುವಾಗ ಮಹಿಳೆ ಒಬ್ಬರು ಇಳಿಯಲಾರದೆ ಕಷ್ಟ ಪಡುತ್ತಿದ್ದಾಗ ಎಲ್ಲಿಂದಲೋ ಲಾಮ ಒಬ್ಬರು ಬಂದು ಒಂದು ಗಂಟೆಯ ದಾರಿಯನ್ನು ೧೦ನಿಮಿಷದಲ್ಲಿ ಕ್ರಮಿಸಿ ಸುರಕ್ಷಿತವಾಗಿ ಕೆಳಕ್ಕೆ ತಲುಪಿಸಿದ ವಿಚಾರ ಹೇಳಿದರು.ಅಕಸ್ಮಾತ್ತಾಗಿ ಅವರ ಅಂಗೈ ಕಂಡಾಗ ಒಂದೂ ರೇಖೆ ಇರಲಿಲ್ಲವಂತೆ. ಎವರಸ್ಟ್ ಬೇಸ್ ಕ್ಯಾಂಪ್ ತನಕ ಹೋಗಿಬಂದವರು ಅವರು.ಹೀಗೇ ಅನೇಕ ರೋಚಕ ಘಟನೆಗಳ ಬಗ್ಗೆ ಮಾತನಾಡಿದೆವು.ನಂತರ ಕೃಷ್ಣಣ್ಣನ ಮನೆಗೆ ಫೋನ್ ಮಾಡಿದೆ.ಅವರು ಬೆಳಿಗ್ಗೆಯಿಂದ ನನ್ನ ಫೋನ್ ದಾರಿಕಾಯುತ್ತಿದ್ದರಂತೆ. ಈಗಿನಂತೆ ಸೆಲ್ ಫೋನ್ ಅಷ್ಟು ಇರಲಿಲ್ಲ ಆದ್ದರಿಂದ ಅವರಿಗೆ ಆತಂಕವಾಗಿತ್ತು. ಮರುದಿನ ನನ್ನನ್ನು ನೋಡಲು ಬರುವುದಾಗಿ ಹೇಳಿದರು. ಕ್ಯಾಂಟೀನ್ ನಲ್ಲಿ ಊಟ ಮಾಡಿ ಮಲಗಿದಾಗ ೧೦. ೩೦. ಆಗಿತ್ತು.
ಆರೋಗ್ಯ ತಪಾಸಣೆ. ೧೦. ೭. ೨೦೦೫.
ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಬಾತ್ರಆಸ್ಪತ್ರೆಗೆ ಹೊರಟೆವು.ಗುಜರಾತಿನ ಹರ್ಷಿನ ಮೆಹ್ತ ಎಂಬುವರು ನನ್ನ ರೂಂ ಮೇಟ್. ಮುಂದೆ ಯಾವಾಗಲೂ ಅವರೇ ನನ್ನ ರೂಂ ಮೇಟ್. kmvn ನವರ ಬಸ್ನಲ್ಲಿ ಆಸ್ಪತ್ರೆಗೆ ಹೋಗುವಾಗ ಎಲ್ಲರೂ ಪರಸ್ಪರ ಪರಿಚಯ ಮಾಡಿಕೊಂಡೆವು. ಹೆಚ್ಚಿನವರು ಗುಜರಾತಿಗಳು.೫ ಜನ ಮಹಾರಾಷ್ಟ್ರದವರು.ತಮಿಳುನಾಡಿನಿಂದ ೩ ಜನ.ಕೇರಳ ಆಂಧ್ರ ೦. ಕರ್ನಾಟಕದಿಂದ ನಾನೊಬ್ಬಳೆ.
ಆಸ್ಪತ್ರೆಯಲ್ಲಿ ಹಿರಿಯ ಡಾಕ್ಟರ ಒಬ್ಬರು ನಮಗೆ ಎಲ್ಲ ಮಾಹಿತಿಯನ್ನು ಕೊಟ್ಟರು.ಎಲ್ಲರೂ ರಿಜಿಸ್ಟರ್ ಮಾಡಿಸಿ,ಬ್ಲಡ್ ಯೂರಿನ್ ಸ್ಯಾಂಪಲ್ ಕೊಟ್ಟು tmt ಟೆಸ್ಟ್ ಮುಗಿಸಿದಾಗ ೧೧. ೩೦. ರುಚಿಕರವಾದ ಉಪಾಹಾರವಾಯಿತು. ಆಗ ಕೊಡಗಿನಿಂದ ಬಂದ ನಾಲ್ಕು ಸ್ನೇಹಿತೆಯರ ಪರಿಚಯವಾಯಿತು. ಆಶಾ ಉಷಾ ಸುಧಾ ರಾಣಿ, ಎಲ್ಲರೊಂದಿಗೆ ಸಂತೋಷದಿಂದ ಕನ್ನಡ ಮಾತನಾಡಿದೆ.
ಸಂಜೆ ಗುಜರಾತಿ ಭವನದಲ್ಲಿ ಮೀಟಿಂಗ್ ಇದೆ,ಹಿಂಭಾಗದ ಮೈದಾನಕ್ಕೆ ಬನ್ನಿ ಎಂಬ ಕರೆ ಬಂದಿತು.ಯಾರೋ ಮಾರ್ಕೆಟಿಂಗ್ ನವರು ಇರಬೇಕೆಂದುಕೊಂಡೆ.ಆದರೆ ಆಮೇಲೆ ಗೊತ್ತಾಯಿತು.ಅವರು ಕೈಲಾಸ ಯಾತ್ರಿಗಳ ಸೇವೆಗಾಗಿ ಬಂದವರು.ಹೋಗಿಬಂದವರೊಬ್ಬರು ತುಂಬಾ ಮಾಹಿತಿಗಳನ್ನು ಕೊಟ್ಟರು. ಯಾತ್ರೆ ಹೇಗೆ ಆದೀತೆಂಬ ಚಿಂತೆ ಬಿಡಿ. ಆ ಚಿಂತೆಯನ್ನು ಇಲ್ಲಿಯವರೆಗೆ ಕರೆಸಿಕೊಂಡವನಿಗೆ ಬಿಟ್ಟು ಶಿವ ಪಾರ್ವತಿಯರು ಯಾವ ರೂಪದಲ್ಲಿ ದರ್ಶನ ಕೊಟ್ಟಾರು ಎಂಬ ಬಗ್ಗೆ ಚಿಂತಿಸಿ ಎಂದರು. ಅವರ ಹೆಂಡತಿ ಮಕ್ಕಳು ಎಲ್ಲರಿಗೂ ಕುಡಿಯಲು ನೀರು,ಜ್ಯೂಸು ಕೊಟ್ಟರು. ಎಲ್ಲರಿಗೂ ಪ್ಲಾಸ್ಟಿಕ್ ಬ್ಯಾಗ್ ಗಳು ಊರುಗೋಲು ಮುಂತಾದವನ್ನು ಕೊಟ್ಟರು. ತಾಯಿ ಮಗ ಸೊಸೆ,ಮೊಮ್ಮಕ್ಕಳು ಎಲ್ಲರೂ ತುಂಬಾ ಉಪಚಾರ ಮಾಡಿ ಊಟ ಬಡಿಸಿ ಹಾರ್ದಿಕವಾಗಿ ಬಿಳ್ಕೊಟ್ಟರು. ಅವರದೊಂದು ಫೋಟೋ ತೆಗೆದುಕೊಳ್ಳಲಿಲ್ಲವಲ್ಲಾ ಎಂದು ಈಗ ಬೇಜಾರಾಗುತ್ತಿದೆ. ಕೈಲಾಸ ಯಾತ್ರಿಗಳಿಗೆ ಸಲ್ಲುವ ಗೌರವ ಎಂತಹುದು ಎಂದು ಅನುಭವ ಆಗುತ್ತಿತ್ತು. ರಾತ್ರಿ ಅರುಣ ಸೋನಿ ಇಬ್ಬರು ಫೋನ್ ನಲ್ಲಿ ಶುಭ ಕೋರಿದರು.೩ನೇ ಬ್ಯಾಚ್ ನ ಯಾತ್ರಿ ಒಬ್ಬರು ಮಾನಸಸರೋವರದಲ್ಲಿ ರಾತ್ರಿ ೩ ಗಂಟೆಗೆ ಕಾಲಭೈರವನ ಆರತಿ ಯನ್ನು ನೋಡಿದರಂತೆ. ಎಲ್ಲರನ್ನು ಎಬ್ಬಿಸಿ ತೋರಿಸಿದರಂತೆ. ಅಂತೂ ನಮ್ಮ ನಿರೀಕ್ಷೆ ಕುತೂಹಲ ದ್ವಿಗುಣ ಗೊಂಡಿತು.
ಮಕ್ಕಳೆಲ್ಲರ ಪ್ರೀತಿಯನ್ನು ಯಾತ್ರೆ ಗಾಗಿ ಸಹಕರಿಸಿದ ರೀತಿಯನ್ನು ನೆನೆಯುತ್ತ ಮೆಹ್ತಾ ಅವರೊಂದಿಗೆ ಮಾತನಾಡುತ್ತಾ ಮಲಗಿದೆ. ಯಾವಾಗಲೋ ನಿದ್ದೆಗೆ ಜಾರಿದೆ.
ಆರೋಗ್ಯ ತಪಾಸಣೆಯಲ್ಲಿ ಪಾರು. ಹೊರಡುವ ತಯಾರಿ. ೧೧. ೭. ೨೦೦೫.
ಎಂದಿನಂತೆ ಬೆಳಿಗ್ಗೆ ೫ಕ್ಕೆ ಎದ್ದು ಸುದರ್ಶನ ಕ್ರಿಯೆ ಧ್ಯಾನಾದಿಗಳನ್ನು ಮುಗಿಸಿ ೭. ೩೦.ಕ್ಕೆ ರೆಡಿ ಆದೆವು. ITBP ಆಸ್ಪತ್ರೆಯಲ್ಲಿ ಆರ್ಮಿ ಡಾಕ್ಟರ ಒಬ್ಬರು ಎತ್ತರದ ಪರ್ವತಗಳಲ್ಲಿ ನಾವು ತೆಗೆದುಕೊಳ್ಳಬೇಕಾದ ಮುಂಜಾಗ್ರತೆಗಳ ಬಗ್ಗೆ ತಿಳಿಸಿಕೊಟ್ಟರು.ಒಟ್ಟು ೩೭ಜನ ನಾವು ನಮ್ಮ ರಿಪೋರ್ಟ್ ಗಳೊಂದಿಗೆ ಕಾಯುತ್ತಿದ್ದೆವು. ನನ್ನ ರಿಪೋರ್ಟ್ ಎಲ್ಲ ಸರಿಇದ್ದರಿಂದ ಯಾವುದೆ ತೊಂದರೆ ಇಲ್ಲದೆ ಆರಿಸಿದರು.೯ ಜನರನ್ನು ಮರು ತಪಾಸಣೆಗೆ ಕಳಿಸಿದರು. ಅವರಲ್ಲೂ ೫ ಜನರು ಪಾರಾದರು. ದಿನು ಕಾಕ ಎಂಬ ವೃದ್ಧರನ್ನು ನಪಾಸು ಎಂದರು.ಅವರ ಕಣ್ಣುಗಳು ತುಂಬಿಬಂದವು.
ಈಗ ನಾವು ನಮ್ಮ ತಂಡದ LO ಶ್ರೀ ಅತುಲ್ ಕರ್ವಾಲ್ಅವರನ್ನು ಭೇಟಿಯಾದೆವು.ಅವರ ನಗುಮುಖ, ವ್ಯಕ್ತಿತ್ವ ಎಲ್ಲರಿಗೂ ಇಷ್ಟವಾಯಿತು. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಭದ್ರತಾ ಮುಖ್ಯಸ್ತರಾಗಿದ್ದ ಐಪಿಎಸ್ ಆಫೀಸರ್.ಅವರ ಪತ್ನಿ ಐಎಎಸ್,ಅಹ್ಮದಾಬಾದ್ ನಲ್ಲಿ ಜಿಲ್ಲಾ ಕಲೆಕ್ಟರ್. ಎರಡು ಮಕ್ಕಳಂತೆ. ತುಂಬಾ ಒಳ್ಳೆಯ ಮಾತುಗಾರ.
ರಾತ್ರಿ ಯಾತ್ರಾ ವಿಕಾಸ ಸಮಿತಿ ಯವರು ಒಳ್ಳೆಯ ಊಟ ಬಡಿಸಿದರು.ಎಲ್ಲರಿಗೂ ಒಂದೊಂದು ಬೆಲ್ಟ್ ಪೌಚ್ ಕೊಟ್ಟರು.ಸೋಪ್,ರಸ್ನ,ಕಾಫಿ ಪ್ಯಾಕೆಟ್ಗಳಲ್ಲದೆ ಸೂಜಿದಾರ,ಹಾಜ್ಮೊಲ,ಕರ್ಪೂರ,ಜಲಜೀರ,ಟೈಗರ್ ಬಾಮ್ ಮೊದಲ್ಗೊಂಡು ಸುಮಾರು ೫೦ ವಸ್ತುಗಳಿದ್ದವು. ಟಿಬೆಟ್ ನಲ್ಲಿ ೯ ದಿನದ ವಾಸ್ತವ್ಯದಲ್ಲಿ ಅಡಿಗೆಗೆ ಬೇಕಾದ ಸಮಸ್ತ ಸಾಮಗ್ರಿ ಗಳನ್ನೂ ಕೊಟ್ಟಿದ್ದಲ್ಲದೆ ೨ ಬ್ಯಾಗ್ ತುಂಬಾ ಔಷಧ ಸಾಮಗ್ರಿಗಳನ್ನೂ ಕೊಟ್ಟರು.ನಮ್ಮ ತಂಡದಲ್ಲಿ ತಮಿಳು ನಾಡಿನವರೋಬ್ಬರು ದೆಹಲಿಯವರೊಬ್ಬರು ಡಾಕ್ಟರ್ ಗಳಿದ್ದರು. ಈಗ ಎಲ್ಲರೂ ಮತ್ತೊಮ್ಮೆ ತಮ್ಮ ತಮ್ಮ ಪರಿಚಯ ಮಾಡಿಕೊಟ್ಟರು. ಯಾತ್ರಾ ಸಮಿತಿ ಯವರು,ಎಂತಹುದೇ ತುರ್ತು ಪರಿಸ್ಥಿತಿಯಲ್ಲದರೂ ಫೋನ್ ಮಾಡಿದರೆ ಸಹಾಯ ಒದಗಿಸುವುದಾಗಿ ಆಶ್ವಾಸನೆ ಕೊಟ್ಟರು.ಎಲ್ಲರಿಗೂ ಮಾಲೆ ಹಾಕಿ ಸತ್ಕರಿಸಿದರು. ಮತ್ತೆ ಕೆಳಗಡೆ ಕಾರಿನಲ್ಲಿ ಯಾತ್ರಿಗಳಿಗೆ ಅಗತ್ಯ ಬೀಳಬಹುದಾದ ಎಲ್ಲ ವಸ್ತುಗಳಿವೆ. ಬೇಕಾದವರು ತೆಗೆದುಕೊಳ್ಳಿ ಎಂದರು.ವೂಲೆನ್ ಸಾಕ್ಸ್, ಗ್ಲೌಸ್,kneeಕ್ಯಾಪ್ಸ್,ತಂಪು ಕನ್ನಡಕಗಳು, thermal wear,ಟೀ ಶರ್ಟ್ ಹೀಗೆ ಎಲ್ಲವನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಕೊಟ್ಟರು. ಕೊನೆಯಲ್ಲಿ ನಮ್ಮ ಅತುಲ್ ಕರ್ವಾಲ್ ಅವರು ಯಾತ್ರಿಗಳ ಲಿಸ್ಟ್ ಓದುವಾಗ ದಿನುಕಾಕ ಕೂಡ ಆಯ್ಕೆಯಾದ ವಿಚಾರ ತಿಳಿದು ಎಲ್ಲರೂ ಸಂತೋಷ ಪಟ್ಟೆವು. ಸಂಜೆಯ ೬ ಗಂಟೆ ಆಗಿತ್ತು. ಅಲ್ಲಿಂದ ಅಶೋಕ ಹೋಟೆಲ್ ಗೆ ಹೋಗಿ ನಮಗೆ ಬೇಕಾದ ವಿದೇಶಿವಿನಿಮಯ ಕೊಂಡು ಗುಜರಾತಿ ಭವನಕ್ಕೆ ಬಂದಾಗ ೯ ಗಂಟೆ. ಮನೆಗೆ ಫೋನ್ ಮಾಡಿದೆ. ಎಲ್ಲರೂ ಆಯ್ಕೆಆದ ವಿಷಯತಿಳಿದು ಅಭಿನಂದಿಸಿದರು. ಊಟ ಮುಗಿಸಿ ಮಲಗಿದರೆ ಸುಸ್ತೋ ಸುಸ್ತು!
ಕೊನೆಯ ಹಂತದ ತಯಾರಿ. ಜುಲೈ ೧೨.
ಇಂದು ನಮಗೆ ಭಾರತ ಸರ್ಕಾರದ ವಿದೇಶ ಮಂತ್ರಾಲಯದ ಹಾಲ್ ನಲ್ಲಿ ಕಾಫಿ ಬಿಸ್ಕೆಟ್ ಗಳೊಂದಿಗೆ ಕೈಲಾಸ ಚಾರಣದ ಒಂದು c.d. ತೋರಿಸಿದರು.KMVN ನ ಜೋಷಿ, ಕೀರ್ತಿ,ರಾಜಕುಮಾರ್ ಎಲ್ಲರ ಪರಿಚಯ ವಾಯಿತು.ವಿದೇಶ ಮಂತ್ರಾಲಯದ ಕಾರ್ಯದರ್ಶಿ ಅವರು ನಾವು ಟಿಬೆಟ್ ನಲ್ಲಿ ನಡೆದುಕೊಳ್ಳಬೇಕಾದ ರೀತಿ ನೀತಿ ಗಳ ಬಗ್ಗೆ ತಿಳಿಸಿದರು.
ಇನ್ನು ಮುಂದೆ ನಮ್ಮ ತಂಡದ ಮುಂದಾಳತ್ವವನ್ನು ಅತುಲ್ ಕರ್ವಾಲ್ ಅವರಿಗೆ ವಹಿಸಿ ಕೊಟ್ಟರು. ಅವರು ನಮ್ಮನ್ನು ಲಗೇಜ್ ವಿಭಾಗ, ಆಹಾರ ವಿಭಾಗ, ಮನರಂಜನಾ ವಿಭಾಗ ಎಂದೆಲ್ಲ ವಿಂಗಡಿಸಿ ಅವರಿಗೆಲ್ಲ ಅವರವರ ಜವಾಬ್ದಾರಿಯನ್ನು ವಹಿಸಿ ಕೊಟ್ಟರು. KMVN [ಕುಮವೂ ಮಂಡಲ ವಿಕಾಸ ನಿಗಮ್]ಗೆ ಕೊಡಬೇಕಾದ ೧೦,೦೦೦ರೂಗಳನ್ನೂ ಕೊಟ್ಟಿದ್ಡಾಯಿತು.ಅವರೇ ಈ ಯಾತ್ರೆಯಲ್ಲಿ ನಮ್ಮ ಸಮಸ್ತ ಅಗತ್ಯಗಳನ್ನು ಪೂರೈಸುವವರು. ಕಾಮನ್ ಫಂಡ್ ಎಂದು ಎಲ್ಲರೂ ೨೦೦೦/ರೂಗಳನ್ನೂ ಕೊಟ್ಟೆವು.ಎಲ್ಲರ ಪಾಸ್ಪೋರ್ಟ್ ಚೀನಾದ ಸ್ಟಾಂಪಿಂಗ್ ನೊಂದಿಗೆ ಬಂತು. ಅಷ್ಟು ಹೊತ್ತಿಗೆ ಬೊಂಬಾಯಿಯಿಂದ ಬಂದಿದ್ದ ಜ್ಯೋತಿ ಮತ್ತು ಶಿರೀಶ್ ಭಾವೆ ಅವರ ಪರಿಚಯ ವಾಯಿತು. ಇಬ್ಬರೂ ತುಂಬಾ ಚೆನ್ನಾಗಿ ಎಲ್ಲರೊಂದಿಗೆ ಬೆರೆತು ಸಹಾಯ ಮಾಡುತ್ತಿದ್ದರು. ನಾನೂ ಸಹ ಮರೆತ ಒಂದೆರಡು ಸಾಮಾನನ್ನು ಅವರ ಹತ್ತಿರವೇ ತರಿಸಿಕೊಂಡೆ. ಗುಜರಾತಿ ಭವನಕ್ಕೆ ಬಂದಾಗ ೧. ೩೦. ಮಧ್ಯಾಹ್ನ ಕೃಷ್ಣಣ್ಣ ಮತ್ತು ವೃಂದ ಬಂದರು.ತುಂಬಾ ವಿಶ್ವಾಸದಿಂದ ಮಾತನಾಡಿಸಿ ಮಿಡಿ ಉಪ್ಪಿನಕಾಯಿ ಕೊಟ್ಟು ಅಭಿನಂದಿಸಿದರು. ನನಗೆ ಅಭಯಹಸ್ತವೆಂದು ಮುಲ್ಕಿ ವೆಂಕಟರಮಣನ ಗಂಧವನ್ನು ಕೊಟ್ಟರು.ಮುಂದೆ ಇಡೀ ಯಾತ್ರೆಯಲ್ಲಿ ಅದು ನನ್ನ ಬೆಲ್ಟ್ ಪೌಚ್ನಲ್ಲೇ ಇದ್ದು ನನ್ನ ಮನೋಬಲವನ್ನು ಹೆಚ್ಚಿಸಿತ್ತು.ಒಂದು ಗಂಟೆಯ ಕಾಲ ಮಾತನಾಡಿ ಟೀ ಕುಡಿದು ಹೊರಟರು.ಹಾರ್ದಿಕವಾಗಿ ವಿದಾಯ ಹೇಳಿ ನಾನು ವಯಸ್ಸಿನಲ್ಲಿ ಚಿಕ್ಕವಳಾದರೂ ಅತ್ತಿಗೆ ಎಂದು ನಮಸ್ಕರಿಸಿ ಬೀಳ್ಕೊಟ್ಟರು.ಕೊನೆಯ ಹಂತದ ಪ್ಯಾಕಿಂಗ್ ಮಾಡಬೇಕಿತ್ತು.ಎಲ್ಲರ ಸಲಹೆ ಕೇಳಿ ಕೇಳಿ ಗಲಿಬಿಲಿ ಹೆಚ್ಹಾಯಿತೆ ಹೊರತು ಕಡಿಮೆ ಆಗಲಿಲ್ಲ.
೮ ಗಂಟೆಗೆ ದೆಹಲಿ ಸರ್ಕಾರದವತಿಯಿಂದ ಯಾತ್ರಿಗಳಿಗೆ ವಿದಾಯ ಸಮಾರಂಭ. ಭಕ್ತಿ ಸಂಗೀತದಿಂದ ಶುರುವಾಯಿತು. ನಮ್ಮ ಯಾತ್ರೆಯ ವರ್ಷ ಕೈಲಾಸ ಯಾತ್ರೆಯ ೨೫ನೆ ವರ್ಷವಾದ್ದರಿಂದ ಎಲ್ಲೆರಿಗೂ ಒಂದೊಂದು ದೊಡ್ಡ ಸೈಜ್ ನ backpack ಕೊಟ್ಟರು.ಪೂಜಾ ಸಾಮಗ್ರಿಗಳ ಬಾಕ್ಸ್ ಕೊಟ್ಟರು.ದೊಡ್ಡ ದೊಡ್ಡ ದುಂಡು ಮಲ್ಲಿಗೆಯ ಹಾ ರ ಹಾಕಿ ಸನ್ಮಾನಿಸಿದರು.ಗುಜರಾತಿನವರೆಲ್ಲ ಹಾಡಿನೊಂದಿಗೆ ಹೆಜ್ಜೆಹಾಕಲು ನಾವು ಅವರೊಂದಿಗೆ ಸೇರಿದೆವು.ಊಟ ಮುಗಿಸಿ ರೂಂ ಸೇರಿದಾಗ ರಾತ್ರಿ ೧೧ ಗಂಟೆ. ಮನೆಗೆ ಫೋನ್ ಮಾಡಿ ವಿದಾಯ ಹೇಳಿದೆ.ಸುಂದರವಾದ ಮಲ್ಲಿಗೆಯ ಹಾರಗಳು ದೇವರ ಪಾದ ಸೇರುವ ಬದಲು ಬಾಡುತ್ತಿದ್ದವು. ಅತುಲ್ ಅವರು ಬೆಳಿಗ್ಗೆ ಎಲ್ಲರೂ ೪. ೩೦ ಕ್ಕೆ ರೆಡಿ ಆಗುವಂತೆ ಹೇಳಿದ್ದರಿಂದ ಬೇಗನ ಏಳಬೇಕೆಂದುಕೊಂಡು ಮಲಗುವಾಗ ೧ ಗಂಟೆ!
ದೆಹಲಿಯಿಂದ ರಾಣೀಖೇತ್. ಜುಲೈ ೧೩.
ಬೆಳಿಗ್ಗೆ ಎಚ್ಚರ ವಾದಾಗ ೪. ೧೫. ಹೌಹಾರಿ ಎದ್ದು ಧಾವಿಸಿದೆ. ನಿನ್ನೆಯೇ L.O.ಟೈಮ್ ಎಂದರೆ ಟೈಮ್.ಎಂದೂ ಮಿಸ್ ಮಾಡುವ ಹಾಗಿಲ್ಲ ಎಂದು ಹೇಳಿದ್ದರು. ಈಗ ೪. ೩೦. ಗೆ ಹೊರಡಬೇಕಿತ್ತು. ಸರಿಯಾಗಿ ೪. ೩೦. L.O. ಎಲ್ಲರ ಬಾಗಿಲು knock ಮಾಡುತ್ತ ಬಂದರು. ಅವರು ಎಲ್ಲೋ ಅವರ ರೂಂ ನಿಂದ ತಯಾರಾಗಿ ಬಂದಿದ್ದರು,ನಾವಿನ್ನೂ ರೆಡಿ ಆಗಿಲ್ಲ.ನಾಚಿಕೆ ಎನ್ನಿಸಿತು. ಏನೊ ಧಾವಂತದಿಂದ ಅಂತು ೫. ೪೫ಕ್ಕೆ ಎಲ್ಲರೂ ತಯಾರಾದೆವು. ನಮ್ಮ ಹೆಚ್ಚಿನ ಸಾಮಾನನ್ನು cloak room ನಲ್ಲಿ ಬಿಟ್ಟುಹೊೊಗಬೇಕಿತ್ತು. ಆದರೆ ಅದು ೬. ೩೦ಕ್ಕೆ ತೆರೆಯುವುದಂತೆ. ಹೀಗಾಗಿ ೧೧ ಬ್ಯಾಗ್ ಗಳನ್ನೂ L.O. ಅವರ ಡ್ರೈವರ್ ಸುಪರ್ದಿಗೆ ಬಿಟ್ಟು ಹೊರಟೆವು.ಕಾಫಿ ಸಿಗಲಿಲ್ಲ.ಬಿಸ್ಕೆಟ್ ಮತ್ತು ನೀರು ಕುಡಿದು ಹೊರಟೆವು.KMVN ನ ಮನಮೋಹನ್ ಜೋಷಿ ಅವರು ನಮ್ಮನ್ನು ಶುಭ ಹಾರೈಸಿ ಬೀಳ್ಕೊಟ್ಟರು.ಓಂ ನಮಃ ಶಿವಾಯ, ಹರಹರ ಮಹದೇವ್,ಕೈಲಾಸಪತಿ ಮಹಾರಾಜ್ ಕೀ ಜೈ ಎಂಬ ಘೋಷಣೆಗಳೊಂದಿಗೆ ಬಸ್ ಚಲಿಸಿತು.ಎಲ್ಲರೂ ತಮ್ಮ ತಮ್ಮ ನಿತ್ಯದ ಸ್ತೋತ್ರಗಳನ್ನು ಹೇಳಿಕೊಳ್ಳುತ್ತಾ ಕುಳಿತೆವು.ಇಂದು ಸುದರ್ಶನ ಕ್ರಿಯೆ ಮಾಡಲಾಗಲಿಲ್ಲ.ಮುಂದೆ ಇಡೀ ಯಾತ್ರೆಯಲ್ಲೂ ಮಾಡಲಿಲ್ಲ.ಸೋಮವಾರ,ಶುಕ್ರವಾರ,ಏಕಾದಶಿ,ಎಲ್ಲವನ್ನು ಬದಿಗಿಟ್ಟು ಊಟ ತಿಂಡಿ ಕೊಟ್ಟಾಗ ಸೇರಿದಷ್ಟು ತಿಂದು ಚಾರಣಕ್ಕೆ ಶಕ್ತಿ ಗಳಿಸಬೇಕೆಂದು ಕೊಂಡೆ.
ಸುಮಾರು ಒಂದು ವರ್ಷದ ಹಂಬಲ ಫಲಿಸುವ ಅವಕಾಶ. ನನ್ನ ಬಹುದಿನದ ಮೊರೆಗೆ ಪರಮೇಶ್ವರನು ಓಗೊಟ್ಟು ಅವಕಾಶ ಕರುಣಿಸಿದ್ದ.ಇದು ನಿಜವಾಗಿಯೂ ಹಿರಿಯರು ಮಾಡಿದ್ದ ಪುಣ್ಯದ ಫಲವೇ ಸೈ ಎಂದುಕೊಂಡೆ. ನನ್ನ ಬೀಗಿತ್ತಿ ಶ್ರೀಮತಿ ಗೀತ ಶೆನೊಯ್ ಅವರಿಗೆ ಯಾತ್ರೆಯಲ್ಲಿ ತುಂಬಾ ಕಷ್ಟವಾಗಿತ್ತಂತೆ. ಸಹಯಾತ್ರಿಗಳ ಅಸಹಕಾರ, ಅಭ್ಯಾಸವಿಲ್ಲದ ಚಳಿಯಿಂದ ತುಂಬಾ ಕಷ್ಟ ಪಟ್ಟರಂತೆ. ಈ ರೂಟ್ ನಲ್ಲಿ ಹೋಗಬಾರದೆಂದು ನನಗೆ ತುಂಬಾ ಸಲ ಹೇಳಿದ್ದರು.ನನ್ನ ಮಕ್ಕಳು ಸೊಸೆಯನ್ದಿರಿಂದಲೂ ಹೇಳಿಸಿದ್ದರು.ಆದರೆ ನೇಪಾಲದ ದಾರಿ ಏಕೋ ನನಗೆ ಇಷ್ಟವಾಗಲಿಲ್ಲ. ಭಾರತ ಸರ್ಕಾರದ ಯಾತ್ರೆಯಲ್ಲಿ ಆಯ್ಕೆ ಆಗದಿದ್ದರೆ ನೋಡೋಣ ಎಂದುಕೊಂಡಿದ್ದೆ. ಬೆಂಗಾವಲಿಗೆ ಶಿವ ಇರುವಾಗ ಭಯ ಏಕೆ? ಶಿವನದಯೆಯಿಂದ ಜೀವನದಲ್ಲಿ ನನ್ನ ಜವಾಬ್ದಾರಿಗಳನ್ನು ನನ್ನ ಶಕ್ತ್ಯಾನುಸಾರ ನಿಭಾಯಿಸಿ ಆಗಿದೆ. ಮಕ್ಕಳೆಲ್ಲಾ settle ಆಗಿದ್ದಾರೆ. ಪತಿಯ ಆರೋಗ್ಯ ಚೆನ್ನಾಗಿದ್ದು ತಮ್ಮನ್ನು ತಾವು ನೋಡಿಕೊಳ್ಳಬಲ್ಲರು.ಮಗಳು ಅಳಿಯ ಹತ್ತಿರದಲ್ಲೆ ಇದ್ದು ಅವರ ಊಟ ತಿಂಡಿ ಮುಂತಾದ ಎಲ್ಲ ಚಿಂತೆಗಳನ್ನು ನೋಡಿಕೊಳ್ಳುತ್ತಾರೆ. ಈಗಲೇ ನನಗೆ ೫೭ ವರ್ಷ ವಯಸ್ಸು. ಮುಂದೆ ನನ್ನ ಆರೋಗ್ಯ ಹೇಗೋ ಏನೋ ಎಂದು ಯಾವ ಚಿಂತೆಯನ್ನೂ ಹಚ್ಚಿಕೊಳ್ಳದೆ ದೇವರ ನಾಮಸ್ಮರಣೆಯೊಂದಿಗೆ ಹೊರಟೇಬಿಟ್ಟಿದ್ದೆ.
ಈ ಯಾತ್ರೆಗೆ ಖರ್ಚು ಜಾಸ್ತಿ. ಉತ್ತರಾಂಚಲ ಸರ್ಕಾರ ಈ ಯಾತ್ರೆಯ ಎಲ್ಲ ಜವಾಬ್ದಾರಿಯನ್ನು ಭಾರತದ ಗಡಿದಾಟುವವರೆಗೆ ಹೊರುತ್ತದೆ. ಅವರಿಗೆ ನಾವು ಕೊಡುವುದು ಕೇವಲ ೧೬,೦೦೦, ೨೦ ದಿನಗಳ ಊಟ ವಸತಿ ಸಾಗಾಟ ಎಲ್ಲ ಸೇರಿ. ಉಳಿದ ಖರ್ಚುಗಳು:
common ಫಂಡ್: ೩೦೦೦.
ಮೆಡಿಕಲ್ ಟೆಸ್ಟ್: ೨೦೦೦.
ಚೀನಾ govt: ೨೬,೦೦೦.
ಪೋರ್ಟರ್ ಕುದುರೆ: ೧೦,೦೦೦.
ಚೀನಾ ದಲ್ಲಿ ಕುದುರೆ: ೪೫೦೦.
ಚೀನಾದಲ್ಲಿ ಪೋರ್ಟರ್: ೭೨೦.
airticket ೭೮೦೦.
ಇತರೆ ಚಿಲ್ಲರೆ ಖರ್ಚು: ೫೦೦೦.
ಹೀಗೆ ಸುಮಾರು ೭೫,೪೨೦/ರೂ.
KMVNಗೆ ಕೊಡುವ ೧೬,೦೦೦ ಖಂಡಿತ ಕಡಿಮೆಯೇ ಸರಿ.ಗುಜರಾತಿ ಭವನ ಸೇರಿದಂದಿನಿಂದ ಮತ್ತೆ ಗುಜರಾತಿ ಭವನ ಬಿಡುವ ವರೆಗೆ ೨೯ದಿನದ [೯ ದಿನ ಟಿಬೆಟ್ ನದ್ದು ಬಿಟ್ಟು] ಊಟ ವಸತಿ ಸಾಗಾಟ ಸಮಸ್ತ ಜವಾಬ್ದಾರಿ ಅವರದ್ದೇ. ಬೆಳಿಗ್ಗೆ ೪. ೩೦.ಕ್ಕೆ ಕ್ಯಾಂಪ್ ಬಿಡುವುದಾದರೆ ೩. ೪೫.ಕ್ಕೆ ಬಂದು ನಮಃ ಶಿವಾಯದೊಂದಿಗೆ ಕಾಫಿ ಟೀ ಹಾಲು ತಂದು ಸುಪ್ರಭಾತ. ಆ ಕೊರೆಯುವ ಚಳಿಯಲ್ಲಿ ಅಷ್ಟು ಬೇಗ ಉಪಾಹಾರ,bournvita ಮಾಡಿ ಕೊಡುತ್ತಿದ್ದರು. ಮೊದಲ ಎರಡುದಿನ ಅವರ ಗೆಸ್ಟ್ ಹೌಸ್ ನಲ್ಲಿ ಒಳ್ಳೆಯ ಊಟ ವಸತಿ ಒದಗಿಸಿದರು. ನಂತರದ ಚಾರಣದ ದಿನಗಳಲ್ಲಿ ನಾವು ಕ್ಯಾಂಪ್ ಸೇರುವಾಗಲೇ ನೀರು ಪಾನಕ ರಸ್ನ, ನಮಃ ಶಿವಾಯದೊಂದಿಗೆ. ರಾತ್ರಿಗೆ ರೋಟಿ ದಾಲ್ ಅನ್ನ ಕಡಿ ಪಲ್ಯ ಮುಂತಾದಂತೆ ಬಿಸಿ ಬಿಸಿ ಅಡಿಗೆ.ಅವರ ಡ್ಯೂಟಿ ಗಿಂತ ಕೈಲಾಸ ಯಾತ್ರಿಗಳ ಸೇವೆ ಎಂಬ ಪ್ರೀತಿ.ITBP ಅವರ ಸೇವೆ ಎಂದೂ ಮರೆಯಲಾರದಂತಹುದು. ಚಾರಣದ ದಿನಗಳಲ್ಲಿ ಉದ್ದಕ್ಕೂ ನಮ್ಮ ವಸತಿ ಅವರ ಕ್ಯಾಂಪ್ ಗಳಲ್ಲಿ.ನಾವು ಹೊರಟಾಗ ನಮ್ಮ ಹಿಂದೆ ಮುಂದೆ ಬಂದೂಕುಧಾರಿಗಳಾಗಿ ನಮಗೆ ರಕ್ಷಣೆ. ದಾರಿಯಲ್ಲಿ ಏರೋ ಕೊರಕಲೋ ಬಂದಾಗ ಕೈ ಹಿಡಿದು ದಾಟಿಸುವುದು. ಕೆಲವುಸಲ ಚಾರಣ ೨೦ ಕಿ.ಮೀ ಗಿಂತ ಹೆಚ್ಚಿದ್ದರೆ ದಾರಿಯಲ್ಲೇ ಟೀ ಚಿಪ್ಸ್ ಕೊಟ್ಟು ಉಪಚಾರ. ಹೀಗೆ ಒಂದೇ ಎರಡೇ? ಅವರ ನಿ:ಸ್ವಾರ್ಥ ಸೇವೆಯ ಬಗ್ಗೆ ಹೇಳಬೇಕೆಂದರೆ ITBP ಯಿಲ್ಲವದರೆ ಈ ಯಾತ್ರೆಯೇ ಅಸಾಧ್ಯ ಎನ್ನಬಹುದು. ಮೇ ತಿಂಗಳಲ್ಲಿ ಮೊದಲ ತಂಡದ ಯಾತ್ರೆ ಪ್ರಾರಂಭವಾದಾಗ ಲಿಪು ಪಾಸ್ ನಲ್ಲಿ ಮೈಲುಗಟ್ಟಲೆ ಬರ್ಫ಼ಯಿತ್ತಂತೆ.ಎಷ್ಟೋ ಯಾತ್ರಿಗಳನ್ನು ಭುಜದ ಮೇಲೆ ಹೊತ್ತು ದಾಟಿಸಿದರಂತೆ! ೧೭,೦೦೦ ಅಡಿ ಎತ್ತರ,ಕೊರೆಯುವ ಚಳಿ, ಆಮ್ಲಜನಕದ ಕೊರತೆ,ಮೇಲಿನಿಂದ ಬೀಳುವ ಬರ್ಫ಼, ಯಾತ್ರಿಗಳನ್ನು ಧಾರ್ಚುಲ ದಿಂದ ಲಿಪುವರಗೆ ಮತ್ತೆ ಲಿಪುನಿಂದ ಧಾರ್ಚುಲ ವರೆಗೆ ತಲುಪಿಸುವ ಅವರ ಸೇವೆ ಅನುಪಮ ಎನ್ನಬೇಕು. ITBP ಜಿಂದಾಬಾದ್!
ಈಗ ನಾವು ದೆಹಲಿ ಬಿಟ್ಟವರು ೯ಗಂಟೆಗೆ ಯಾವುದೊ ಚಿಕ್ಕ ಊರಿನಲ್ಲಿ ಆಲೂ ಪರಾಠ ಮತ್ತು ಮೊಸರಿನ ಉಪಾಹಾರ ಮುಗಿಸಿ ಮಧಾಹ್ನ ೧ ಗಂಟೆಗೆ ಕಾಟಗೋಧಾಮ್ ತಲುಪಿದೆವು.ಗೆಸ್ಟ್ ಹೌಸ್ ನಲ್ಲಿ ಒಳ್ಳೆಯ ಊಟ ಮಾಡಿದೆವು. ಮುಂದಿನ ದಾರಿ ಇಕ್ಕಟ್ಟಾದ ಬೆಟ್ಟ ಗುಡ್ಡಗಳ ದಾರಿ. ಆದ್ದರಿಂದ ದೊಡ್ಡ ಬಸ್ ಗೆ ಬದಲಾಗಿ ಎರಡು ಚಿಕ್ಕ ಬಸ್ ಹತ್ತಿದೆವು.
ಪರ್ವತದ ನಡುವಿನ ಇಕ್ಕಟ್ಟಾದ ಅಂಕು ಡೊಂಕಿನ ದಾರಿ, ಬಸ್ ನಿಧಾನವಾಗಿ ಸಾಗಿತು. ಇಷ್ಟು ಹೊತ್ತಿಗೆ ಯಾತ್ರಿಗಳೆಲ್ಲ ಸ್ನೇಹಿತರಾಗಿ ಬಿಟ್ಟಿದ್ದೆವು. ದಾರಿಯಲ್ಲಿ ಒಂದು ದೇವಸ್ಥಾನ, ಆಶ್ರಮ,ನೀಮ್ ಕರೋಲಿಬಾಬಾ ಅವರ ಸಮಾಧಿ ಸಿಕ್ಕಿತು. ಬಾಬಾ ಸಿದ್ಧರೆಂದೂ ಆಂಜನೇಯನಿಗೆ ಹಾಲು ಕುಡಿಸಿದ್ದರೆಂದೂ ಸ್ಥಳೀಯರು ತಿಳಿಸಿದರು.ಟೀ ಕುಡಿದು ಮತ್ತೆ ಬಸ್ ಹತ್ತಿದೆವು. ಸಂಜೆಯ ೬ಗಂಟೆಗೆ ರಾನಿಖೆತ್ ತಲುಪಿದೆವು. ಪಕೋಡ ಮತ್ತು ಮಸಾಲಾ ಟೀ ಆಯಿತು. ಹಿಮಾಲಯದ ತಪ್ಪಲಿನ ಪುಟ್ಟ ಗ್ರಾಮದ ಸಂಜೆಯ ಸೊಬಗಿನೊಂದಿಗೆ ಟೀ ಯನ್ನು ಮೌನ ವಾಗಿ ಆಸ್ವಾದಿಸಿದೆವು. ನಂತರ ೧-೨ ಕಿ.ಮೀ.ನಡೆದು ಸ್ವಲ್ಪ ಎತ್ತರದಲ್ಲಿದ್ದ ಜ್ಹೂಲಾದೆeವಿ ದೇವಸ್ಥಾನಕ್ಕೆ ಹೋದೆವು. ಹರಕೆಗಾಗಿ ಕಟ್ಟಿದ್ದ ಸಾವಿರಾರು ಘಂಟೆಗಳು ಚಿಕ್ಕವು ದೊಡ್ಡವು,ಎಲ್ಲಾಥರದವು. ದೇವಿಯ ದರ್ಶನ ಮಾಡಿದೆವು. ಹೊರಗಡೆ ಪುಟ್ಟ ಪುಟ್ಟ ಮನೆಗಳು. ಒಂದು ಮನೆಯ ಮುಂದೆ ಕುಂಡಗಳಲ್ಲಿ ಕೆಂಪು ಹಳದಿ ಗುಲಾಬಿ ಹೂ ಗಳು. ಎಷ್ಟು ಸುಂದರವಾ ಗಿದ್ದವೆಂದರೆ ಮುಟ್ಟಿ ನೋಡಿ ಪ್ಲಾಸ್ಟಿಕ್ ಅಲ್ಲವೆಂದು ಖಚಿತ ಪಡಿಸಿಕೊಳ್ಳಬೇಕಾಯಿತು.ಅಲ್ಲದೆ ಪುಟ್ಟ ಹುಡುಗಿ ಯೊ ಬ್ಬಳಿಂದ ನಹಿ ನಹಿ ಫೂಲ್ ಮತ್ ತೊಡಿಯೇ ಎನಿಸಿಕೊಳ್ಳಬೇಕಾಯಿತು. ತುಂಬಾ ಸುಂದರವಾದ ಸಂಜೆ. ಪೆರ್ವತದ ಮಡಿಲಿನಲ್ಲಿ ನಿದ್ರಿಸುತ್ತಿದ್ದಂತಹ ಪುಟ್ಟ ಊರು. ಇನ್ನೂ ಸ್ವಲ್ಪ ಮೇಲೆ ಹೋದರೆ ಸೇನೆಯ cantonment ಇದೆ.
ರಾತ್ರಿ ಊಟವಾದಮೇಲೆ L.O.ನಮ್ಮನ್ನೆಲ್ಲ ಸಭೆ ಸೇರಿಸಿದರು. ಯಾರಿಗೆ ಕುದುರೆ ಯಾರಿಗೆ ಪೋರ್ಟರ್ ಎಂದು ಲಿಸ್ಟ್ ಮಾಡಿದರು. ನಾನು ಕುದುರೆ ಮಾತ್ರ ಸಾಕು ಎಂದು ಕೊಂಡಿದ್ದೆ. ಆದರೆ L.O. ಮಾತ್ರ ನಮ್ಮಂತೆ ಸ್ವಲ್ಪ ವಯಸ್ಸಾದವರು ಕುದುರೆ ಪೋರ್ಟರ್ ಎರಡೂ ತೆಗೆದುಕೊಳ್ಳಬೇಕೆನ್ದರು. ಮುಂದೆ ಬೇಕೆಂದರೆ ಸಿಗದೇ ಹೋಗಬಹುದು ಎಂದರು.ಸರಿ ನಾನು ಕುದುರೆ ಪೋರ್ಟರ್ ಎರಡನ್ನೂ ತೆಗೆದುಕೊಂಡೆ.ಒಟ್ಟು ೩೪ ಯಾತ್ರಿಗಳಲ್ಲಿ, ೨೨ ಪೋರ್ಟರ್ ೧೯ ಕುದುರೆಎಂದಾಯಿತು. ನಂತರ ಮನೆಗೆ ಫೋನ್ ಮಾಡೋಣ ಎಂದು ಹೊರಟೆ. ಓಝ ದಂಪತಿ ಫೋನ್ ಮಾಡಲು ಹೋಗಿದ್ದರು.STD ಬೂತ್ ಸ್ವಲ್ಪ ದೂರದಲ್ಲಿದೆ, ನಾನೂ ಜೊತೆಗೆ ಬರುತ್ತೇನೆ ಎಂದು ಸೋಲಂಕಿ ಅವರು ಕರೆದುಕೊಂಡು ಹೊರಟರು.ಅರ್ಧ ದಾರಿ ಬಂದನಂತರ ನೋಡಿದರೆ ಕಾರ್ಗತ್ತಲು. ಟಾರ್ಚ್ ಸಹ ತಂದಿಲ್ಲ.ದಾರಿ ತಪ್ಪಿತು.ಅಷ್ಟರಲ್ಲಿ ಬಿಹಾರದಿಂದ ಬಂದಿದ್ದ ರವಿಂದ್ರ ಸಿಂಗ್ ಸಿಕ್ಕಿದರು.ಧೈರ್ಯ ಹೇಳಿ ಕರೆದುಕೊಂಡು ಹೋದರು.ನನ್ನ ಪತಿಗೆ ಮತ್ತು ಮಗಳಿಗೆ ಫೋನ್ ಮಾಡಿ ಗೆಸ್ಟ್ ಹೌಸ್ ಸೇರಿದಾಗ ೧೦. ೩೦. ಕಣ್ಣು ಸೆಳೆಯುತ್ತಾಯಿತ್ತು.
ರಾನಿಖೆತ್ ನಲ್ಲಿ ಸನ್ಮಾನ. ಧಾರ್ಚುಲಾ ತನಕ ಪ್ರಯಾಣ. ಜುಲೈ ೧೫.
ಈ ರಾನಿಖೇತ ಎಂಬ ಪುಟ್ಟ ಊರು ಅತ್ಯಂತ ಸುಂದರ ಎಂದರೆ ಏನೂ ಹೇಳಿದಂತಾಗುವುದಿಲ್ಲ. ಮುಂಜಾನೆಯ ಮಂಜಿನಲ್ಲಿ ನೆನೆದ ಪ್ರಕೃತಿಯ ಸೊಬಗು ವರ್ಣನೆಗೆ ಸಿಗುವಂತಹುದಲ್ಲ.ಬೇಂದ್ರೆ ಅವರ ಮೂಡಲ ಮನೆಯ ಮುತ್ತಿನ ನೀರಿನ ನೆನಪಾಯಿತು.ಆದರೆ ಸೌಂದರ್ಯ ಸವಿಯಲು ಸಮಯ ಇರಲಿಲ್ಲ.ಬೆಳಗಿನ ಕಾರ್ಯಕ್ರಮಗಳನ್ನು ಮುಗಿಸಿ ತಯಾರಾದೆವು.
ಸಾಮಾನ್ಯವಾಗಿ ಕೈಲಾಸ ಯಾತ್ರಿಗಳ ತಂಡ ೪೦km ಹಿಂದೆಯೇ ಸಿಗುವ ಭೀಮತಾಲ್ನಲ್ಲಿ ಉಳಿಯುವುದು.ಭಾರತ ಚೀನಾ ಯುದ್ಧದ ನಂತರ ಸ್ಥಗಿತಗೊಂಡ ಯಾತ್ರೆ ಮತ್ತೆ ಪ್ರಾರಂಭವಾಗಿದ್ದು ೧೯೮೧ರಲ್ಲಿ.ಈ ೨೫ ವರ್ಷಗಳಲ್ಲಿ ಮೊದಲ ಬಾರಿಗೆ ನಮ್ಮ ಕೈಲಾಸ ಯಾತ್ರಿಗಳ ತಂಡವು ರಾನಿಖೇತ್ ನಲ್ಲಿ ತಂಗಿತ್ತು. ಆದ್ದರಿಂದ kmvn ವತಿಯಿಂದ ಒಂದು ಸನ್ಮಾನ ವಾಯಿತು.ರುಚಿಕರವಾದ ಉಪಾಹಾರವಾಯಿತು.ಎಲ್ಲರಿಗೂ ಹಾರ ಹಾಕಿ ತಿಲಕವಿಟ್ಟು ಶುಭಕೋರಿದರು.ಸೇನೆಯ ಬ್ರಿಗೇಡಿಯರ್ ಅಧ್ಯಕ್ಷರಾಗಿದ್ದರು. ಬಸ್ ಹತ್ತುವಾಗ ನಾನು ಕೊನೆಯವಳಾಗಿದ್ದೆ. ಅವರು ನನಗೆ ವಿದಾಯ ಹೇಳುವಾಗ ನನ್ನ ಮಗಳು ಆಸ್ಪತ್ರೆಯಲ್ಲಿ ಇದ್ದಾಳೆ,ಅವಳಿಗಾಗಿ ಕೈಲಾಸದಲ್ಲಿ ಪ್ರಾರ್ಥಿಸಿ ಎಂದರು. ಖಂಡಿತ ಎಂದಷ್ಟೇ ಹೇಳಿ ನಾನು ಬಸ್ ಹತ್ತಿದೆ.ಈಗಲೂ ಕೆಲವು ಸಲ ಅವರ ಮುಖ ನೆನಪಾಗುತ್ತದೆ.ಮಗಳು ಹುಶಾರದಳೋ ಇಲ್ಲವೋ ಗೊತ್ತಿಲ್ಲ.
ನಂತರ ರಾನಿಖೆತ್ ಪೇಟೆಯಲ್ಲಿ ಮತ್ತೊಂದು ಸನ್ಮಾನ. ಶಾಲೆಯ ಮಕ್ಕಳು ಕುಮಾವು ಪ್ರಾಂತ್ಯದ ವೇಷಭೂಷೆಯೊಂದಿಗೆ ಸಿದ್ಧರಾಗಿ ನಿಂತಿದ್ದರು.ಚೆಂದದ ಮಕ್ಕಳು ಸುಶ್ರಾವ್ಯವಾಗಿ ಅವರ ಜಾನಪದ ಗೀತೆಗಳನ್ನು ಹಾಡಿ, ದಹಿ-ಶಕ್ಕರ್, ಜಿಲೇಬಿಗಳನ್ನು ಕೊಟ್ಟು ವಿದಾಯ ಹೇಳಿದರು. ನೆನಪಿನ ಕಾಣಿಕೆಯಾಗಿ ಶಿವನ ಫೋಟೋಗಳನ್ನು ಕೊಟ್ಟರು. ಮಕ್ಕಳೊಂದಿಗೆ ಫೋಟೋ ತೆಗೆದುಕೊಂಡು ಮುಂದೆ ಹೊರಟೆವು.
ಮುಂದೆ ಹಲ್ದಾನಿ ಎಂಬಲ್ಲಿ ಸರಯು ಮತ್ತು ರಾಮಗಂಗ ನದಿಗಳ ಸಂಗಮಸ್ಥಳ.ಪುರಾತನವಾದ ಮಂದಿರದ ದರ್ಶನವಾಯಿತು.ಸರಯು ಎಂದಾಗ ಶ್ರೀ ರಾಮಚಂದ್ರನ ಶ್ರೀ ಚರಣಗಳಿಂದ ಪಾವನವಾದ ನೀರು ಎಂದು ಭಕ್ತಿಯಿಂದ ನಮಿಸಿದೆವು.೧ಗಂಟೆಗೆ ಊಟ ಮುಗಿಸಿ ಮುಂದೆ ಸಾಗಿದೆವು.
ಸಂಜೆ ಮಿರ್ತಿ ಎಂಬಲ್ಲಿ ITBP ಯವರ ಹೆಡ್ ಕ್ವಾರ್ಟೆರ್ಸ್ನಲ್ಲಿ ಬಿಸಿ ಬಿಸಿ ಜಿಲೇಬಿ ಪಕೋಡ ಟೀ ಎಲ್ಲ ಸೈನಿಕ ಶಿಸ್ತಿನಿಂದ ಸರಬರಜಾಯಿತು. ಅಲ್ಲಿ ಮತ್ತೊಮ್ಮೆ ಚಾರಣದ ಬಗ್ಗೆ, ಟಿಬೆಟ್ ನಲ್ಲಿ ನಡೆದುಕೊಳ್ಳಬೇಕಾದ ರೀತಿಗಳ ಬಗ್ಗೆ ತಿಳಿಸಿಕೊಟ್ಟರು.ದೊಡ್ಡ ಭೂಪಟದಲ್ಲಿ ಭಾರತ ಮತ್ತು ನೇಪಾಳದ ಗಡಿಗಳನ್ನು ಕಾಳಿ ನದಿಯೇ ಕೊರೆದಿರುವುದನ್ನು ತೋರಿಸಿದರು.ನದಿಯ ದಡದಲ್ಲಿ ನಾವು ಚಾರಣ ಮಾಡುವ ದಾರಿಗಳನ್ನು ಕ್ಯಾಂಪ್ ಗಳನ್ನೂ ತೋರಿಸಿದರು. ಪೋಲಿಸ್ ಮೇಲಧಿಕಾರಿಗಳ ಜೊತೆ ಗ್ರೂಪ್ ಫೋಟೋ ಆಯಿತು.
ರಾತ್ರಿ ಧಾರ್ಚುಲ ತಲುಪಿದಾಗ ೧೦. ೪೫. ನಮ್ಮ ಲಗೇಜ್ ಯಲ್ಲ ತಂದು ಹಾಕಿದರು. ದೊಡ್ಡ ರಾಶಿಯಲ್ಲಿ ನಮ್ಮ ಸಾಮಾನು ಹುಡುಕಿಕೊಂಡು ರೂಂ ಸೇರಿದೆವು. ಎಂದಿನಂತೆ ನಾನು, ಹರ್ಶೀನ, ಜ್ಯೋತಿ ಒಂದು ರೂಂ ನಲ್ಲಿ. ಈಗ ಮತ್ತೆ ಲಗೇಜ್ ವಿಂಗಡಣೆ.ನಾಳೆ ನಮಗೆ ಲಗೇಜ್ ಸಿಗುವುದಲ್ಲವಾದ್ದರಿಂದ ಎರಡು ದಿನಕ್ಕೆ ಬೇಕಾದ ಬಟ್ಟೆ-ಬರೆ,ಸೋಪು ಬ್ರಷ್ ಪೇಸ್ಟ್ ಮುಂತಾದ ಅಗತ್ಯ ಸಾಮಾನನ್ನು ಒಂದು ಬ್ಯಾಗ್ ನಲ್ಲಿ ಜೋಡಿಸಿದೆವು. ಕ್ಯಾಮೆರಾ ನೀರಿನ ಬಾಟಲಿ ಡ್ರೈ ಫ್ರೂಟ್, ಬಿಸ್ಕೆಟ್ ಎಲ್ಲವೂ ಬ್ಯಾಕ್ ಪ್ಯಾಕ್ ಸೇರಿತು.ಅಂತು ೧೨. ೩೦ ಕ್ಕೆ ಎಲ್ಲ ಮುಗಿಸಿ ಮಲಗಿದೆವು.
ನಾಳೆಯಿಂದ ಚಾರಣ ಪ್ರಾರಂಭ. ಆತಂಕ,ಸಂತೋಷ,ಭರವಸೆ,ಸಮ್ಮಿಶ್ರ ಭಾವದೊಂದಿಗೆ ನಿದ್ರೆಯ ಆಳಕ್ಕೆ ಇಳಿದೆವು.
ಚಾರಣದ ಮೊದಲ ದಿನ. ಮಿರ್ತಿಯಿಂದ ಗಾಲಾ. ೧೫ ಜುಲೈ.
ಶುಕ್ರವಾರವಾದ್ದರಿಂದ ೪. ೧೫ಕ್ಕೆ ಎದ್ದು ಹೊರಗೆ ಬಂದೆ. ಹೊರಗಿನ ದೃಶ್ಯ ನೋಡಿ ಮೂಕಳಾದೆ. ಬೆಳಗಿನ ನಿಶ್ಶಬ್ಧದಲ್ಲಿ ಕಾಳಿನದಿಯ ಘರ್ಜನೆ, ಪರ್ವತಗಳ ಮೇಲೆ ಇಳಿದುನಿಂತ ಮೋಡಗಳ ನರ್ತನ, ಬೆಟ್ಟಗಳಲ್ಲಿ ಕೊರೆದಂತೆ ಕಾಣುವ ಮನೆಗಳು,
೮ ಗಂಟೆಗೆ ಹೊರಟು ೧೦ ಗಂಟೆಗೆ ಮಂಗಟಿ ಎಂಬ ಚಾರಣ ಪ್ರಾರಂಭವಾಗುವ ಸ್ಥಳವನ್ನು ತಲುಪಿದೆವು. ಅಲ್ಲಿ ನಮಗಾಗಿ ಕುದುರೆಗಳು ಪೋರ್ಟರ್ ಗಳು ಕಾಯುತ್ತಿದ್ದರು.೩೦ ನಿಮಿಷಗಳಲ್ಲಿ ಎಲ್ಲರೂ ತಮ್ಮ ತಮ್ಮ ಕುದುರೆ ಪೋರ್ಟರ್ ಗಳೊಂದಿಗೆ ಹೊರಟೆವು. ನನ್ನ ಪೋರ್ಟರ್ ಉತ್ಸಾಹದಿಂದಲೇ ಬ್ಯಾಕ್ ಪ್ಯಾಕ್ ಹೊತ್ತು ನಡೆದ. ಒಂದು ಹತ್ತು ನಿಮಿಷದಲ್ಲೇ ನಾನು ಸ್ವಲ್ಪ ಹಿಂದೆ ಬಿದ್ದೆ.ಕುದುರೆಯವನೂ ಜೊತೆಗೇ ಬರುತ್ತಿದ್ದ. ಇಂದಿನ ಚಾರಣ ಕೇವಲ ೫km. ಪೋರ್ಟರ್ ಶಾರ್ಟ್ ಕಟ್ ಎಂದು ಒಂದು ಕಡಿದಾದ ಏರನ್ನು ಹತ್ತಿಸಿದ. ಕೊಥಾರಿ ಅವರೂ ಶೀತಲ್ ಚೆನ್ನಾಗಿ ಬಯ್ದರು.ಅವನ ಮಾತು ಕೇಳಿ ಹಾಗೆ ಶಾರ್ಟ್ ಕಟ್ ಹೋಗಬೇಡಿ ಎಂದು.೫ km,ಏರುದಾರಿ ಹತ್ತಿ ಗಾಲಾ ತಲುಪಿದಾಗ ೨ಗಂಟೆ. ಮೊದಲ ದಿನವೇ ತಮಿಳುನಾಡಿನಿಂದ ಬಂದಿದ್ದ Dr. ಗೋವಿಂದರಾಜು ಅವರ ಪತ್ನಿ ಕುದುರೆಯಿಂದ ಬಿದ್ದು ಕೈ ಮುರಿದುಕೊಂಡರು.
ಊಟ ವಿಶ್ರಾಂತಿ ಮುಗಿಸಿ ಬಟ್ಟೆಗಳನ್ನು ಒಗೆದು ಒಣಗಿಸಿಕೊಂದೆವು. ಎಲ್ಲರೂ ಹೊರಗಡೆ ಸೇರಿದೆವು. gents >ladies ಅಂತ್ಯಾಕ್ಷರಿ ಪ್ರಾರಂಭವಾಯಿತು.ಕೊಡಗಿನ ೪ ಜನ ಸ್ನೇಹಿತೆಯರು ಯಾರಿಗೂ ಬಿಡದಂತೆ ಒಂದು ಸಾಲಿನ ಹಿಂದಿ ಹಾಡುಗಳನ್ನು ಹೇಳುತ್ತಾ ಹೋದರು. ಅತುಲ್ ಮತ್ತು ಶಿರೀಶ್ ಸುಶ್ರಾವ್ಯವಾಗಿ ಹಳೆಯ ಹಿಂದಿ ಹಾಡುಗಳನ್ನು ಹಾಡಿದರು. ಸಂಜೆಯ ಟೀ ಬಿಸ್ಕೆಟ್ ಆಗುವಾಗ Dr. ಗೋವಿಂದರಾಜ್ ಅವರು L.O. ಗೆ ಫೋನ್ ಮಾಡಿ ತಾವು ಹಾಗೆ ವಾಪಸ್ಸು ಹೋಗುವುದಾಗಿ ತಿಳಿಸಿದರು.ನಮಗೆಲ್ಲ ಶುಭ ಹಾರೈಸಿದರಂತೆ. ಕೇಳಿ ಎಲ್ಲರಿಗೂ ತುಂಬಾ ಬೇಸರವಾಯಿತು. ಕೊಥಾರಿ ಅವರಿಗೆ ಕಾಲಿನಲ್ಲಿ ಕ್ರಾಂಪ್ಸ್ ಬಂದಿತ್ತು. BENGAY ತಂದು ಕೊಟ್ಟೆ. ನಂತರದ ದಿನಗಳಲ್ಲಿ bengay ಎಲ್ಲರಿಗೂ ಕಾಲುನೋವಿನ ಸಂಜೀವಿನಿ ಆಯಿತು. ಜ್ಯೋತಿ ಬಂದು bengay ತೆಗೆದುಕೊಂಡು ಹೋಗಿ ಎಲ್ಲರಿಗೂ ಹಚ್ಚುತ್ತಿದ್ದಳು.
೭ ಗಂಟೆಗೆ ಸೂಪ್ ಕುಡಿದೆವು. ೮ ಗಂಟೆಗೆ ಊಟ ಮಾಡುವಾಗ ನಾಳಿನ ಚಾರಣದ ನಿಯಮಗಳನ್ನು ತಿಳಿಸಿದರು. ಬೇಗನೆ ಎದ್ದು ಹೊರಡುವುದು. ತಮ್ಮ ತಮ್ಮ ಶಕ್ತಿಗೆ ತಕ್ಕಂತೆ ನಡೆಯುವುದು. ಪ್ರತಿ ೨ ಗಂಟೆಗೊಮ್ಮೆ ಎಲ್ಲರೂ ನಿಂತು ಕಾದು ಹಿಂದಿನವರೆಲ್ಲಾ ಬಂದಮೇಲೆ ಮುಂದೆ ಸಾಗುವುದು. ಗಾಲಾ ದಿಂದ ಬುಧಿಯ ದಾರಿ ತುಂಬಾ ಕಠಿಣ. ಅದರಲ್ಲಿ ಯಶಸ್ವಿಯಾದರೆ ಕೈಲಾಸ ಕಷ್ಟವಿಲ್ಲವೆಂದು ಹೇಳಿದರು.
ಗಾಲಾ ದಿಂದ ಬುಧಿ. ಕಠಿಣ ಪರೀಕ್ಷೆ. ೧೬. ಜುಲೈ.
೩. ೩೦.ಕ್ಕೆ ಓಂ ನಮಃ ಶಿವಾಯ ದೊಂದಿಗೆ ಕಾಫಿ ಟೀ ಬಂತು. ಕುಡಿದು ೪. ೩೦.ಕ್ಕೆ ತಯಾರಾಗಿ ಹೊರಟೆವು. ಪರ್ವತವನ್ನು ಕೊರೆದು ಮಾಡಿದ ಇಕ್ಕಟ್ಟಾದ ದಾರಿ. ಭೂ ಸ್ಖಲನದ ಭಯ. ಒಬ್ಬರ ಹಿಂದೆ ಒಬ್ಬರು ನಡೆಯಬೇಕು. ೩ km. ನ ಏರುದಾರಿ. ನಂತರ ಬಿಂದಾಕೋಟಿ ಎಂಬಲ್ಲಿಂದ ಇಳಿತ ಶುರು. ೪೪೪೪ ಮೆಟ್ಟಿಲುಗಳು! ಕೊಡಗಿನ ಯಾತ್ರಿ ರಾಣಿದೇವಯ್ಯ ಹೇಳಿದರು,ಮೈಸೂರು ಮಹಾರಾಜರಾದ ಜಯಚಾಮ ರಾಜೇಂದ್ರ ಒಡೆಯರ್ ಕೆತ್ತಿಸಿದ್ದಂತೆ. ಕೇಳಿ ಸ್ವಲ್ಪ ಹೆಮ್ಮೆ ಎನಿಸಿತು. ಇಳಿಜಾರು ದಾರಿಯಾದರೂ ಹತ್ತುವುದಕ್ಕಿಂತ ಸುಲಭವೇನೂ ಅಲ್ಲ. ಕಾಲಬೆರಳುಗಳಿಗೆ ಶೂ ಸಾಕ್ಸ್ ತಿಕ್ಕಿ ತಿಕ್ಕಿ ಚರ್ಮ ಕಿತ್ತಿತು.ಅಂತು ಎಲ್ಲೂ ಬೀಳದೆ ೪೪೪೪ ಮೆಟ್ಟಿಲು ಇಳಿದನಂತರ ಕಾಲಿ ನದಿಯ ದಡದಲ್ಲಿ ಲಖನ್ಪುರ್ ಎಂಬ ಊರಿನಲ್ಲಿ ಉಪಾಹಾರ ವಾಯಿತು. ಪ್ರಕೃತಿಯ ಸೊಬಗನ್ನು ಸವಿಯುವ ಆಸೆಯಾದರೂ ಮುಂದಿನ ದಾರಿಯ ಚಿಂತೆಯಿಂದ ಬೇಗ ಬೇಗ ಹೊರಟೆವು.
ಲಖಂಪುರದ ನಂತರ ದಾರಿ ಇನ್ನೂ ಇಕ್ಕಟ್ಟು. ಅಲ್ಲಲ್ಲಿ ಚಿಕ್ಕ ದೊಡ್ಡ ಜಲಪಾತಗಳು. ನೆತ್ತಿಯ ಮೇಲೇ ಸುರಿಯುವ ಜಲಧಾರೆಗಳು. ಅಲ್ಲಲ್ಲಿ ಉರುಳಿದ್ದ ಕಲ್ಲು ಬಂಡೆಗಳು. ಒಂದೆಡೆ ೩೦೦೦ ಅಡಿ ಎತ್ತರದಿಂದ ನೇರವಾಗಿ ಸುರಿಯುತ್ತಿದ್ದ ಜಲಧಾರೆ! ನಮಗಾಗಿ ಶಿವನು ಕಳಿಸಿದ ಮುತ್ತಿನ ಹಾರದಂತೆ ಕಾಣಿಸಿತು. ಹೆಜ್ಜೆ ಹೆಜ್ಜೆಗೂ ಪ್ರಕೃತಿಯ ವಿಸ್ಮಯಕರ ವಿವಿಧ ರೂಪಗಳು. ಅವನ್ನೆಲ್ಲ ಆಸ್ವಾದಿಸುತ್ತಾ ನಡೆದೇ ನಡೆದೆವು.
ಕೊಡಗಿನ ಸ್ನೇಹಿತೆಯರು ಚುರುಕಾಗಿ ನಡೆಯುತ್ತಿದ್ದರು. ಜ್ಯೋತಿ ಶಿರೀಶ್ ಆರಾಮವಾಗಿ ಪ್ರಕೃತಿಯ ಸೊಬಗನ್ನು ಅಸ್ವಾದಿಸುತ್ತ ನಿಧಾನವಾಗಿ ನಡೆಯುತ್ತಿದ್ದರು. ನಾನಂತೂ ಸುಮಾರಾಗಿ ಯಾವಾಗಲೂ ಹಿಂದೆಯೇ ಬೀಳುತ್ತಿದ್ದೆ.ಆದರೆ ಕುದುರೆ ಹತ್ತಬಾರದು,ನಡೆದೇ ಯಾತ್ರೆ ಮಾಡಬೇಕೆಂಬ ಸಂಕಲ್ಪವೇ ಮುನ್ನಡೆಸುತ್ತಿತ್ತು.ಓಂ ನಮಃ ಶಿವಾಯ ಜಪವೊಂದೆ ತಾರಕ. ನಡೆದೂ ನಡೆದೂ ಮಾಲ್ಪಾ ತಲುಪಿದೆವು.
೧೯೯೮ ರ ೧೨ನೇ ತಂಡದ ಯಾತ್ರಿಗಳು ಯಾತ್ರೆ ಮುಗಿಸಿಕೊಂಡು ಹಿಂದಿರುಗುವಾಗ ಈ ಕ್ಯಾಂಪ್ನಲ್ಲಿ ರಾತ್ರಿ ಮಲಗಿದ್ದಾಗ ಪರ್ವತವು ಕುಸಿದು ಎಲ್ಲ ೬೦ ಜನ ಯಾತ್ರಿಗಳೂ ಕುದುರೆಗಳೂ ಕೂಲಿಗಳೂ ಎಲ್ಲ ಸೇರಿ ೩೦೦ ಜನ ಜೀವಂತ ಸಮಾಧಿಯಾಗಿ ಬಿಟ್ಟರಂತೆ.ಇಡೀ ಊರಿನಲ್ಲಿ ೩ ಜನ ಮಾತ್ರ ಬದುಕಿಉಳಿದರಂತೆ. ಭೂಕುಸಿತದ ಭಾರಿ ಶಬ್ಧಕ್ಕೆ ಒಬ್ಬ ಕಿವುಡಾದನಂತೆ. ನೃತ್ಯಗಾತಿ ಪ್ರತಿಮಾ ಬೇಡಿ ಕೂಡ ಈ ಅಪಘಾತದಲ್ಲಿ ಸಾವನ್ನಪ್ಪಿದರಂತೆ. ಅಂತೂ ಅದೇ ಕಲ್ಲಿನ ಮೇಲೆ ನಡೆದೆವು. ಈ ಜಾಗದಲ್ಲಿ ನೆನಪಿಗೋಸ್ಕರ ಒಂದು ಶಿವನ ಪ್ರತಿಮೆಯನ್ನು ಸ್ಥಾಪಿಸಿದ್ದಾರೆ. ಅಲ್ಲಿ ನಮಸ್ಕರಿಸಿ ಸತ್ತವರ ಆತ್ಮಕ್ಕೆ ಶಾಂತಿ ಕೋರಿ ಮುಂದೆ ನಡೆದೆವು.
ಮಾಲ್ಪದಿಂದ ಮುಂದೆ ದಾರಿ ನಿಧಾನವಾಗಿ ಸಾಗಿತು. ಚೈತನ್ಯ ಕಡಿಮೆಯಾಗುತ್ತಿತ್ತು.ಇಕ್ಕಟ್ಟಾದ ದಾರಿ. ಕಾಲಿನದಿಯ ಕೊರಕಲು.ಕಲ್ಲುಗಳು ಉರುಳುವ ಭಯ.ನಡುನಡುವೆ ಅಡ್ಡಗಟ್ಟುವ ಜಲಪಾತಗಳು. ಪೋರ್ಟರ್ ಸಹಾಯವಿಲ್ಲದೆ ದಾಟಲು ಅಸಾಧ್ಯ. ಆದರೆ ಯಾವುದೋ ಭರವಸೆ ಮುನ್ನಡೆಸಿತು. ಮುಂದೆ ಭೋರ್ಗರೆಯುವ ದೊಡ್ಡದೊಂದು ಜಲಪಾತ. ಅದಕ್ಕೊಂದು ಮರದ ಸೇತುವೆ. ಸೇತುವೆಯ ಮೇಲೆ ನಿಂತು ಎಲ್ಲರೂ ಫೋಟೋ ತೆಗೆದುಕೊಂಡೆವು. ಸ್ವಲ್ಪ ಡ್ರೈ fruits ತಿಂದು ನೀರು ಕುಡಿದು ಮುಂದೆ ಹೊರಟೆವು. ಬುಧಿ ತಲುಪಿದಾಗ ೫ ಗಂಟೆ. ಕುದುರೆಗಳ ಮೇಲೆ ಬಂದವರು,ಚುರುಕಾಗಿ ನಡೆದವರು ಆಗಲೇ ಸ್ನಾನ ಮುಗಿಸಿ ಬಟ್ಟೆ ಒಗೆದು ಒಣಗಿಸುತ್ತಿದ್ದರು. ನೀರುಕಾಯಿಸುವ ಒಲೆಯ ಬೆಂಕಿ ಜಿಟಿ ಜಿಟಿ ಮಳೆಗೆ ಆರಿಹೊಗುತ್ತಲೇ ಇತ್ತು.ಅಂತೂ ಸ್ನಾನದ ನೀರಿಗೆ ಸರದಿಯ ಸಾಲು ಹಚ್ಚಿದೆ.೭ ಗಂಟೆಯಾದರೂ ಲೈಟ್ ಹಾಕಿಲ್ಲ.ಸೋಪ್ ಸಿಕ್ಕಿದರೆ ಬಟ್ಟೆ ಎಲ್ಲಿ ಇಟ್ತೆನೆಂದು ನೆನಪಿಲ್ಲ. ತೀರದ ಗಡಿಬಿಡಿ. ಕಷ್ಟಪಟ್ಟು ಸ್ನಾನ ಮುಗಿಸಿ ಸೂಪ್ ಕುಡಿಯುವಾಗ ಸ್ವಲ್ಪ ಜೀವ ಬಂತು. ೯ಗಂಟೆಗೆ ಊಟ ಮಾಡಿ ಮಲಗಿದರೆ ಕಾಲುಬೆರಳುಗಳಲ್ಲಿ ಉರಿ,ರಕ್ತ. ಅವಕ್ಕೆಲ್ಲ ಆಯಿಂಟ್ಮೆಂಟ್ ಹಚ್ಚಿ ಚೂರು ಚೂರು ಹತ್ತಿ ಸುತ್ತಿದೆ. ಬೇಡವಂದರೂ ಕೇಳದೆ ಜ್ಯೋತಿ ಕಾಲು ಒತ್ತಿ ಉಪಚಾರ ಮಾಡಿದಳು.ಅಂದುಕೊಂಡಿದ್ದಕ್ಕಿಂತ ಹೆಚ್ಚು ಕಷ್ಟವಿದೆ ಈ ಕೈಲಾಸ ಯಾತ್ರೆ ಎಂಬ ಸತ್ಯ ಮನವರಿಕೆ ಆಗುತ್ತಿದ್ದಂತೆ ನಿದ್ರೆ ಬಂತು.
ಬುಧಿಯಿಂದ ಗುಂಜಿ. ಪೋರ್ಟರ್ ನ ಅಸಹಕಾರ. ೧೭ ಜುಲೈ.
ಇಂದಿನ ಚಾರಣ ೧೭km. ಆದ್ದರಿಂದ ಬೆಳಿಗ್ಗೆ ೪ಕ್ಕೆ ಎದ್ದು ೫ಕ್ಕೆ ತಯಾರಾದೆವು. ರಾತ್ರೆಯಿಂದ ಸುರಿದ ಮಳೆ ಇನ್ನೂ ಜಿನುಗುತ್ತಲೇ ಇತ್ತು. ಕೊನೆಗೆ ೫. ೩೦ ಕ್ಕೆ ಕೊಂಚ ಬೆಳಗಾದೊಡನೆ bournvita ಕುಡಿದು ಹೊರಟೆವು. ಎಂದಿನಂತೆ ಬ್ಯಾಚ್ by ಬ್ಯಾಚ್ ಹೊರಟೆವು. ೨ ಗಂಟೆಗಳ ನಂತರ ಎಲ್ಲರೂ ಸೇರಬೇಕಂದು L.O. ಹೇಳಿದರು. ಅವರು ಎಲ್ಲರಿಗಿಂತ ಕೊನೆಗೆ ಹೊರಟು ಎಲ್ಲರಿಗಿಂತ ಮುಂದೆ ಇರುತ್ತಿದ್ದರು. ಅವರಿಗೆ ಒಂದು ಅಂದದ ಬಿಳಿ ಕುದುರೆ ಕೊಟ್ಟಿದ್ದರೂ ಎಂದು ಅದನ್ನು ಹತ್ತಲೇ ಇಲ್ಲ. ಪೋರ್ಟರ್ ಅವರ ಬ್ಯಾಗ್ ವೀಡಿಯೊ ಕ್ಯಾಮೆರಾ ಅದೂ ಇದೂಎಲ್ಲ ಹೊತ್ತು ಅವರ ಜೊತೆಗೇ ಬರುತ್ತಿದ್ದ.
ಕ್ಯಾಂಪ್ ನಿಂದ ಸುಮಾರು ೩೦೦ m ಅಷ್ಟು ಸಮತಟ್ತಾದ ರಸ್ತೆ. ಮುಂದೆ ೩km ಕಡಿದಾದ ಏರು. ಬುಧಿ ಕ್ಯಾಂಪ್ ಇರುವುದು ೮೮೪೫ ಅಡಿ ಎತ್ತರದಲ್ಲಿ. ಈಗ ೧೦,೮೦೦ ಅಡಿ ಎತ್ತರದ ಛಿಯಾಲೇಕ್ ಶಿಖರ ಏರಬೇಕಿತ್ತು. ಸುಮಾರು ೨೦೦೦ಅಡಿ ಸೀದಾ ಏರು. ಇವತ್ತು ನನ್ನ ಪೋರ್ಟರ್ ಒಂದೇ ಗಲಾಟೆ. ಕುದುರೆ ಹತ್ತು ಎಂದು. ನಾನು ಕಾಲ್ನಡಿಗೆಯಲ್ಲೇ ಹತ್ತಬೇಕೆಂದು ನಿರ್ಧರಿಸಿದ್ದೆ. ಆದರೆ ಪೋರ್ಟರ್ ಕೈ ಹಿಡಿದು ಹತ್ತಿಸದಿದ್ದರೆ ಆಗುವ ಮಾತಲ್ಲ. ಅವನು ಸಹಕರಿಸುತ್ತಿಲ್ಲ. ಕೊನೆಗೆ ಕುದುರೆಯ ಭರತ್ ಸಿಂಗ್ ಕೈಹಿಡಿದು ನಡೆಸಿದ. ಪೋರ್ಟರ್ ಕುದುರೆಯನ್ನು ಹಿಡಿದು ಮೇಲೆಹೋದ. ಅಂತೂ ಛಿಯಾಲೇಕ್ ಹತ್ತುವಾಗ ಹಸಿವು ದಣಿವು ಕಾಲುನೋವುಗಳಿಂದ ಕುಸಿದು ಕುಳಿತೆ. ಪೋರ್ಟರ್ ಚನಾ ಪೂರಿ ಟೀ ತಂದುಕೊಟ್ಟ. ಮಳೆ ಇನ್ನೂ ಹನಿಯುತ್ತಲೇ ಇತ್ತು.
ನನ್ನ ಪೋರ್ಟರ್ ಇವತ್ತು ತುಂಬಾ ಸತಾಯಿಸಿದ. ಮೊದಲ ದಿನವೇ ಇವನು ತಲೆಹರಟೆ ಎಂದು ಗೊತ್ತಾಗಿತ್ತು. ನನ್ನ ಬ್ಯಾಕ್ ಪ್ಯಾಕ್ ನಿಂದ ಕೂಲಿಂಗ್ ಗ್ಲಾಸ್ ತೆಗೆದು ಹಾಕಿಕೊಳ್ಳುವುದು. ಕ್ಯಾಮೆರಾ ತೆಗೆದುಕೊಂಡು ತನ್ನ ಸಂಗಡಿಗರ ಫೋಟೋ
ತೆಗೆಯುವುದು. ನಾನು ಕ್ಯಾಂಪ್ನಲ್ಲಿ ತುಂಬಿಸಿದ ನೀರನ್ನು ತಾನು ಕುಡಿದು ನನಗೆ ಯಾವುದೋ ಝಾರನಾದ ನೀರನ್ನು ಕೊಡುವುದು. ಇದೆಲ್ಲ ಯಾತ್ರೆಯಲ್ಲಿ ನಡೆಯುವುದೇ ಎಂದು ನಾನು ಹೆಚ್ಚು ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲ. ಛಿಯಾಲೇಕ್ ನಿಂದ ಮುಂದೆ ಮಳೆಗೆ ದಾರಿಎಲ್ಲಾ ಕೊಚ್ಚೆ. ಕೊಂಚ ಕಾಲುಜಾರಿದರೆ ಮಂಡಿಯತನಕ ಕಾಲು ಕೊಚ್ಚೆ ಯಲ್ಲಿ. ಕಷ್ಟದಿಂದ ದಾಟುಬೇಕಾಯಿತು. ಮುಂದ darbhyang ನಲ್ಲಿ ITBP ಚೆಕ್ ಪೋಸ್ಟ್. ಇವನು ನನ್ನನ್ನು ಕೇಳದೆ ಕ್ಯಾಮೆರಾ ಬಾಗ್ನಿಂದ ತನ್ನ ಪಾಸು ಅನ್ನು ತೆಗೆದಿಟ್ಟುಕೊಂಡಿದ್ದಾನೆ. L.O. ಹತ್ತಿರ ಕಂಪ್ಲೇಂಟ್ ಮಾಡಿದೆ.ಅವರು ಇವನಿಗೆ ಚೆನ್ನಾಗಿ ಬೈದು ಪಾಸು ಕ್ಯಾನ್ಸಲ್ ಮಾಡಿಸುವುದಾಗಿ ಹೇಳಿದರು. ಕುದುರೆಯ ಭರತ್ ಸಿಂಗ್ ಚೋಡಿಯೇ ಮಾಜಿ,ಮಾಫ್ ಕರ್ ದೀಜಿಯೇ ಎನ್ನುತ್ತಿದ್ದ. ಸರಿ ಅಲ್ಲಿ ಟೀ ಮತ್ತು ಚಿಪ್ಸ್ ತಿಂದು ಮತ್ತೆ ಮುಂದೆ ಹೊರಟೆವು. ಭೂ ಕುಸಿತದಿಂದ ಈ ಜಾಗವು ದಿನೇ ದಿನೇ ಕುಸಿಯುತ್ತಲೇ ಇದೆ. ಆದ್ದರಿಂದ ಇಲ್ಲಿ ಯಾರೂ ವಾಸಿಸುತ್ತಿಲ್ಲ. ಇಲ್ಲಿನ ಎಷ್ಟೋ ಜನ ಐಎಎಸ್ ಐಪಿಎಸ್ ಆಫೀಸರ್ ಆಗಿದ್ದರಂತೆ. ಊರಿನ ಮನೆಗಳಿಗೆಲ್ಲ ಬೀಗ. ಹಿಂದೆ ಭಾರತ ಟಿಬೆಟ್ ನೇಪಾಳದ ನಡುವಿನ ವ್ಯಾಪಾರ ವಿನಿಮಯ ಕೇಂದ್ರವಾಗಿತ್ತಂತೆ. ಈಗ ನಿರ್ಜನವಾಗಿದೆ. ಮಾವೋವಾದಿಗಳ ಗಲಾಟೆಯೂ ಇರುತ್ತಂತೆ. ಆದ್ದರಿಂದ ನಮ್ಮೊಂದಿಗೆ ಯಾವಾಗಲೂ ಬಂದೂಕುಧಾರಿ ಸೈನಿಕರು. ಹೊರಡುವಾಗ ಯಾತ್ರೆ ಮುಗಿಸಿ ಬರುತ್ತಿದ್ದ ೫ನೆಯ ಬ್ಯಾಚ್ ನವರೊಂದಿಗೆ ವಿಚಾರ ವಿನಿಮಯವಾಯಿತು. ಅವರೆಲ್ಲ ತುಂಬಾ ಉಲ್ಲಸಿತರಾಗಿ ಕಂಡರು.
ಸರಿ,ಮತ್ತೆ ನಡಿಗೆ ಪ್ರಾರಂಭವಾಯಿತು.ಕಾಲುಗಳು ಮಣಭಾರ. ನಿನ್ನೆ ಸುಲಿದು ಹೋದ ಕಾಲ್ಬೆರಳುಗಳ ಉರಿ.ದಾರುಯಲ್ಲಿ ಕಾಲುವೆಯೊಂದು ಕಂಡಾಗ ಶೂ,ಸಾಕ್ಸ್,ಬಿಚ್ಚಿ ಕಾಲುವೆಯಲ್ಲಿ ಕಾಲು ಮುಳುಗಿಸಿ ಕುಳಿತುಕೊಂಡೆ.ಹಾ ಎನ್ನಿಸಿತು.ಸ್ವಲ್ಪ ಹೊತ್ತಿಗೆ ಹಿಂದಿನಿಂದ ಪಾರ್ಥಿವ್,ಹಿತೇಶ್, ಪಾಂಡಾ, kmvnನ ಮ್ಯಾನೇಜರ್ ಎಲ್ಲರೂ ಬಂದರು.ನನ್ನನ್ನು ನೋಡಿ ತಾವೂ ಕುಳಿತು ನನ್ನ ಕಾಲಿಗೆ ಶೈತ್ಯೋಪಚಾರ ಮಾಡಿದರು.ಜಿಗಣೆ ಕಚ್ಚಿ ಸಾಕ್ಸ್ ಎಲ್ಲ ರಕ್ತವಾಗಿದೆ,ನಾನು ಗಮನಿಸಿಯೇ ಯಿಲ್ಲ. ಹುಡುಗರೆಲ್ಲ ಸೇರಿ ಬೇಡವೆಂದರೂ ಕೇಳದೆ ನನ್ನ ಕಾಲು ತೊಳೆದು ಪೌಡರ್ ಹಾಕಿ ಔಷಧಿ ಹಚ್ಚಿ ಸಾಕ್ಸ್ ಹಾಕಿ ಶೂ ಹಾಕಿ,ಕರೆದುಕೊಂಡು ಹೊರಟರು.ಆನಂತರ ನಡಿಗೆ ಕೊಂಚ ಸುಲಭವಾಯಿತು.೩. ೩೦ರ ಹೊತ್ತಿಗೆ ಕಾಳಿನದಿಯ ಆಚೆ ದಡದಲ್ಲಿ ಗುಂಜಿ ಕ್ಯಾಂಪ್ ಕಾಣಿಸಿದಾಗ ಹೋ ಎಂದು ಕಿರುಚುವಷ್ಟು ಸಂತೋಷವಾಯಿತು. ಆದರೆ ಹೊಲ ಗದ್ದೆಗಳ ಶಾರ್ಟ್ ಕಟ್ ನಲ್ಲಿ ಒಂದು ಗಂಟೆ ನಡೆದು,ಮರದ ಸೇತುವೆಯನ್ನು ದಾಟಿ, ೧೦೦ ಅಡಿಗಳಷ್ಟು ಏರಿದ ಮೇಲೆ ಗುಂಜಿ ಗ್ರಾಮ ಸಿಕ್ಕಿತು.ಹಳೆಯ ಗುಡ್ದಗಾಡು ಗ್ರಾಮ.ಯುವಕರೆಲ್ಲಾ ವಲಸೆ ಹೋಗಿದ್ದಾರೆ. ಹಿರಿತಲೆಗಳು ಮಾತ್ರಾ ಕಂಡವು. ಅಂತೂ ಊರನ್ನು ದಾಟಿ ಅರ್ಧ km ನಡೆದಮೀಲೆ ಕ್ಯಾಂಪ್ ಸಿಕ್ಕಿತು.ಬಾಯಿಂದ ಮಾತೂ ಹೊರಡದಷ್ಟು ಸುಸ್ತು.ಶೂ ಬಿಚ್ಚಿ ಎಸೆದು ಸುಮ್ಮನೆ ಮಲಗಿಬಿಟ್ಟೆ. ಒಂದು ಗಂಟೆಯನಂತರ ಆಶಾ ಸುಬ್ಬಯ್ಯ ಬಿಸಿ ಕಾಫಿ ತಂದು ಕೊಟ್ಟರು.ಎದ್ದು ಕುಳಿತು ಕುಡಿದ ನಂತರ ಸ್ವಲ್ಪ ಜೀವ ಬಂತು. ೭ ಗಂಟೆಯಾದರೂ ನಮ್ಮ ಕುದುರೆಗಳು ಲಗೇಜ್ ಹೊತ್ತು ಬರಲಿಲ್ಲ. ಹಾಗೇ ಕಾಲಿಗೆ ಚಪ್ಪಲಿ ಇಲ್ಲದೆ ITBP ಯವರ ದೇವಸ್ಥಾನಕ್ಕೆ ಹೋಗಿ ಭಜನೆ ಆರತಿ ಮುಗಿಸಿ ಊಟಮಾಡಿ ಮಲಗಿದ್ದೊಂದೇ ಗೊತ್ತು. ಗಾಢ ನಿದ್ರೆ. ಚೋಟ ಕೈಲಾಸದಿಂದ ಬಂದ ಯಾತ್ರಿಗಳು ಸುಶ್ರಾವ್ಯವಾಗಿ ಹಿಂದಿ ಚಿತ್ರಗೀತೆಗಳನ್ನು ಹಾಡುತ್ತಿದ್ದರು. ಬಹಾರೋ ಫೂಲ್ ಬರಸಾವೂ ..........
ಗುಂಜಿಯಲ್ಲಿ ಮತ್ತೆ ಆರೋಗ್ಯ ತಪಾಸಣೆ. ೧೮ ಜುಲೈ.
ಇಂದು ಗುಂಜಿಯಲ್ಲೇ ವಾಸ್ತವ್ಯ, ಚಾರಣವಿಲ್ಲ.ಆದ್ದರಿಂದ ಸ್ವಲ್ಪ ಹೊತ್ತಾಗೇಎಳೋಣ ಎಂದುಕೊಂಡಿದ್ದೆ. ಆದರೆ ೫ ಗಂಟೆಗೇ ಎಚ್ಚರವಾಯಿತು. ನಸುಕಿನ ಸೊಬಗು ನಿನ್ನೆಯ ಆಯಾಸವನ್ನೆಲ್ಲ ಪರಿಹರಿಸಿತು. ಟೀ ಕುಡಿದು ಸ್ನಾನ ಮಾಡೋಣವೆಂದರೆ ಬಿಸಿನೀರಿಗೆ ಕ್ಯೂ.ತಣ್ಣೀರು ಮುಟ್ಟುವಂತಿಲ್ಲ,ಕೈ ಮರಗಟ್ಟುವುದು. ಅಂತು ಒಂದು ಬಕೆಟ್ ನೀರು ಸಂಪಾದಿಸಿ ಸ್ನಾನ ಮುಗಿಸಿ ಗುಡಿಗೆ ಹೋಗಿ ಜಪ ಸ್ತೋತ್ರಗಳನ್ನು ಮುಗಿಸಿ ಖಿಚಿಡಿ bournvita ಕುಡಿಯುವಾಗ ಲಗೇಜ್ ಹೊತ್ತ ಕುದುರೆಗಳು ಬಂದವು.ಬಟ್ಟೆಗಳನ್ನೆಲ್ಲ ಒಗೆದು ಕಲ್ಲುಗಳ ಮೇಲೆ ಒಣಗಿಸಿದ್ದಾಯಿತು. ಎಲ್ಲರೂ ತಮ್ಮ ತಮ್ಮ ಮೆಡಿಕಲ್ ರಿಪೋರ್ಟ್ ಹಿಡಿದುಕೊಂಡು ಮತ್ತೆ ಚೆಕ್ ಅಪ್ ಎಂದು ಕ್ಯೂ ನಿಂತೆವು.ಅಷ್ಟರಲ್ಲಿ briefing ಎಂದರು. ಸರಿ ಎಲ್ಲರೂ ಡೈನಿಂಗ್ ಹಾಲಲ್ಲಿ ಸೇರಿದೆವು. ಒಬ್ಬೊಬ್ಬರಾಗಿ ಮೆಡಿಕಲ್ ಆಫೀಸರ್,ಸೆಕ್ಯೂರಿಟಿ ಆಫೀಸರ್,ಅಲ್ಲಿನ ITBP ಚೀಫ್ ಎಲ್ಲರೂ ತಮ್ಮ ತಮ್ಮ ಪಾಲಿನ ಮುನ್ನೆಚ್ಚರಿಕೆಗಳನ್ನು ಕೊಟ್ಟರು.ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ, altitude sickness ಬಗ್ಗೆ, ಉಗ್ರವಾದಿಗಳ ಬಗ್ಗೆ, ಭೂಕುಸಿತದ ಬಗ್ಗೆ, ಭೂ ಕುಸಿತವಾದರೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಿಕೊಟ್ಟರು. ನಂತರ checkupಗೆ ಹೋದರೆ ಎಲ್ಲರಿಗೂ fitness ಸರ್ಟಿಫಿಕೇಟ್ ಸಿಕ್ಕಿತು. ಹರ್ಶೀನಾಗೆ ಮಾತ್ರ ೭ ಸಲ ಪ್ರಯತ್ನಿಸಿದರೂ oxyzen ಲೆವೆಲ್ ಸಾಲದು ಎಂದರು. oxyzen ನಹಿ ಹಿ ತೊ ದೇದೋ ಮುಝೆ ತೊ ಕೈಲಾಸ್ ಜಾನ ಹೈ ಎನ್ನುತ್ತಿದ್ದರು. ಅಂತೂ ಎಲ್ಲರೂ ವಿಜಯೋತ್ಸಾಹದಿಂದ ಊಟಕ್ಕೆ ಹೋದೆವು.ಬಿಸಿ ಬಿಸಿಯಾಗಿ ಕಡಿ-ಪಕೋಡ,ರೋಟಿ-ಸರ್ಸೋಂಕ ಸಾಗ್,ಅನ್ನ ದಾಲ್ ಎಲ್ಲವೂ ಶುಚಿ ರುಚಿಯಾಗಿತ್ತು. ಊಟ ಪುಟ್ಟ ನಿದ್ರೆ ಮುಗಿಸಿ ಒಂದು km ದೂರದ ದೇವಸ್ಥಾನಕ್ಕೆ ಹೊರಟೆವು. ಏರುದಾರಿ. ೧೧,೦೦೦ ಅಡಿ ಎತ್ತರ, oxyzen ಕೊರತೆ, ಉಸಿರು ಹತ್ತಿಕೊಂಡು ಬಂತು. ಶಿರಿಶ್ ಕೈ ಹಿಡಿದು ನಡೆಸಿದರು. ದೇವಸ್ಥಾನದಲ್ಲಿ ವೇದವ್ಯಾಸರ ಮೂರ್ತಿ. ಶಾಂತವಾದ ಸುಂದರವಾದ ಸಂಜೆ, ಸುಧಾ ಚಂದ್ರಶೇಖರ ಚಂದ್ರಶೇಖರ ಹಾಡನ್ನು ಹಾಡಿದರು.ನಾವೆಲ್ಲ ದೇವಸ್ಥಾನದ ಮುಂದೆ ಕುಳಿತು ಫೋಟೋ ತೆಗೆದುಕೊಂಡೆವು.ಇನ್ನೂ ಸ್ವಲ್ಪ ಎತ್ತರದ ಗುಹೆಯಲ್ಲಿ ವೇದವ್ಯಾಸರು ತಪಸ್ಸು ಮಾಡಿದ್ದರಂತೆ. L.O. ಮತ್ತು ಶಿರೀಶ್ ಹೋಗಿಬಂದರು.ಎದುರಿಗೆ ಅನ್ನಪೂರ್ಣ ಪರ್ವತ ಶ್ರೇಣಿ. ಎತ್ತರವಾದ ಒಂದು ಶಿಖರದ ಮೇಲೆ ಮಾತ್ರ ಮುಳುಗುವ ಸೂರ್ಯನ ಕಿರಣಗಳು. ಆ ಶಿಖರವು ಒಮ್ಮೆ ತಪೋನಿರತ ಶಿವನಂತೆ, ಒಮ್ಮೆ ಗಣಪತಿಯಂತೆ ಕಾಣುತ್ತಿತ್ತು.ಸಂಜೆ ಕಳೆದು ನಿಧಾನವಾಗಿ ಇರುಳು ಕಾಲಿಡುತ್ತಿತ್ತು. ಅಲ್ಲಿಂದ ಇಳಿದು ಕೆಳಗೆ ITBP ಯವರ ದೇವಸ್ಥಾನಕ್ಕೆ ಹೋಗಿ ಅಲ್ಲಿ ಮತ್ತೆ ಭಜನೆ ಆರತಿ ಮುಗಿಸಿ ಕ್ಯಾಂಪ್ ಗೆ ಬಂದೆವು. ಬಿಸಿ ಬಿಸಿ ರೋಟಿ ಅನ್ನ ದಾಲ್ ಚಳಿಗೆ ಅಮೃತ ದಂತೆ ಅನಿಸಿತು.೭ ಗಂಟೆ ಯಿಂದ ೯ ಗಂಟೆಯ ವರೆಗೆ ಮಾತ್ರ ಜನರೇಟರ್ ಬೆಳಕು ಆಮೇಲೆ ಟಾರ್ಚ್ ಅಥವಾ ಕ್ಯಾಂಡಲ್ ಗತಿ. ಆದ್ದರಿಂದ ೯ ಕ್ಕೆ ಮಲಗಿದೆವು. ಪಾಪ ಚಳಿ ಮಳೆ ಎನ್ನದೆ ವರ್ಷವೆಲ್ಲಾ ಅಲ್ಲೇ ಉಳಿದು ಭಾರತ ಟಿಬೆಟ್ ಗಾಡಿಯನ್ನು ಕಾಯುವ ನಮ್ಮ ಪೋಲಿಸ್ ದಳ ದ ಬಗ್ಗೆ ಹೆಮ್ಮೆ ಕರುಣೆ ಎಲ್ಲಾ ಮಿಶ್ರ ಭಾವ.
ಗುಂಜಿ ಯಿಂದ ಕಾಲಿಮಾತೆಯ ಸನ್ನಿಧಿಗೆ. ೧೯ ಜುಲೈ.
ಬೆಳಿಗ್ಗೆ ಕ್ಯಾಂಪ್ ನಿಂದ ಹೊರಗೆ ಬಂದು ನೋಡಿದರೆ ಮೋಡವಿಲ್ಲದ ಸುಂದರ ಬೆಳಗು ಮುತ್ತಿನ ನೀರನ್ನು ಚೆಲ್ಲುತ್ತಾ ಇತ್ತು. ಎಲ್ಲರೂ ಕ್ಯಾಮೆರಾ ತಂದು ಫೋಟೋ ತೆಗೆದುಕೊಂಡೆವು. ಪ್ರಾತರ್ವಿಧಿ,ಉಪಹಾರ ಗಳನ್ನೂ ಮುಗಿಸಿ ಚಾರಣ ಪ್ರಾರಂಭಿಸಿದೆವು.ಇವತ್ತಿನ ಚಾರಣ ಕೇವಲ ೯km. ಆದರೆ ಆಮ್ಲಜನಕದ ಕೊರತೆಯಿಂದ ಏದುಸಿರು ಬಿಡುತ್ತ ನಡೆದೆವು. ಇಲ್ಲಿ ಉಗ್ರವಾದಿಗಳ ಭಯದಿಂದ ITBPಯವರು ನಮ್ಮ ಹಿಂದೆ ಮುಂದೆ ಬರುತ್ತಿದ್ದರು.ನಮ್ಮಲ್ಲಿದ್ದ ಇಬ್ಬರು ಡಾಕ್ಟರುಗಳಲ್ಲಿ ಗೋವಿಂದರಾಜು ಎಂಬುವರು ಅವರ ಪತ್ನಿ ಬಿದ್ದು ಕೈ ಮುರಿದುಕೊಂಡಿದ್ದರಿಂದ ಧಾರ್ಚುಲ ದಿಂದಲೇ ವಾಪಸ್ಸು ಹೋಗಿದ್ದರು.ಮೈಸೂರಿನ ಆನಂದ್ ಎಂಬ AIIMS ನಲ್ಲಿ ಕೆಲಸ ಮಾಡುವವರು ಸ್ವಲ್ಪ ಕಷ್ಟದಿಂದಲೇ ಸ್ವಲ್ಪ ಕುದುರೆ ಸ್ವಲ್ಪ ನಡಿಗೆ ಹೀಗೆ ಕಷ್ಟ ಪಡುತ್ತಿದ್ದರು. ಅಂತು ಕಾಲಾಪಾನಿ ತಲುಪಿದಾಗ ೧೧ ಗಂಟೆ. ಎಲ್ಲ ೧೩ ಜನ ಹೆಂಗಸರೂ ಒಂದೇ snow hutನಲ್ಲಿ ಉಳಿದೆವು.ದಾರಿಯಲ್ಲಿ ಕಾಳಿ ದೇವಸ್ಥಾನ. ಅದಕ್ಕೂ ೧ km ಮೊದಲೇ ಬಿಸಿನೀರಿನ ಬುಗ್ಗೆ ಒಂದಿದೆ,ಬೇಕಾದರೆ ಸ್ನಾನ ಮಾಡಿ ಬನ್ನಿ ಎಂದರು. ನಾನು , ಹರ್ಶೀನ,ಚಂದ್ರ, ಬಟ್ಟೆ, ಸೋಪ್,ತೆಗೆದುಕೊಂಡು ಹೊರಟೆವು.ಮೊದಲೇ ಹೊರಟ ಕೆಲವರು ದೂರವೆಂದು ವಾಪಸ್ಸು ಬಂದರು. ನಾವಂತೂ ಸ್ನಾನ ಮಾಡಿ ದೇವರಿಗೆ ನಮಸ್ಕರಿಸಿ ಊಟ ಮಾಡೋಣ ಎಂದು ಹೋದೆವು.ಒಂದು km ನಡೆದು ಚಪ್ಪಲಿ ಕಾಲಿನಲ್ಲಿ ಜಾರುತ್ತಾ ಕಷ್ಟಪಟ್ಟು ಇಳಿದು ಒಬ್ಬೊಬ್ಬರಾಗಿ ಒಂದೊಂದು ಬಕೆಟ್ ಬಿಸಿನೀರನ್ನು ತೆಗೆದುಕೊಂಡು ಬಂದು ಅಲ್ಲಿದ್ದ ಪುಟ್ಟ ಬಚ್ಚಲಿನಲ್ಲಿ ಸ್ನಾನ ಮಾಡುವಾಗ ಸಾಕು ಬೇಕಾಯಿತು.ಜ್ಯೋತಿ ಶಿರೀಶ್, ಕೊಡಗಿನ ಆಶಾ,ಸುಧಾ,ಉಷಾ,ರಾಣಿ ಎಲ್ಲರೂ ಸೇರಿ ಜಾರುತ್ತಾ ಹತ್ತಿ ದೇವಸ್ಥಾನ ಸೇರಿ ಅಷ್ಟೋತ್ತರ ಹೇಳಿಕೊಂಡು ನಮಸ್ಕರಿಸಿ ಕ್ಯಾಂಪ್ ಗೆ ಬಂದು ಊಟ ಮಾಡಿದೆವು. ಪಾಪ ಅಡಿಗೆಯವರು ನಮಗಾಗಿ ಕಾಯುತ್ತಿದ್ದರು. ರೆಸ್ಟ್ ಟೀ ಮುಗಿಸಿ ಎಲ್ಲರೂ ಇಮಿಗ್ರೇಷನ್ ಫಾರಂ ತುಂಬಿದೆವು. ಮತ್ತೆ ಕಾಳಿಗುಡಿ ಯಲ್ಲಿ ಭಜನೆ. ಕಾಲಿನದಿಯು ಇನ್ನೂ ಮೇಲೆ ಲಿಪು ಶಿಖರದಲ್ಲಿ ಹುಟ್ಟುವುದಾದರೂ ಇಲ್ಲಿ ಗರ್ಭಗುಡಿಯಲ್ಲಿ ಉಗಮ ವೆಂದು ತೋರಿಸುತ್ತಾರೆ. ದೇವಿಯ ಪಕ್ಕದಲ್ಲಿಯೇ ಹಲಗೆಯೊಂದನ್ನು ಎತ್ತಿ ನೀರು ಉಕ್ಕುವುದನ್ನು ಪೂಜಾರಿಯು ತೋರಿಸಿದರು. ಭಜನೆ ಇಂಪಾಗಿತ್ತು. ನಾವು ಐಗಿರಿ ನಂದಿನಿ ಹಾಡಿದೆವು.
ದೆಹಲಿ ಬಿಟ್ಟಾಗಿನಿಂದ ಸುದರ್ಶನ ಕ್ರಿಯೆ ಮಾಡಿಲ್ಲ. ಏಕಾದಶಿ ಉಪವಾಸ ಒಂದೂ ಇಲ್ಲ. ಊಟ ತಿಂಡಿ ಕೊಟ್ಟಾಗ ಸೇರಿದಷ್ಟು ತಿಂದು ಬಿಡುವುದು. ಆದರೆ ರಾಧಿಕಾ ಮೇಡಂ ಉಪದೇಶಿಸಿದ ಮಂತ್ರವನ್ನು ಮಾತ್ರ ಚಾರಣದ ಉದ್ದಕ್ಕೂ ಜಪಿಸುತ್ತಾ ಇರುತ್ತಿದ್ದೆ. ಅದಕ್ಕಾಗಿ ಹೆಚ್ಚಾಗಿ ಗುಂಪಿನಲ್ಲಿ ನಡೆಯದೆ ಒಬ್ಬಳೇ ಇರಲು ಇಷ್ಟ ಪಡುತ್ತಿದ್ದೆ.
ನಾವು ಇದುವರೆಗೂ ತೆಗೆದುಕೊಂಡ ಫೋಟೋ ರೀಲ್ ಗಳನ್ನೂ ಕಾಲಾಪಾನಿಯಲ್ಲೇ deposit ಮಾಡಿದೆವು.ಇಮಿಗ್ರೇಷನ್ ಫಾರಂ ಮತ್ತು ಪಾಸು ಪೋರ್ಟ್ ತೆಗೆದುಕೊಂಡು ಹೋಗಿ ಆಫೀಸರ್ ಗೆ ತೋರಿಸಿ ಊಟ ಮುಗಿಸಿ ಮಲಗಿದೆವು.
ನಭಿಡಾಂಗ್. ಓಂ ಪರ್ವತದ ದರ್ಶನ.
೨೦ಜುಲೈ.
ಊಟವಾದ ನಂತರ ಮತ್ತೆ ಪ್ಯಾಕಿಂಗ್. ಇಡೀ ಯಾತ್ರೆಯಲ್ಲಿ ದಿನವೂ ಬ್ಯಾಗ್ ಪ್ಯಾಕಿಂಗ್ ಒಂದು ಕಿರಿ ಕಿರಿ. ಅದೂ ಪ್ಲಾಸ್ಟಿಕ್ ಸ್ಯಾಕಗಳು ಕುದುರೆಗಳ ಬೆನ್ನಮೇಲೆ ಹೊರಿಸಲು ಅನುಕೂಲವೆಂದು! ಒಂದು ಪರ್ಮನೆಂಟ್ ಸ್ಯಾಕ್ ಒಂದು ಡೈಲಿ ಸ್ಯಾಕ್ ಎಂದು ಇಲ್ಲಿಯದನ್ನು ಅಲ್ಲಿ ಅಲ್ಲಿಯದನ್ನು ಇಲ್ಲಿ ವರ್ಗಾಯಿಸುವುದು. ಏನಾದರೂ ಬೇಕಾದರೆ ಚೀಲವನ್ನು ಬಿಚ್ಚಿ ೧೦ ನಿಮಿಷ ಹುಡುಕಬೇಕು.ಬೇರೆ ದಾರಿಯಿಲ್ಲ.
ಜ್ಯೋತಿ ಶಿರಿಶ್ ಇಬ್ಬರೂ ಎರಡು ಗಂಟೆ ಹೊರಗಿನ ಇಬ್ಬನಿಯಲ್ಲಿ ಕುಳಿತು ಪ್ಯಾಕ್ ಮಾಡೇ ಮಾಡಿದರು. ಸಂಜೆ ಎಲ್ಲರೂ ಗಂಡಸರ ಸ್ನೋ ಕುಟೀರದಲ್ಲಿ ಸೇರಿದೆವು. ಮೊದಲು ಭಜನೆ ಆಯಿತು..ನಂತರ ಹಿಂದಿ ಸಿನೆಮಾದ ಹಾಡುಗಳು. L.O. ಹತ್ತಿರ ಹಾಡುಗಳ ದೊಡ್ಡ ಖಜಾನೆಯೇ ಇತ್ತು.ಏ ಮಾಲಿಕ್ ತೆರೆ ಬಂದೆ ಹಮ್ ಚೆನ್ನಾಗಿ ಹಾಡಿದರು.ಸಂಜೆಗೆ ರಂಗೇರುತ್ತಿತ್ತು.ಅಷ್ಟರಲ್ಲಿ ಊಟಕ್ಕೆ ಕರೆ ಬಂತು. ೮ ಗಂಟೆಗೆ ಊಟ ಮುಗಿಸಿ ಮಲಗಿದೆವು. ಎಲ್ಲರಿಗೂ ನಾಳೆಯ ಲಿಪು ಪಾಸ್ ಏರುವ ಚಿಂತೆ, ಆತಂಕ. ಇತ್ತ ರಜಾಯಿ ಎಷ್ಟು ತಣ್ಣಗಿತ್ತೆಂದರೆ ಒದ್ದೆ ಬಟ್ಟೆ ಮುಟ್ಟಿದಂತೆ ಆಗುತ್ತಿತ್ತು. ಒಂದು ದುಪಟ್ಟಾವನ್ನೋ ಏನಾದರೂ ಹಾಕಿ ಅದು ಮೈ ಶಾಖಕ್ಕೆ ಕೊಂಚ ಬಿಸಿಯಗುವಾಗ ಬೆಳಗಾಗುತ್ತಿತ್ತು. ಒಂದು ದುಪಟ್ಟಾ ಹಾಸಿ ಒಂದು ದುಪಟ್ಟಾ ಹೊದ್ದು ಅದರ ಮೇಲೆ ಅವರ ರಜಾಯಿ ಹೊದ್ದರೂ ನಿದ್ರೆ ಬರುವವರೆಗೆ ನಡುಕ ತಪ್ಪಿದ್ದಲ್ಲ.
ಲಿಪು ಪಾಸ್ ನ ಕಠಿಣ ಪರೀಕ್ಷೆ. ತಕಲಾಕೋಟ್ ನಲ್ಲಿ ಅನಾದರ. ೨೧ ಜುಲೈ.
ಬೆಳಿಗ್ಗೆ ೩. ೪೫.ಕ್ಕೆ ಟೀ ತಂದು ಎಬ್ಬಿಸಿದರು.೪. ೧೫ ಕ್ಕೆ ಎಲ್ಲರೂ ತಯಾರಾಗಿ, corn flakes ಮತ್ತು bournvita ಕುಡಿದು ಹೊರಟೆವು. ಇದುವರೆಗೆ ಎದುರಾದ ಕಷ್ಟಗಳನ್ನು ಆ ಶಿವನ ದಯದಿಂದ ದಾಟಿದ್ದೆವು. ಆದರೆ ಇಂದಿನದು ಚಾರಣದಲ್ಲಿ ಕಠಿಣವಾದ ಮತ್ತು ಮುಖ್ಯವಾದ ಒಂದು ಘಟ್ಟ. ನಭಿಡಾಂಗ್ ನಿಂದ ೭km ದೂರ ೪೦೦೦ಅಡಿ ಎತ್ತರದ ಲಿಪುವಿನ ಶಿಖರ ಏರಬೇಕು. ಅಲ್ಲಿ ಕುಳಿತು ಟಿಬೆಟ್ ನಿಂದ ವಾಪಾಸ್ ಬರುವ ತಂಡದ ದಾರಿಕಾಯಬೇಕು. ಈ ಕೆಲಸ ಹೊತ್ತೇರಿದ ನಂತರ ಕಷ್ಟವಂತೆ.ಅದಕ್ಕಾಗಿ ಬೆಳಗಿನ ಜಾವ ಅಥವಾ ನಡು ರಾತ್ರೆ ಈ ವಿನಿಮಯ ನಡೆಯುತ್ತೆ. ನಮ್ಮ L.O. ಗೆ ಫೋನ ನಲ್ಲಿ ಬಂದ ಸಮಾಚಾರದಂತೆ ೬ನೆ ತಂಡವು ಬರುವ ಹೊತ್ತು ಬೆಳಗಿನ ೯ ಗಂಟೆಗೆ. ಸ್ವಲ್ಪ ನಡೆದೆ ಆದರೆ ಉಸಿರು ಹತ್ತಿಕೊಂಡು ಬರುತ್ತಿತ್ತು. ಕುದುರೆಯ ಮೇಲೆ ಕುಳಿತು ೪೦೦೦ ಅಡಿ ಕಡಿದಾದ ಏರನ್ನು ಹತ್ತಿದೆವು. ಕಣ್ಣು ಕಾಣಿಸುವಷ್ಟೂ ದೂರ ಹಿಮ ಹರಡಿತ್ತು. ಇಲ್ಲಿಂದ ಮುಂದೆ ನಮ್ಮ ಇಂಡಿಯಾದ ಪೋರ್ಟರ್,ಕುದುರೆ ಬರುವಂತಿಲ್ಲ. ಅವರಿಗೆ ಅವರ ಕೂಲಿ ಕೊಟ್ಟು ಕಳಿಸಬೇಕು. ಪೋರ್ಟರ್ ಗೆ ೨೨೦೦/ರೂ ಕುದುರೆಯವನಿಗೆ ೨೬೦೦/ರೂ ಕೊಟ್ಟು ಕಳಿಸಿದೆ. ನಾನು ಕುದುರೆ ಹತ್ತಿದ್ದು ಒಂದೇ ದಿನಕ್ಕಾದರೂ ಅವರ ಕೂಲಿ ಅವರಿಗೆ ಕೊಡಲೇ ಬೇಕು. ನಮ್ಮೊಂದಿಗೇ ೭ ದಿನ ನಡೆದಿರುತ್ತಾರೆ.
ನಂತರ ಹಿಮದ ಮೇಲೆ ಜಾರುತ್ತ ಬೀಳುತ್ತಾ ಉಳಿದ ಅರ್ಧ km ಹತ್ತಿ ಪರ್ವತದ ನೆತ್ತಿಗೆ ಬಂದೆವು. ಒಂದು ಕೊಡುಗಲ್ಲನ್ನು ಒರಗಿ ಕುಳಿತೆ. ಗಾಳಿಯಿಂದ ಸ್ವಲ್ಪ ಮಟ್ಟಿಗೆ ರಕ್ಷಣೆಗಾಗಿ. ೦ ಡಿಗ್ರೀ ತಾಪಮಾನ.೧೭,೦೦೦ ಅಡಿ ಎತ್ತರದಲ್ಲಿ ಸಣ್ಣಗೆ ಬೀಳುತ್ತಿದ್ದ ಹಿಮ,ಬೀಸುವ ಗಾಳಿಯ ಕೊರೆತ. ೪ ಪದರಿನ ಬಟ್ಟೆ ತೊಟ್ಟಿದ್ದರೂ ನಡುಕ. ಮೇಲೊಂದು raincoat ತೊಟ್ಟೆವು. ಮಾತು ಮರೆತು ಶಿವ ಶಿವಾ ಎಂದು ಜಪಮಾಡುತ್ತಾ ಅರ್ಧ ಗಂಟೆಯೋ ಒಂದು ಗಂಟೆಯೋ ಆಗಿರಬೇಕು.ಅಷ್ಟರಲ್ಲಿ ಓಂ ನಮಃ ಶಿವಾಯ, ಭಂ ಭಂ ಭೋಲೆ, ಹರ ಹರ ಮಹಾದೇವ್ ಎಂಬ ಘೋಷಣೆ ಕೇಳಿ ಬಂತು. ಯಾತ್ರಿಗಳ ವಿನಿಮಯ ವಾಯಿತು.ಅತ್ತಲಿಂದ ಚೀನಾದ ಪೊಲೀಸರು ೬ನೆ ತಂಡದವರನ್ನು ತಲುಪಿಸಿ ೧೫ನೆ ತಂಡದ ನಮ್ಮನ್ನು ಕರೆದುಕೊಂಡು ಹೊರಟರು. ೩ km,೩೦೦೦ ಅಡಿಗಳ ಸೀದಾ ಇಳಿಜಾರು.ಹಿಮದಿಂದ ದಾರಿಮುಚ್ಚಿತ್ತು. ಎಲ್ಲರೂ ಒಂದೆರಡು ಬಾರಿ ಬಿದ್ದು ಎದ್ದೆವು. ಆಶಿಶ್ ಪಟೇಲ್,ಪಾರ್ಥಿವ್ ಷಾ, ಪಾಂಡ್ಯ ಮುಂತಾದವರೆಲ್ಲ ನಮ್ಮನ್ನು ಕೈ ಹಿಡಿದು ದಾಟಿಸಿದರು. ಇಳಿದಮೇಲೆ ನೋಡಿದರೆ ದೂರದಲ್ಲಿ ಎಳೆ ಬಿಸಿಲು,ಹಿಮಪಾತವಿಲ್ಲ. ಹಿಮಾಲಯದ ಗಿರಿ ಶಿಖರಗಳೆಲ್ಲ ಹೊಂಬಿಸಿಲಿಗೆ ಥಳಥಳನೆ ಹೊಳೆಯುತ್ತಿದ್ದವು. ಕ್ಷಣದಲ್ಲೇ ಎಂತಹ ಬದಲಾವಣೆ!ಇಳಿಜಾರು ಮುಗಿದು ರಸ್ತೆ ತಲುಪಿದಾಗ ನನಗೇಕೋ ಅಳು ಬಂದು ಬಿಟ್ಟಿತು. ಅಪ್ಪಾಜಿ ಆಪ್ತೆಅವರು ಸಮಾಧಾನ ಮಾಡಿ ಕುಡಿಯಲು ನೀರು ಕೊಟ್ಟು ಕೈ ಹಿಡಿದು ನಡೆಸಿದರು.
೬ನೆ ತಂಡವನ್ನು ಬಿಡಲು ಬಂದ ಚೀನಿ ಕುದುರೆಯವರು ನಮ್ಮನ್ನು ತಕಲಾಕೋಟ್ ಕನಕ ತಲುಪಿಸಬೇಕಿತ್ತು.ಆದರೆ ಅವರು ಖಾಲಿ ಹೋದರೇ ವಿನಃ ನಮ್ಮನ್ನು ಕುದುರೆ ಹತ್ತಿಸಲಿಲ್ಲ.ಲಿಪು ಪಾಸ್ ಇಳಿದನಂತರವೂ ಸುಮಾರು ೩ ಗಂಟೆಗಳ ಕಾಲ ನಡೆದೆವು.ಆನಂತರ ಗೈಡ್ ಒಬ್ಬ ಸಿಕ್ಕಿ ನಮ್ಮನ್ನು ಕುದುರೆಗಳ ಮೇಲೆ ಹತ್ತಿಸಿ ಬಸ್ ನಿಂತ ಜಾಗಕ್ಕೆ ಕಳಿಸಿದ. ಬಸ್ ಕಂಡಿದ್ದೇ ಎಲ್ಲರಿಗೂ ಹೋದ ಜೀವ ಬಂದಂತೆ ಆಯಿತು. ಹತ್ತಿ ಕುಳಿ ತಿದ್ದೊಂದೇ ಗೊತ್ತು. ನನಗೆ ಕಣ್ಣು ಹತ್ತಿತು. ನಮ್ಮ ಲಗೇಜ್ ಕುದುರೆಗಳ ಮೇಲೆ ಬಂತು. ಎಲ್ಲವನ್ನೂ ಬಸ್ ಟಾಪ್ ಗೆ ಏರಿಸಿದ ಮೇಲೆ ಬಸ್ ಹೊರಟಿತು. ೧೯km ನ ಅಂಕು ಡೊಂಕು ಪರ್ವತದ ದಾರಿ ಕ್ರಮಿಸಲು ಒಂದೂವರೆ ಗಂಟೆ ಆಗಿರಬೇಕು. ಹಸಿವು ಬಳಲಿಕೆಯಿಂದ ತೂಕಡಿಸುತ್ತಾ ಕುಳಿತೆವು.
ನಮ್ಮ ಭಾರತದ ಭಾಗದಲ್ಲಿ ಹಿಮಾಲಯದ ತಪ್ಪಲು,ಕಣಿವೆಗಳು, ಹಚ್ಚ ಹಸಿರು. ಬಣ್ಣ ಬಣ್ಣ ದ ಹೂಗಳು. ಚಿಕ್ಕ ದೊಡ್ಡ ಜಲಪಾತಗಳು. ಮೆಲ್ಲಗೆ ಮೈದಡುವುವಂತಹ ಮೆಲುಗಾಳಿ. ಚಾರಣದ ಆಯಸವನ್ನೆಲ್ಲ ಪರಿಹಾರ ಮಾಡುತ್ತಿದ್ದವು. ಆದರೆ ಇಲ್ಲಿ ಟಿಬೆಟ್ ನಲ್ಲಿ ಅದೇ ಹಿಮಾಲಯ ಬೋಳು ಬೆಟ್ಟ. ಕಂದು ಮಣ್ಣಿನ ಗುಡ್ಡಗಳು. ಎಲ್ಲೆಲ್ಲೂ ನಾಶವಾದ ಬೌದ್ದ ಮಠಗಳು. ಒಂದು ಹಸಿರು ಹುಲ್ಲು ಕಡ್ಡಿಯೂ ಕಾಣಲಿಲ್ಲ. ನದಿಯೊಂದು ಕಣ್ಣಿಗೆ ಬಿತ್ತು. ಅದೂ ಕೊಚ್ಚೆ ಯಂತೆ ಕಾಣುತ್ತಿತ್ತು. ಅಂತೂ ತಕಲಾಕೊಟ್ ತಲುಪಿದೆವು.ಇದ್ದೊಂದೇ ಮುಖ್ಯ ರಸ್ತೆಯಲ್ಲಿದ್ದ ಪುರಾಂಗ್ ಗೆಸ್ಟ್ ಹೌಸ್ ನ ಮುಂದೆ ಬಸ್ ನಿಂತಿತು. ಎಲ್ಲರೂ ಇಳಿದು ಹೋಗಿ ಒಂದು ದೊಡ್ಡ ಹಾಲ್ ನಲ್ಲಿ ಕುಳಿತೆವು. ಭಾರತದಲ್ಲಿ ಚಾರಣ ಮಾಡುವಾಗ ಎದುರಾದ ಹಳ್ಳಿಗರು ಯಾತ್ರಿಕರು ITBPಯವರು, kmvnನವರು ನಮ್ಮನ್ನು ತುಂಬಾ ಆದರದಿಂದ ಕಾಣುತ್ತಿದ್ದರು.ಓಂ ನಮಃ ಶಿವಾಯ ಎಂದೇ ಸ್ವಾಗತಿಸುತ್ತಿದ್ದರು. ಆದರೆ ಇಲ್ಲಿ ಅನಪೇಕ್ಷಿತ ಅಥಿತಿಗಳಂತೆ ತಾತ್ಸಾರ ಅಸಡ್ಡೆ ಗಳನ್ನೂ ಎದುರಿಸಬೇಕಾಯಿತು. ಈ ವಿಚಾರ ನಮಗೆ ದೆಹಲಿಯಲ್ಲೇ ಗೊತ್ತಿತ್ತು. ಆದರೂ ಈಗ ಸ್ವಲ್ಪ ಕಿರಿ ಕಿರಿ ಆಯಿತು. ಆದರೆ ಕೈಲಾಸ ಯಾತ್ರೆಗಾಗಿ ಎಲ್ಲವನ್ನೂ ಸಹಿಸಬೇಕಾಗಿತ್ತು. ಬೆಳಿಗ್ಗೆ ೪ ಗಂಟೆಗೆ ತಿಂದ ಕಾರ್ನ್ flakes ಯಾವಾಗಲೋ ಅರಗಿತ್ತು.ಈಗಾಗಲೇ ಗಂಟೆ ೩. ಹಸಿವಾಗುತ್ತಿತ್ತು. ಅಂತೂ ಚೀನಾದ ಅಧಿಕಾರಿಗಳು ಬಂದರು.ಬಂದವನೇ ಶಾಲೆಯಮಕ್ಕಳನ್ನು ಗದರಿಸುವಂತೆ ಸೈಲೆನ್ಸ್ ಎಂದ ಒಬ್ಬ. ಇನ್ನೊಬ್ಬ ಸಿಗರೇಟ್ ಹೊತ್ತಿಸಿದ! ನಮ್ಮ L.O. ಯಾತ್ರಿಗಳ ಲಿಸ್ಟನ್ನು ಕೊಟ್ಟರು.ಅದರಂತೆ ಹೆಸರು ಕರೆದಾಗ ಎಲ್ಲರೂ ನಮ್ಮ ನಮ್ಮ ಪಾಸ್ಪೋರ್ಟ್ ನೊಡನೆ ಹೋಗಿ ಮುಖ ತೋರಿಸಿದೆವು.ನಮ್ಮ ನಮ್ಮ ಲಗೇಜ್ ಬಿಚ್ಚಿ ತೋರಿಸಿದೆವು. ಕ್ಯಾಮೆರಾ ಓಪನ್ ಮಾಡಿ ತೋರಿಸಿದೆವು. ಅಂತೂ ಎಲ್ಲ ಮುಗಿಸಿ ರೂಂ ಸೇರಿ ಟಾಯ್ಲೆಟ್ ಹುಡುಕಿಕೊಂಡು ಹೋದೆವು.ನೋಡಿ ಬೆಚ್ಚಿ ಬಿದ್ದೆವು. ೩೫ ವರ್ಷಗಳ ಹಿಂದೆ ದಾವಣಗೆರೆ ಯಲ್ಲಿ ಅಂತಹ ಟಾಯ್ಲೆಟ್ ಕಂಡಿದ್ದೆ.ಸಾಲಾಗಿ ೭-೮ ಇದ್ದವು ನಡುವೆ ಅಡ್ಡ ಗೋಡೆಗಳು ಒಂದಕ್ಕೂ ಬಾಗಿಲಿಲ್ಲ.ಕೊಳಕು ಬೇರೆ.ಆದರೆ ನಿರ್ವಾಹವಿಲ್ಲ. ಕೈಕಾಲು ಮುಖ ತೊಳೆದುಕೊಂಡು ಮಧಾಹ್ನ ದ ಊಟದ ದಾರಿ ಕಾಯುತ್ತಿದ್ದೆವು.ಆದರೆ ನಮ್ಮ ೩ ಗಂಟೆಗೆ ಟಿಬೆಟ್ ಟೈಮ್ ೫. ೩೦. ಭೂಗೋಳಿಕ ವಾಗಿ ನಮ್ಮ ಭಾರತವೂ ಟಿಬೆಟ್ ಒಂದೇ ಅಕ್ಷಾಂಶ ದಲ್ಲಿದ್ದರೂ ಇಡೀ ಟಿಬೆಟ್ನಲ್ಲಿ ಬೀಜಿಂಗ್ ಸಮಯವೇ. ನಮಗಿಂತ ೨. ೩೦ ಗಂಟೆ ಮುಂದೆ! ಕೆಟ್ಟದಾಗಿದ್ದ ನೂಡಲ್ಸ್ ಕೊಟ್ಟರು. ಹಿಂದಿ ಗೊತ್ತಿದ್ದವನೊಬ್ಬ ಬಂದು ಬಾತ್ ರೂಂ ಗಳು ಓಪನ್ ಇದ್ದಾವೆಂದು ತಿಳಿಸಿದ.ಹೆಂಗಸರಿಗೊಂದು ಗಂಡಸರಿಗೊಂದು ಬೇರೆ ಬೇರೆ ಬಾತ್ ರೂಂ ಇತ್ತು. ಬಿಸಿ ನೀರು ಇತ್ತು.ಸ್ನಾನ ಮಾಡಿ ಎರಡು ದಿನವಾಗಿತ್ತು.ಚೆನ್ನಾಗಿ ಸ್ನಾನ ಮಾಡಿ ಬಟ್ಟೆ ಒಗೆದು ಹಾಕಿದೆವು. ಊಟದ ಗಂಟೆ ಆಯಿತು. ಇನ್ನೂ ೫. ೩೦. ಆದರೆ ಅವರಿಗೆ ೮ ಗಂಟೆ. ಅನ್ನ,ನೀರಾದ ಟೊಮೇಟೊ ಸೂಪ್,ಏನೋ ತರಕಾರಿ,ಅನನಾಸ್ ಇತ್ತು.ರುಚಿ ಎಲ್ಲ ಮರೆತು ಏನೋ ಒಂದಿಷ್ಟು ತಿಂದೆವು. ನಭಿಧಾಂಗ್ ನಲ್ಲಿ ಗಂಟೆಗಟ್ಟಲೆ ಗಾಳಿಯಲ್ಲಿ ಕುಳಿತಿದ್ದರಿಂದ ಜ್ಯೋತಿ ಶಿರೀಶ್ ಇಬ್ಬರಿಗೂ ಜ್ವರ ಬಂದಿತ್ತು.ಇಬ್ಬರೂ ಊಟ ಮಾಡಲಿಲ್ಲ. ಇಬ್ಬರಿಗೂ ಸ್ವಲ್ಪ horlicks ಮತ್ತು tablets ಕೊಟ್ಟೆ. ಜ್ಯೋತಿಗೆ ವಿಕ್ಕ್ಸ್ ಹಚ್ಚಿ ತಿಕ್ಕುತ್ತ ಇಬ್ಬರಿಗೂ ನಿದ್ರೆ ಬಂತು.
ತಕಲಾಕೊಟ್ ನಲ್ಲಿ ಶಾಪಿಂಗ್. ೨೨ಜುಲೈ.
ಇವತ್ತು ವಿರಾಮದ ದಿನವಾದ್ದರಿಂದ ನಿಧಾನವಾಗಿ ಎದ್ದೆವು.ಪ್ರಾತರ್ವಿಧಿಗಳನ್ನು ಕಷ್ಟಪಟ್ಟು ಮುಗಿಸುವಾಗ ಉಪಾಹಾರದ ಗಂಟೆ ಆಯಿತು. ಸ್ನಾನವಿಲ್ಲ ಪೂಜೆಯಿಲ್ಲ ಕರಿದ ಬ್ರೆಡ್,ಬೇಯಿಸಿದ ಬ್ರೆಡ್,ಜಾಮ್,ಸಾಬುದಣೆ ಸಂಡಿಗೆ ಕರಿದ ಶೇಂಗಾ ಏನೇನೋ ಇತ್ತು. ಹೇಗೋ ಒಂದಿಷ್ಟು ತಿಂದೆವು. ಸ್ನಾನದ ಮನೆಯ ಬಾಗಿಲು ತೆಗೆದ ಕೂಡಲೇ ಹೋಗಿ ಸ್ನಾನ ಮಾಡಿ ಬಟ್ಟೆ ಒಗೆದುಕೊಂಡೆವು. ಊಟದ ಗಂಟೆಯಾದ ಕೂಡಲೇ ಹೋಗಿ ಊಟ ಮುಗಿಸುವಾಗ ನೇಪಾಳಿ ಮಾರ್ಕೆಟ್ನಲ್ಲಿ ಶಾಪಿಂಗ್ ಎಂದು ಹೊರಟೆವು.ಬಿಸಿಲಿನಲ್ಲಿ ಒಂದು km ನಡೆದು ಒಂದು ೩೦ ಮೆಟ್ಟಿಲು ಇಳಿದು ಒಂದು ಮೈದಾನದಲ್ಲಿದ್ದ ಮಾರ್ಕೆಟ್ ತಲುಪಿದೆವು. ಬಟ್ಟೆ ಬರೆ ತುಂಬಾ ಅಗ್ಗ,ಆದರೆ ಅವರ ಭಾಷೆ ನಮಗೆ ಬರದು,ನಮ್ಮದು ಅವರಿಗೆ ಬರದು. ನಾವು ಯಾವುದಾದರು ಬಟ್ಟೆ ನೋಡಿದರೆ ಕ್ಯಾಲ್ಕುಲೇಟರ್ ನಲ್ಲಿ ರೇಟ್ ಒತ್ತಿ ತೋರಿಸುತ್ತಿದ್ದರು. ನಾವು ಅದರ ಅರ್ಧ ಬೆಲೆಯನ್ನು ಒತ್ತುತ್ತಿದ್ದೆವು. ಬಾರ್ಗೈನ್ ತುಂಬಾ ನಡೆಯುತ್ತದೆ.ಜಾಕೆಟ್ ಸ್ಕಾರ್ಫ್ ಏನೇನೊ ಒಂದಿಷ್ಟು ವ್ಯಾಪಾರ ಮಾಡಿದೆವು.ಇವತ್ತು ನಮ್ಮ ಸಹ ಯಾತ್ರಿ ಚೋರಾವಾಲಾ ಅವರ ಬರ್ತ್ ಡೇ.ಅವರಿಗೆ ಗಿಫ್ಟ್ ಕೊಟ್ಟು ವಿಶ್ ಮಾಡಿದೆವು.
ತಕಲಾಕೊಟ್ ನಿಂದ ಧಾರ್ಚೆನ್. ಕೈಲಾಸ ದರ್ಶನ. ೨೩ ಜುಲೈ.
ನಿನ್ನೆಯದೇ ದಿನಚರಿ,ನಿನ್ನೆಯದೇ ಉಪಾಹಾರ ಮುಗಿಸಿ ಬಸ್ ಹತ್ತಿದೇವು. ನಿನ್ನೆಯೇ ಎಲ್ಲರೂ ಡಾಲರು ಗಳನ್ನು ಕೊಟ್ಟು ಯುವಾನ್ ಖರೀದಿಸಿದ್ದೆವು.೬೦೧ $ ಗಳನ್ನೂ ಚೀನಾದ ಟ್ರಾವೆಲ್ ಏಜನ್ಸಿ ಗೆ ಕೊಟ್ಟೆವು. ಕುದುರೆ ಪೋರ್ಟರ್ ಗಳಿಗೂ ಮೊದಲೇ ಕೊಟ್ಟುಬಿಡಬೇಕು. ನಮ್ಮ ಭಾರತದ ಪೋರ್ಟರ್ ಗಳು ಮಾಜಿ ಎಂದು ಕರೆದು ಕೈ ಹಿಡಿದು ನಡೆಸುತ್ತಾರೆ. ಕುದುರೆಯವರು ಹತ್ತಿಸುವಾಗ ಇಳಿಸುವಾಗ ತುಂಬಾ ಎಚ್ಚರಿಕೆಯಿಂದ ನೋಡಿಕೊಳ್ಳುತ್ತಾರೆ. ಸಂಜೆ ಲಗೇಜ್ ಬಂದ ಮೇಲೆ ನಮ್ಮ ನಮ್ಮ ಲಗೇಜ್ ಅನ್ನು ನಮ್ಮ ನಮ್ಮ ರೂಂ ಗೆ ತಂದು ಕೊಡುತ್ತಾರೆ. ಬೇಕಾದರೆ ಪ್ಯಾಕಿಂಗ್ ಸಹ ಮಾಡಿಕೊಡುತ್ತಾರೆ.೬ದಿನಕ್ಕೆ ಅವರಿಗೆ ನಾವು ಕೊಡುವುದು ಪೋರ್ಟರ್ ಗೆ ೨೨೦೦/ರೂ,ಕುದುರೆಗೆ ೨೫೦೦/ರೂ. ಆದರೆ ಚೀನಾದಲ್ಲಿ ೩ ದಿನಗಳ ಕೈಲಾಸ ಪರಿಕ್ರಮಕ್ಕೆ ಕುದುರೆಗೆ ೪೫೦೦/ರೂ ಪೋರ್ಟರ್ ಗೆ ೯೦೦/ರೂ ಇವರು ನಮ್ಮೊಂದಿಗೆ ತೀರಾ ಒರಟಾಗಿ ನಡೆದುಕೊಳ್ಳುತ್ತಾರೆ. ಅವರಿಗೆ ನಮ್ಮ ಭಾಷೆ ಬರದಿದ್ದರೂ ಉತರೊ, ಚಲೋ,ಎರಡು ಚೆನ್ನಾಗಿ ಬರುತ್ತದೆ.ಕಾಲುನೋವಿನಿಂದ ನಡೆಯಲಾಗುತ್ತಿದ್ದರೂ ಉತರೊ ಚಲೋ ಎನ್ನುತ್ತಾರೆ. ಆದರೆ ಬೇರೆ ಗತಿಯಿಲ್ಲ.ನಾನು ಕುದುರೆ ತೆಗೆದುಕೊಂಡೆ. ನಾನು ರಾಣಿ ಇಬ್ಬರೂ ನಮ್ಮ ಸಾಮಾನನ್ನು ಒಂದೇ ಬ್ಯಾಗ್ ಗೆ ಹಾಕಿ ಒಂದೇ ಪೋರ್ಟರ್ ಸಾಕೆನ್ದೆವು. ಹಾಗೆ ಒಂದೊಂದು ಬ್ಯಾಕ್ ಪ್ಯಾಕ್ ನಲ್ಲಿ ಕ್ಯಾಮೆರಾ ಬಿಸ್ಕೆಟ್,ನೀರು,ಡ್ರೈ ಫ್ರೂಟ್ ಎಲ್ಲ ಜೋಡಿಸಿಕೊಂಡೆವು. ಧಾರ್ಚೆನ್ ನಲ್ಲಿ ರೂಂ ಸೇರಿದೊಡನೆಯೇ ನಮ್ಮ ಲಂಬಾಣಿಗಳನ್ತಹ ಹೆಂಗಸರು,ಮಣಿಸರ ಗಂಟೆ ಅದು ಇದು ಮಾರಲು ನಮ್ಮ ರೂಂ ಒಳಗೆ ಸೇರಿಕೊಂಡರು. ಇಲ್ಲಿಯೇ ನಮಗೆ ಕೈಲಾಸದ ಮೊದಲ ದರ್ಶನವಾಯಿತು. ಎಲ್ಲರೂ ಭಕ್ತಿಯಿಂದ ನಮಸ್ಕರಿಸಿದೆವು. ಅಂತೂ ಹೆಚ್ಚಿನ ಸಂಕಷ್ಟಗಳಿಗೆ ಗುರಿಮಾಡದೆ ಇಲ್ಲಿಯವರೆಗೂ ಕರೆಸಿಕೊಂಡಿದ್ದಕ್ಕಾಗಿ ಕೃತಜ್ಞತೆ ಯಿಂದ ನಮಿಸಿದೆವು. ಇಂದು ನಾವು ಕರೆದುಕೊಂಡು ಬಂದ ಅಡಿಗೆಯವರು ಟೆಂಟ್ ಒಂದರಲ್ಲಿ ಸ್ಟವ್ ಇಟ್ಟುಕೊಂಡು ಬಿಸಿ ಬಿಸಿಯಾಗಿ ಅನ್ನ-ದಾಲ್ ಮಾಡಿ ಬಡಿಸಿದರು. ಬಿಸಿಯಾಗಿ ತಕ್ಕಮಟ್ಟಿಗೆ ರುಚಿಯಾಗಿದ್ದರೂ ಹಸಿವಿರಲಿಲ್ಲ.ಹೇಗೋ ಒಂದಷ್ಟು ತಿಂದೆವು. ಕೊರೆಯುವ ಚಳಿ,ನೀರು ಮುಟ್ಟಿದರೆ ಕೈ ಮರಗಟ್ಟುತ್ತದೆ. ಬಿಸಿ ನೀರು ಸ್ನಾನ ಯಾವುದೂ ಇಲ್ಲ. ಕುಡಿಯಲು ಮಾತ್ರ ಒಂದೊಂದು ರೂಂ ಗೆ ಒಂದೊಂದು ಬಿಸಿನೀರಿನ ಫ್ಲಾಸ್ಕ್. ಟಾಯ್ಲೆಟ್ ಎಲ್ಲ ಓಪನ್ ಏರ್.ವೆಟ್ ಟಿಶ್ಯೂ ನಿಂದ ಸ್ನಾನ.ನನ್ನ ಹತ್ತಿರವಿದ್ದ ಟಿಶ್ಯೂ ಈಗ ಎಲ್ಲರಿಗೂ ಉಪಯೋಗಕ್ಕೆ ಬಿತ್ತು.
ಕೈಲಾಸ ಪರಿಕ್ರಮ ಪ್ರಾರಂಭ. ೨೪ ಜುಲೈ.
ಈಗ L.O. ನಮ್ಮನ್ನು ೨ ತಂಡ ವಾಗಿ ವಿಂಗಡಿಸಿದರು. ಸ್ವಲ್ಪ ವಯಸ್ಸಾದವರನ್ನು ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಅನುಕೂಲ ವಾಗುವಂತೆ ಮಾನಸ ಸರೋವರದ ಪರಿಕ್ರಮಕ್ಕೆ ಕಳಿಸಿದರು.ಅವರ ಜೊತೆ ಜ್ಯೋತಿ,ಶಿರಿಶ್, ಹಿತೇಶ್,ಪಂಡ್ಯಾ ಮುಂತಾಗಿ ಕೆಲ ಯುವಕರು. ಅವರಿಗೆ ತತ್ಕಾಲಕ್ಕೆ ದೆಹಲಿಯ ಗುಪ್ತಾ ಅವರನ್ನು L.O. ಮಾಡಿದರು.ನಾನು, ವರ್ಮಾಜಿ,ಮೋದೀಜಿ,ಸೋಲಂಕಿ, ಕೊಡಗಿನ ೪ ಜನ ಸ್ನೇಹಿತೆಯರು,ಚೋರವಾಲಾ ದಂಪತಿಗಳು,ಲಲಿತ್ ದಂಪತಿಗಳು,ಆಶಿಶ್ ಪಟೇಲ್,ಅಪ್ಪಾಜಿ ಆಪ್ಟೆ,ಕೊಥಾರಿ ಅವರು,ಮೊದಲಾಗಿ ೧೭ ಜನ ನಮ್ಮ ತಂಡದಲ್ಲಿ ಉಳಿದೆವು.ಇಷ್ಟು ದಿನ ಸದಾ ನನ್ನೊಂದಿಗಿದ್ದ ಹರ್ಶೀನ ಈಗ ಬೇರೆ ತಂಡದಲ್ಲಿ ಸೇರಬೇಕಾಯಿತು. ಮಾನಸ ಸರೋವರದ ತಂಡದವರನ್ನು ಹೋರೆ ಕ್ಯಾಂಪ್ ನಲ್ಲಿ ಬಿಟ್ಟು ನಾವು ಮುಂದೆ ಯಮದ್ವಾರದ ತನಕ ಬಸ್ ನಲ್ಲಿ ಹೋದೆವು.
ಇಲ್ಲಿಂದ ೫೮kmನ ಪರಿಕ್ರಮ ಪ್ರಾರಂಭವಾಗುವುದು. ಈ ಯಮದ್ವಾರ ವೆಂಬುದು ಪಾಂಡವರು ಸ್ವರ್ಗಾರೋಹಣದ ಸಮಯದಲ್ಲಿ ದಾಟಿದ ದ್ವಾರವಂತೆ. ಇದರಲ್ಲಿ ಒಮ್ಮೆ ಹೊಕ್ಕು ಹೊರಬಂದವರಿಗೆ ಸಾವಿನ ಭಯವಿಲ್ಲವಂತೆ. ಎಲ್ಲರೂ ಹೊಕ್ಕು ಹೊರಬಂದೆವು. ಪಕ್ಕದಲ್ಲೇ ಒಂದು ಬೌದ್ದ ಸ್ಥೂಪವು ಪುಡಿಯಾಗಿ ಬಿದ್ದಿತ್ತು. ಸಾಂಸ್ಕೃತಿಕ ಕ್ರಾಂತಿ ಎಂದು ಚೀನಾ ವು ಟಿಬೆಟ್ ನಲ್ಲಿದ್ದ ಬೌದ್ದ ಮಠಗಳನ್ನೆಲ್ಲ ನಾಶ ಮಾಡಿತ್ತು. ಕೆಲ ಅವಶೇಷ ಗಳಲ್ಲಿ ಓಂ ಮನಿಪದ್ಮೆ ಹಮ್ ಎಂದು ಸಂಸ್ಕೃತ ದಲ್ಲಿ ಬರೆದಿತ್ತು.ಬುದ್ದನ ಚಿತ್ರಗಳೂ ಇದ್ದವು. ಇಲ್ಲಿ ಕೈಲಾಸ ನಮಗೆ ಸರಿಯಾಗಿ ಕಾಣಿಸಲಿಲ್ಲ ಮೋಡ ಕವಿದಿದ್ದರಿಂದ.
ನಮ್ಮ ಹೆಚ್ಚಿನ ಲಗೇಜ್ ಅನ್ನು ಧಾರ್ಚೆನ್ ನಲ್ಲಿಯೇ ಬಿಟ್ಟು ೩ ದಿನಗಳ ಅವಶ್ಯಕ ಬಟ್ಟೆ ಬರೆ ಗಳನ್ನಷ್ಟೇ ತಂದಿದ್ದೆವು.ನಾನೂ ರಾಣಿ ದೇವಯ್ಯ ಸೇರಿ ಒಂದೇ ಬ್ಯಾಕ್ ಪ್ಯಾಕ್ ಮಾಡಿದ್ದೆವು. ನಮ್ಮ ಪೋರ್ಟರ್ ಗೆ ಬ್ಯಾಗ್ ಭಾರವಾಯಿತಂತೆ.ಸ್ವಲ್ಪ ಸಾಮಾನನ್ನು ರಾಮಾಯಣ್ ಪ್ರಸಾದ ರ ಬ್ಯಾಕ್ ಪ್ಯಾಕ್ ಗೆ ವರ್ಗಯಿಸಿದೆವು. ನನ್ನ ಹತ್ತಿರವಿದ್ದ ಚಿಕ್ಕ ಬ್ಯಾಕ್ ಪ್ಯಾಕ್ ನಲ್ಲಿ ಕ್ಯಾಮೆರಾ ಡ್ರೈ ಫ್ರೂಟ್,ನೀರಿನ ಬಾಟಲಿ ಇತ್ತು. ಅದನ್ನು ನಾನೇ ಹೊರುವುದೆಂದು ನಿರ್ಧರಿಸಿದ್ದೆ.
ನಾವು ನಡೆಯಲು ಪ್ರಾರಂಭಿಸಿದ ೨ ಗಂಟೆಗಳ ನಂತರವಷ್ಟೇ ಕುದುರೆಗಳು ಹೊರಡುವುವಂತೆ. ನಮಗೆ ಈ ವಿಚಾರ ಗೊತ್ತೇ ಇರಲಿಲ್ಲ.ನಡೆಯುವವರು ಮುಂದೆ ಹೋಗಿ. ಕುದುರೆ ತೆಗೆದುಕೊಂಡವರು ಸಹ ನಿಧಾನ ವಾಗಿ ನಡೆಯುತ್ತಾ ಇರಿ.ಕುದುರೆಗಳು ಸಿಕ್ಕಿದ ನಂತರ ಕುದುರೆ ಹತ್ತಿ ಬನ್ನಿ ಎಂದು L.O. ಹೇಳಿ ಮುಂದೆ ನಡೆದು ಹೋಗಿಬಿಟ್ಟರು.ಸರಿ ಎಂದು ಎಲ್ಲರೂ ಹೊರಟೆವು. ನಾಲ್ಕು ಹೆಜ್ಜೆ ಇದುವಾಗಲೇ ಇಲ್ಲಿ ನಡೆಯುವುದು ಎಷ್ಟು ಕಷ್ಟ ಎಂದು ಗೊತ್ತಾಯಿತು.೨kg ಯಷ್ಟೂ ಇಲ್ಲದ ನನ್ನ ಬ್ಯಾಕ್ ಪ್ಯಾಕ್ ಹೊರಲು ದಿನಕ್ಕೆ ೪೦ ಯುವಾನ್ ನಂತೆ ಇನ್ನೊಬ್ಬ ಪೋರ್ಟರ್ ನನ್ನು ನೇಮಿಸಿಕೊಂಡೆ. ಬೆಳಗಿನ ೯. ೧೫. ೧೪,೦೦೦ ಅಡಿ ಎತ್ತರದ ಪ್ರದೇಶ, ನಡೆಯಲು ಪ್ರಾರಂಭಿಸಿದೆವು. ಅರ್ಧ ಗಂಟೆಯಲ್ಲೇ ನನಗೆ ಗೊತ್ತಾಯಿತು,ಇದು ನನ್ನ ಕೈಲಾಗುವ ಕೆಲಸವಲ್ಲ ಎಂದು. ಉಳಿದವರೆಲ್ಲರೂ ಮುಂದೆ ಹೋಗಿಬಿಟ್ಟಿದ್ದರು. ಶೀತಲ್ ಒಬ್ಬಳೇ ನನ್ನಂತೆ ಕಷ್ಟ ಪಡುತ್ತಿದ್ದಳು. ನಾನು ಅವಳಿಗೆ ಹೇಳಿದೆ ಕುದುರೆಗಳು ಬರುವ ವರೆಗೆ ಕಾಯೋಣ ಎಂದು. ಅವಳು ಒಪ್ಪದೇ ಮುಂದೆ ನಡೆದಳು.ನಾನೊಬ್ಬಳೆ,ಕಾಡಿನ ದಾರಿ. ಇರಲೂ ಆಗದೆ ನಡೆಯಲೂ ಆಗದೆ ನಿಧಾನವಾಗಿ ಹೆಜ್ಜೆ ಹಾಕುತ್ತಿದ್ದೆ. ತಿದಿಯೋತ್ತಿದಂತೆ ಬರುತ್ತಿದ್ದ ಏದುಸಿರು, ಕಣ್ಣಿನಿಂದ ತೊಟ್ಟಿಕ್ಕುತ್ತಿದ್ದ ನೀರು, ಬೆವರು,ನನಗೇನಾಗುತ್ತಿದೆ ಎಂದೇ ಗೊತ್ತಿಲ್ಲ.ಎಷ್ಟೋ ಜನ ಎದುರಿನಿಂದ ವಾಪಸ್ಸು ಬರುತ್ತಿದ್ದರು. ನೇಪಾಳ ದಿಂದ ಬಂದವರು ಇಲ್ಲಿನ ವಾತಾವರಣಕ್ಕೆ ಒಗ್ಗಿ ಕೊಳ್ಳಲಾಗದೆ ಉಸಿರಾಟದ ಕಷ್ಟಕ್ಕೆ ಒಳಗಾಗಿ ವಾಪಾಸ್ ಹೋಗುತ್ತಿದ್ದರು.ಏಳುತ್ತಾ ಬೀಳುತ್ತಾ ನಡೆದೇ ನಡೆದೇ. ಹೀಗೆ ನಡೆಯುವಾಗ ಬಲಗಡೆಯಿಂದ ಕೈಲಾಸ ಕಾಣಬೇಕಿತ್ತು. ಮೋಡಕವಿದು ಕಾಣಲಿಲ್ಲವೋ,ಅಥವಾ ಪ್ರಾಣವೇ ಬಾಯಿಗೆ ಬಂದಂತೆ ಆಗುತ್ತಿದ್ದರಿಂದ ನಾನೇ ನೋಡಲಿಲ್ಲವೋ ಈಗ ನನಗೆ ನೆನಪಿಲ್ಲ.೧೨ ಗಂಟೆಯ ಹೊತ್ತಿಗೆ ಎದುರಿನಿಂದ ಇಂಗ್ಲಿಷ್,ಹಿಂದಿ ಮಾತನಾಡಬಲ್ಲ ಗೈಡ್ ಒಬ್ಬ ಕುದುರೆಯೊಂದಿಗೆ ಬಂದ. ಅವನಿಗೆ ನನ್ನ ಪರಿಸ್ಥಿತಿ ಯನ್ನು ವಿವರಿಸಿ ನಾನು ಕುದುರೆಗಾಗಿ ಹಣ ಕೊಟ್ಟಿರುವುದಾಗಿಯೂ ತಿಳಿಸಿ ಈಗ ಈ ಕುದುರೆಯ ಮೇಲೆ ಕೂರಿಸಿ ಕ್ಯಾಂಪ್ ತಲುಪಿಸುವಂತೆ ಪ್ರಾರ್ಥಿಸಿದೆ. ಆದರೆ ಅವನು ಈ ಕುದುರೆ ನಾವು ನೇಮಿಸಿದ ಗುಂಪಿನದು ಅಲ್ಲವಂತೆ.ಆಗುವುದಿಲ್ಲ ಎಂದು ಬಿಟ್ಟ. ಅಷ್ಟರಲ್ಲಿ ನಮ್ಮ ಗೈಡ್ ಅಂತೆ ಒಬ್ಬಳು ಬಂದಳು. ಕೈ ಹಿಡಿದು ನಡೆಸಿದಳು.ಅರ್ಧ ಗಂಟೆ ನಡೆಯುವಾಗ ಒಂದು ಟೀ ಶಾಪ್ ಬಂದಿತು.ಅಲ್ಲಿ ಕೂರಿಸಿದಳು.ನನಗೆ ಏನಾಗುತ್ತಿದೆ ಎಂಬುದೇ ನನಗೆ ತಿಳಿಯುತ್ತಿಲ್ಲ. ಟೀ ಆದರೂ ಕುಡಿದರೆ ಸ್ವಲ್ಪ ಸರಿಹೋ ಗಬಹುದೆಂದು ಆರ್ಡರ್ ಮಾಡಿದೆ. ಕುಡಿಯಲು ಹೋದರೆ ಹೊಗೆ ವಾಸನೆಯ ಉಪ್ಪು ನೀರು.ಒಂದು ಗುಟುಕೂ ಕುಡಿಯಲು ಆಗಲಿಲ್ಲ. ಅಷ್ಟರಲ್ಲಿ ನಮ್ಮ ಕುಕ್ ಬಂದು ತನ್ನ ಟೀ ಹಣವನ್ನು ಕೊಡಿ ಎಂದ ಸರಿ ಎಂದು ೨ ಟೀ ಹಣ ಕೊಡುವಾಗ ನಮ್ಮ ಗೈಡ್ ಬಂದು ಕುದುರೆಗಳು ಬಂದಿರುವುದಾಗಿ ಹೇಳಿದಳು. ನನಗೊಂದು ಚೀಟಿ ಎತ್ತಲು ಹೇಳಿದಳು. ಆ ಕುದುರೆಯ ಮೇಲೆ ಹತ್ತಿದರೆ ೩೦ ನಿಮಿಷದಲ್ಲಿ ಕ್ಯಾಂಪ್ ಸಿಕ್ಕಿತು. ೩ ಗಂಟೆ ಗಳ ಕಾಲ ಸತ್ತೆವೂ ಬಿದ್ದೆವೋ ಎಂದು ನಡೆದ ಮೇಲೆ ಬಂದಿದ್ದಾನೆ ಈ ಭೂಪ. ಯಮದ್ವಾರದಲ್ಲಿಯೇ ಕುಳಿತಿದ್ದರೆ ಕುದುರೆಯ ಮೇಲೆ ಬಂದಿದ್ದರೆ ಈ ನಿಗೂಢ ಕಣಿವೆಯನ್ನು ಇಲ್ಲಿನ ಸ್ಪಂದನವನ್ನು ಅನುಭವಿಸಬಹುದಿತ್ತು. ಆದರೆ ನಡೆಯಲಾರದೆ ಹೆಣಗಾಡುತ್ತಿದ್ದ ನನಗೆ ಯಾವ ಸ್ಪಂದನವೂ ತಿಳಿಯಲಿಲ್ಲ.
ಶ್ರೀ ರಾಜಮಣಿ ತ್ರಿಗುಣಾಯಿತ್ ಅವರು ಬರೆದ At the eleventh hour, ಎಂಬ ಪುಸ್ತಕವನ್ನು ಓದುವಾಗ ನಾನು ಕೈಲಾಸ ಯಾತ್ರೆಗೆ ಮೊದಲೇ ಅದನ್ನು ಓದಿರಬೇಕಿತ್ತು,ಎನ್ನಿಸಿತು. ಆ ಪುಸ್ತಕದಲ್ಲಿ ಬರೆದಂತೆ ಈಗ ನಾವು ನಡೆದು ದಾಟಿದ್ದು ಲ್ಹಾ-ಚು ಕಣಿವೆ.ಅಂದರೆ ದೇವರ ಕಣಿವೆ.ಅದರ ಪಕ್ಕದಲ್ಲೇ ಹರಿಯುತ್ತಿರುವುದು ಲ್ಹಾ-ಚು ನದಿ.ಸ್ವಾಮಿರಾಮ ಅವರು ಬರೆದಂತೆ ಅವರ ಪೂರ್ವಜರ ಗುಹೆ ಅಲ್ಲೇ ಇದೆಯಂತೆ. ಆದರೆ ನಾನು ಮಾತ್ರ ಆಗ ಉಸಿರಾಡಲಾಗದೆ ಯೋಚಿಸುವ ಶಕ್ತಿ ಕಳೆದುಕೊಂಡಿದ್ದೆ.ನದಿ ಕಣಿವೆ ಪರ್ವತ ಯಾವುದನ್ನೂ ಆಸ್ವಾದಿಸುವ ಸ್ಥಿತಿಯಲ್ಲಿ ಇರಲಿಲ್ಲ, ಕುದುರೆಯ ಮೇಲೆ ಕುಳಿತಿದ್ದರೆ ಅದನ್ನೆಲ್ಲ ಆಸ್ವಾದಿಸಬಹುದಿತ್ತೆಂದು ಈಗ ಅನಿಸುತ್ತಿದೆ.
ಟಿಬೆಟ್ ನವರಿಗೆ ಇದು ದೇವರ ಕಣಿವೆ.ಲ್ಹಾ-ಚು ಕಣಿವೆ.ಅಂತೂ ಕ್ಯಾಂಪ್ ತಲುಪಿ ಕುದುರೆಯವನು ಉತರೋ ಎನ್ನುವಾಗ ದೆರಾಫುಕ್ ಕ್ಯಾಂಪ್ ನ ಪಕ್ಕದಲ್ಲೇ ಅಖಂಡ ಕೈಲಾಸದ ದರ್ಶನವಾಯಿತು. ಇದುವರೆಗೂ ಪಟ್ಟ ಕಷ್ಟಗಳೆಲ್ಲ ಮರೆತುಹೋಯಿತು. ಕುದುರೆಯಿಂದ ಜಿಗಿದು ಕ್ಯಾಮೆರಾ ಕೈಗೆತ್ತಿಕೊಂಡೆ.
ಕ್ಯಾಂಪ್ ಮಾತ್ರ ಕೊಳಲಾಗಿತ್ತು. ಲೇಡೀಸ್ ಗೆ ತಲಾ ೪ ಮಂಚಗಳಿದ್ದ ೨ ರೂಂ ಕೊಟ್ಟಿದ್ದರು. ನಾನು ತಲುಪುವಾಗ ಆಗಲೇ ಒಂದು ರೂಂನಲ್ಲಿ ಕೊಡಗಿನ ೪ ಜನ ಸ್ನೇಹಿತೆಯರು ಇದ್ದರು. ಇನ್ನೊಂದು ರೂಂ ಅನ್ನು ಲಲಿತ್ ಕುಮಾರ್ ಹಾಗು ಚೊರಾವಾಲಾ ದಂಪತಿಗಳು ತೆಗೆದುಕೊಂಡಿದ್ದರು. ನನಗೊಂದು cot ಬೇಕಲ್ಲ ಎಂದೆ. ನಾವು couples ಆದ್ದರಿಂದ ಆಗುವುದಿಲ್ಲ ಎಂದರು. ನನಗೋ ಸುಸ್ತು ಸಂಕಟ.L. Oಅವರನ್ನು ಹುಡುಕಿದರೆ ಅವರು,ರವೀಂದ್ರ ಸಿಂಗ್, ಆಶಿಶ್ ಪಟೇಲ್,ಮೋದಿಜಿ ಎಲ್ಲರೂ ಕೈಲಾಸವನ್ನು ಮುಟ್ಟಿ ಬರಲು ಹೊರಟುಬಿಟ್ಟಿದ್ದರು.ಕಣ್ಣುಒರೆಸಿಕೊಳ್ಳುತ್ತ gents ರೂಂ ನಲ್ಲಿ ಕುಳಿತೆ. ತಕ್ಷಣ ಆಶಾ ಉಷಾ ಇಬ್ಬರೂ ಬಂದು ನನ್ನನ್ನು ತಮ್ಮ ರೂಂ ಗೆ ಕರೆದುಕೊಂಡು ಹೋಗಿ ಒಂದು cot ಬಿಟ್ಟು ಕೊಟ್ಟರು.ಸ್ವಲ್ಪ ಬೇಸರದಿಂದಲೇ ಬಿದ್ದುಕೊಂಡಿದ್ದೆ. ಅಷ್ಟು ಹೊತ್ತಿಗೆ ಶೀತಲ್ ಬಂದು ತಮ್ಮ ಗಂಡಸರು ಬೇರೆ ರೂಂ ಗೆ ಹೋಗಿದ್ದಾರೆ,ನೀವು ಬನ್ನಿ ಎಂದು ಕರೆದರು.
ಅರ್ಧ ಗಂಟೆಯ ನಂತರ ಏನೋ ಕುಡಿಯಲು ಕೊಟ್ಟರು ಆಶಾ. ಕುಡಿದು ಎಲ್ಲರೂ ಹೊರಗಡೆ ಹೋದೆವು.ಚೆನ್ನಾಗಿ ಬಿಸಿಲಿತ್ತು. ಎಲ್ಲರೂ ಕ್ಯಾಂಪ್ ನ ಹಿಂಭಾಗದಿಂದ ಕೈಲಾಸ ಪರ್ವತದ ಕಡೆಗೆ ಹೊರಟೆವು. ಇಷ್ಟು ದಿನ ಫೋಟೋದಲ್ಲಿ ನೋಡಿ ಕಣ್ಣು ತುಂಬಿಸಿ ಕೊಳ್ಳುತ್ತಿದ್ದ ಕೈಲಾಸ ಈಗ ನಮ್ಮೆದುರು ಕೈ ಚಾಚಿದರೆ ಸಿಗುವುದೇನೂ ಎಂಬಂತೆ ಕಾಣುತ್ತಿದೆ. ಬೇಕಾದಷ್ಟು ಫೋಟೋ ತೆಗೆದುಕೊಂಡೆವು. ರಾಣಿ ಆಶಾ ಸುಧಾ ಒಂದು ಕಡೆ ಕುಳಿತರು. ನಾನೂ ಉಷಾ ಆದಷ್ಟು ಹತ್ತಿರ ಹೋಗೋಣ ಎಂದು ಹತ್ತಲು ಪ್ರಾರಂಭಿಸಿದೆವು. ಆದರೆ ಹತ್ತಿದಷ್ಟೂ ನನ್ನನ್ನು ಮುಟ್ಟುವುದು ಅಷ್ಟು ಸುಲಭ ವಲ್ಲ ಎಂದು ಪರ ಶಿವನು ಇನ್ನೂ ದೂರ ದೂರ ಹೋಗುತ್ತಿದ್ದಾನೋ ಎನ್ನಿಸಿತು. ಕಲ್ಲು ಬಂಡೆಗಳನ್ನು ಹಿಡಿದುಕೊಂಡು ನಿಧಾನವಾಗಿ ಮೇಲೆ ಮೇಲೆ ಹತ್ತಿರ ಹತ್ತಿರ ಸಾಗಿದೆವು. ಸುಮಾರು ಒಂದು ಗಂಟೆ ಹತ್ತಿರಬಹುದು, ಒಂದು ಕಡೆ ಮೋದಿಜಿ ಕುಳಿತಿದ್ದರು. ಸಂಗಡಿಗರು ಆಗಲೇ ಮುಂದೆ ಹೋಗಿದ್ದರಿಂದ ಒಬ್ಬರೇ ಹೋಗಲು ಭಯವಾಗಿ ಕುಳಿತಿದ್ದರು. ಉಷಾ ಸಿಕ್ಕಿದೊಡನೆ ಅವರಿಬ್ಬರೂ ಮುಂದೆ ಹೊರಟರು. ನಾನು ಮತ್ತೆ ಮೇಲೆ ಏರುವ ಸಾಹಸ ಮಾಡಲಿಲ್ಲ. ಅಲ್ಲಿಯೇ ಕಲ್ಲೊಂದರ ಮೇಲೆ ಕುಳಿತೆ.
ಎದುರಿಗೇ ಹಿಮಾಚ್ಚಾದಿತ ಕೈಲಾಸ! ಶಿವನ ಜತೆಯಿಂದ ಇಳಿದು ಬರುತ್ತಿರುವ ಗಂಗೆಯೂ ಎಂಬಂತೆ ಹರಿದು ಬರುತ್ತಿರುವ ಶುದ್ಧ ಸ್ಫಟಿಕದಂತಹ ಜಲಧಾರೆ. ಒಂದು ಬೊಗಸೆ ಎತ್ತಿ ಕುಡಿದರೆ ನೀರಿಗೆ ಸಕ್ಕರೆ ಬೆರೆಸಿದಂತೆ ಸಿಹಿ.ಆಯಾಸವೆಲ್ಲ ಕಳೆದು ಮನಸ್ಸು ಶಾಂತ ವಾಯಿತು. ನನ್ನ ಎಷ್ಟು ಜನ್ಮಗಳ ಪುಣ್ಯ ಫಲವೋ ಅಥವಾ ನಮ್ಮ ಹಿರಿಯ ಎಷ್ಟು ತಲೆಮಾರುಗಳು ಮಾಡಿದ ಪುಣ್ಯ ಫಲವೋ ನನ್ನನ್ನು ಇಲ್ಲಿಯವರೆಗೆ ಕರೆದು ತಂದು ಕೈಲಾಸ ದರ್ಶನ ಮಾಡಿಸಿತ್ತು!ಬೊಗಸೆಯಲ್ಲಿ ನೀರನ್ನು 
ಎತ್ತಿಕೊಂಡು ಎಲ್ಲ ದೇವರನ್ನೂ ನೆನೆಸಿಕೊಂಡು ಅರ್ಘ್ಯ ಕೊಟ್ಟೆ. ಹಿರಿಯ ಎಲ್ಲ ಸಂದು ಹೋದವರನ್ನೂ ನೆನೆಸಿ ಅವರ ಪಾಲಿನ ಅರ್ಘ್ಯ ವನ್ನೂ ಕೊಟ್ಟೆ. ಸ್ವಲ್ಪವೂ ಆಯಾಸವಿಲ್ಲ.ಬೆಳಿಗ್ಗೆ ನಡೆಯುವಾಗ ಆದದ್ದೆಲ್ಲ ಸುಳ್ಳೇನೋ ಎನ್ನಿಸುತ್ತಿತ್ತು. ಅದಕ್ಕಿಂತ ಎತ್ತರಕ್ಕೆ ಈಗ ಹತ್ತಿದ್ದೆವು. ಮೈ ಮನಸ್ಸು ಎರಡೂ ಎಷ್ಟು ಹಗುರವಾಗಿತ್ತೆಂದರೆ ಒಬ್ಬಳೇ ಮತ್ತಷ್ಟು ಮೇಲೇರಿದೆ. ಸಾರ್ಥಕತೆಯ ಭಾವದಿಂದ ಮನ ಪ್ರಸನ್ನವಾಗಿತ್ತು. ತುಂಬಿದ ಸಂತಸದಿಂದ ಮನಸ್ಸು ಮೂಕವಾಗಿತ್ತು. ಆ ಧನ್ಯತಾ ಭಾವ ವರ್ಣಿಸಲು ನನಗೆ ಸಾದ್ಯವಿಲ್ಲ. ಕಠಿಣ ತಪಸ್ಸಿನ ನಂತರ ದೇವರು ಪ್ರತ್ಯಕ್ಷವಾಗಿ ಏನು ವರಬೇಕೆಂದು ಕೇಳಿದರೆ ಏನು ಬೇಡಬೇಕೆಂದು ತಿಳಿಯದೆ ಗೊಂದಲಕ್ಕೀಡಾದಂತೆ ಇತ್ತು ನನ್ನ ಸ್ಥಿತಿ. ದೊಡ್ಡ ಹಾಸು ಬಂಡೆಯೊಂದರ ಮೇಲೆ ನನ್ನ ಜಾಕೆಟ್ ಅನ್ನು ಬಿಚ್ಚಿ ತಲೆದಿಮ್ಬಾಗಿ ಇಟ್ಟುಕೊಂಡು ಮಲಗಿದೆ. ಎಷ್ಟು ಹೊತ್ತು ಮಲಗಿದ್ದೇನೋ ತಿಳಿಯದು. ಈ ಏಕಾಂತ ತುಂಬಾ ಪ್ರಿಯವೆನಿಸಿತು. ಯಾವ ಭಯವಿಲ್ಲ, ಯಾವ ಆಯಾಸವೂ ಇಲ್ಲ. ತಾಯಿಯ ಮಡಿಲಲ್ಲಿ ತಲೆಯಿಟ್ಟು ಮಲಗಿದಷ್ಟು ನಿರಾತಂಕ!
ಸ್ವಲ್ಪ ಹೊತ್ತಿನ ನಂತರ ಚೋರಾವಾಲಾ ದಂಪತಿಗಳು ಕೆಲ ಟಿಬೆಟ್ ನ ಹೆಂಗಸರೊಂದಿಗೆ ಬಂದರು. ಸ್ವಲ್ಪ ಹೊತ್ತಿಗೆ ಮೊದಲು ಲೇಡೀಸ್ ರೂಂ ಸೇರಿಕೊಂಡು ನನಗೆ ಜಾಗವಿಲ್ಲ ಎಂದವರು,ನನ್ನ ಕೈಗೆ ಕ್ಯಾಮೆರಾ ಕೊಟ್ಟು ಫೋಟೋ ತೆಗೆಸಿಕೊಂಡರು. ನನ್ನ ಕುದುರೆಯವನ ೩-೪ ವರ್ಷದ ಮಗಳೂ ಅವರೊಂದಿಗೆ ಇದ್ದಳು. ಅವಳ ಫೋಟೋ ತೋರಿಸಿದರೆ ತುಂಬಾ ಖುಷಿ ಆಯಿತು ಅದಕ್ಕೆ. ಪಾಪ ನಮ್ಮ ಜೊತೆ ಅದೂ ೫೮kmನ ಕೈಲಾಸ ಪರಿಕ್ರಮ ಮಾಡ ಬೇಕಿತ್ತು. ಅಲ್ಲೇ ಕೆಲ ಕಲ್ಲು ಗಳನ್ನೂ ಆರಿಸಿಕೊಂಡೆ ಶಂಕರ್ ಕಂಕರ್ ಎಂದು.
ಅಷ್ಟು ಹೊತ್ತಿಗೆ ನಮ್ಮ ರೂಂ ನ ಕೀ ನನ್ನ ಹತ್ತಿರವಿದ್ದ ನೆನಪಾಯಿತು. ಉಷಾ ಇನ್ನೂ ಮೇಲೆ ಹೋಗಿದ್ದಳು. ಅವಳಿಗಾಗಿ ಕಾಯದೆ ನಿಧಾನವಾಗಿ ಕೆಳಗೆ ಇಳಿದು ಆಶಾ ಸುಧಾ,ರಾಣಿ ಕುಳಿತ ಜಾಗಕ್ಕೆ ಬಂದು ಸೇರಿದೆ.ಸ್ವಲ್ಪ ಹೊತ್ತಿಗೆ ಆಶೀಶ್ ಪಟೇಲ್ ಬಂದರು.ತೀರ ಹತ್ತಿರ ಹೋಗಿ ಕೈಲಾಸ ಪಾದದ ಸ್ಪರ್ಶ ಮಾಡಿ ಅಲ್ಲಿನ ತೀರ್ಥ ವನ್ನು ತಂದು ಕೊಟ್ಟರು. ರೂಂ ಗೆ ವಾಪಸ್ಸು ಬರುವಾಗ ಅಡಿಗೆಯವರು ಖಿಚಿಡಿ ಮಾಡಿದ್ದರು.ಬೆಳಗಿನಿಂದ ಏನೂ ತಿಂದಿರಲಿಲ್ಲ. ಆದರೂ ಅಷ್ಟೇನೂ ಹಸಿವಿರಲಿಲ್ಲ.
ಸೇರಿದಷ್ಟು ತಿಂದೆವು. ಚಾರಣದಲ್ಲಿ ಹೆಚ್ಚಾಗಿ ರಾತ್ರಿ ಒಂದೇ ಊಟ,ಬೆಳಿಗ್ಗೆ ಉಪಾಹಾರ,ಮಧ್ಯಾಹ್ನ ಊಟ ಹೆಚ್ಚಿನ ದಿನಗಳಲ್ಲಿ ಇರುತ್ತಿರಲಿಲ್ಲ.
ದೇರಾಪ್ಹುಕ್ನಿಂದ- ಡೋಲ್ಮಾ- ಜ್ಹೊಂಗ್ ಜೆರ್ಬು. ೨೫ಜುಲೈ.
ಅಂತೂ ರಾತ್ರಿ ಕಳೆದು ಬೆಳಗಾಯಿತು. ಸ್ನಾನದ ಚಿಂತೆ ಏನೂ ಇಲ್ಲ.ನೀರು ಮುಟ್ಟಿದರೆ ಕೈ ಮರಗಟ್ಟುತ್ತದೆ. ಟಿಶ್ಯೂ ನಿಂದಲೇ ಸ್ನಾನ.ಉಪಾಹಾರ ಮುಗಿಸಿ ತಯಾರಾಗುತ್ತಾ ಇದ್ದೆವು. ಹೊರಗಡೆ ಏನೋ ಗಲಾಟೆ. ಹೊರಗೆ ಬಂದು ನೋಡಿ ಮೂಕರಾದೆವು. ನಿನ್ನೆ ಬೆಳ್ಳಿಯ ಬೆಟ್ಟವಾಗಿದ್ದ ಕೈಲಾಸ ಇವತ್ತು ಬಂಗಾರದ ಬೆಟ್ಟ ವಾಗಿ ಸೂರ್ಯರಷ್ಮಿಯಲ್ಲಿ ಹೊಳೆಯುತ್ತಾ ಕುಳಿತಿತ್ತು. ನಿನ್ನೆಯ ಗಿಂತ ಸಂಪೂರ್ಣ ಭಿನ್ನವಾಗಿತ್ತು ಪರಶಿವನ ಈ ರೂಪು.ನಮ್ಮ ಮೇಲೆ ಶಿವನು ಪ್ರಸನ್ನ ನಾಗಿ ತನ್ನ ಇನ್ನೊoದು ರೂಪನ್ನು ತೋರಿದನೇನೊ ಎನಿಸಿತು.ಡೋಲ್ಮಾದ ಇಂದಿನ ಅಂತಿಮ ಪರೀಕ್ಷೆ ಗೆ ಬೇಕಾದ ಶಕ್ತಿಯನ್ನು ಕೊಡು ತಂದೆ ಎಂದು ಬೇಡುತ್ತಾ ಜಪಮಾಡುತ್ತಾ ಕ್ಯಾಂಪ್ ಬಿಟ್ಟೆವು. 
ಒಂದು km ನಡೆದು ನಾಲೆಯೊಂದನ್ನು ದಾಟಿದ ಮೇಲೆ ಕುದುರೆ ಗಳ ಮೇಲೆ ಕುಳಿತೆವು. ೬km ಕಡಿದಾದ ಏರು. ಗೈಡ್ ನಾವು ಹತ್ತಬೇಕಾಗಿದ್ದ ಶಿಖರವನ್ನು ತೋರಿಸಿದಳು. ಶಿವನಾಮವಲ್ಲದೆ ಬೇರೇನೂ ನಮ್ಮ ಆತಂಕವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ.ಆದ್ದರಿಂದ ನಮ್ಮ ಭಾರವನ್ನು ಕುದುರೆಯ ಮೇಲೆ ಹಾಕಿ ಉಳಿದೆಲ್ಲಾ ಭಾರವನ್ನೂ ಶಿವನ ಮೇಲೆ ಬಿಟ್ಟು ಕುಳಿತೆವು. ದೋಲ್ಮಪಾಸ್ ನ ವಾತಾವರಣ ಯಾವಾಗಲೂ ಅನಿಶ್ಚಿತ. ಯಾವಾಗಾದರೂ ಮಳೆ ಬರಬಹುದು,ಸುಂಟರ ಗಾಳಿ ಏಳಬಹುದು,ಹಿಮ ಬೀಳಬಹುದು. ನಾವು ಎಲ್ಲವನ್ನೂ ಎದುರಿಸಲು ತಯಾರಾಗಿರಬೇಕು. ಈಗ ಅರ್ಧ ಹತ್ತಿದಾಗ ಮಳೆ ಬೀಳಲು ಶುರುವಾಯಿತು. ಪರ್ವತದ ನೆತ್ತಿಯನ್ನು ತಲುಪಿದಾಗ ಅದು ಹಿಮವಾಯಿತು. ದೋಲ್ಮಾ ಪಾಸ್ ಯಿರುವುದು ಸಮುದ್ರ ಮಟ್ಟದಿಂದ ೧೮,೦೦೦ ಅಡಿ ಎತ್ತರದಲ್ಲಿ. ಆಮ್ಲಜನಕದ ಕೊರತೆ ಎಷ್ಟಿತ್ತೆಂದರೆ ಯೋಚನೆ ಮಾಡುವ ಶಕ್ತಿಯೇ ಇರಲಿಲ್ಲ.ಕೈಗಳು ಮರಗಟ್ಟಿ ತಾರಾದೇವಿಯ ಪೂಜೆಗೆ ಎಂದು ಇಟ್ಟುಕೊಂಡಿದ್ದ ತುಪ್ಪದ ಬತ್ತಿ ಕರ್ಪೂರ ಹಚ್ಚಲಾಗಲಿಲ್ಲ. ಕೆಳಗೆ ಕಣಿವೆಯಲ್ಲಿ ಗೌರಿ ಕುಂಡ ಕಾಣುತ್ತಿತ್ತು. ಕುದುರೆಯವರೆಲ್ಲಾ ನಮ್ಮನ್ನು ಇಳಿಸಿ ನೀರು ತುಂಬಿಕೊಂಡು ಬರಲು ಇಳಿದರು
. ತಲೆ ಧಿಂ ಎನ್ನುತ್ತಿತ್ತು. ಏನೂ ತೋಚುತ್ತಿರಲಿಲ್ಲ. ಅಷ್ಟರಲ್ಲಿ ಇಲ್ಲಿ ಹೆಚ್ಚು ಹೊತ್ತು ನಿಲ್ಲಬಾರದು ಇಳಿಯಿರಿ ಎಂದು ಹೇಳಿದರು. ಇಳಿಯುವಾಗ ಕುದುರೆಗಳ ಮೇಲೆ ಕುಳಿತುಕೊಳ್ಳುವುದು ತುಂಬಾ ಅಪಾಯ. ಕುದುರೆ ಬೀಳಿಸಿಬಿಡುವ ಸಂಭವ ಉಂಟು. ಕಮರಿಯಲ್ಲಿ ಬಿದ್ದರೆ ಸೊಂಟ ಕೈಕಾಲು ಮುರಿದುಕೊಳ್ಳಬೇಕು.ಆದ್ದರಿಂದ ಎಲ್ಲರೂ ಇಳಿಯಲು ಪ್ರಾರಂಭಿಸಿದೆವು. ನಾನೂ ರಾಣಿ ಇಬ್ಬರೂ ಜೊತೆಯಾಗಿ ಊರುಗೊಲಿನ ಸಹಾಯದಿಂದ ೬km ಇಳಿದೆವು. ಕೆಳಗಡೆ ಟೀ ಶಾಪ್ ಒಂದಿತ್ತು. ನಮ್ಮವರೆಲ್ಲ ಕುಳಿತು ಸುಧಾರಿಸಿಕೊಳ್ಳುತ್ತಿದ್ದರು. ನಾವೂ ಕುಳಿತು ಡ್ರೈ ಫ್ರೂಟ್ ತಿಂದು ನೀರು ಕುಡಿದೆವು. ಇನ್ನು ಕುದುರೆಗಳು ಬರುತ್ತವೆ ಹತ್ತಿ ಕುಳಿತುಕೊಳ್ಳುವುದು ಎಂಬ ನಮ್ಮ ಲೆಕ್ಕಾಚಾರ ತಪ್ಪಾಯಿತು. ನದಿಯೊಂದು ರಭಸದಿಂದ ಹರಿಯುತ್ತಿತ್ತು. ಅದರ ದಡದಲ್ಲಿಯೇ ಕೆಸರಿನಲ್ಲಿ ದಾರಿ ಮಾಡಿಕೊಂಡು ನಡೆದೆವು. ನಡೆದು ಸುಸ್ತಾದಾಗ ಕುದುರೆಗಳಿಗಾಗಿ ಕಾಯುತ್ತ ಕುಳಿತೆವು. ಕೊನೆಗೊಮ್ಮೆ ಕುದುರೆಗಳು ಬಂದೊಡನೆ ಹತ್ತಿ ಕುಳಿತು ಉಸ್ಸಪ್ಪ ಎಂದೆವು. ಕ್ಯಾಂಪ್ ಗೆ ೧೦km ಇತ್ತು. ೫ km ಹೊೊಗಿದ್ದೆವೇನೊ ಕುದುರೆಯವನು ಉತರೊ ಎಂದ ಇನ್ನು ಅರ್ಧ ಮಾತ್ರ ಇರುವುದು ನಡೆದು ಹೋಗು ಎಂದು ಸನ್ನೆ ಮಾತಿನಲ್ಲಿ ಹೇಳಿದ. ನಾನು ಇಲ್ಲ ನನಗೆ ಕ್ಯಾಂಪ್ ತನಕ ಬಿಡು ನನಗೆ ಕಾಲು ನೋವು ಎಂದೆ.ಅಲ್ಲೊಂದು ಟೀ ಶಾಪ್ ನಲ್ಲಿ ಅವನ ಬಿರಾದರಿ ಯವರೆಲ್ಲ ಇದ್ದರು. ಎಷ್ಟೇ ಹೇಳಿದರೂ ಕೇಳದೆ ಇಳಿಸಿಬಿಟ್ಟರು. ೫km ಏರಿಳಿತದ ದಾರಿ,ಉಸಿರಾಟದ ತೊಂದರೆ,ಕ್ಯಾಂಪ್ ತಲುಪುವಾಗ ಯಾರಿಗೂ ಮಾತನಾಡುವ ಶಕ್ತಿ ಇರಲಿಲ್ಲ. ಶೂ ಕಳಚಿ ಬಿಸಾಡಿ ದೊಪ್ಪನ ಬಿದ್ದೆವು. ಆಶಾ ಸುಬ್ಬಯ್ಯ ಅವರನ್ನು ಕುದುರೆ ೩ ಸಲ ಬೀಳಿಸಿತಂತೆ. ಸಧ್ಯ ಹೆಚ್ಚು ಪೆಟ್ಟು ಆಗಿರಲಿಲ್ಲ. ನಮ್ಮ ಇಂಡಿಯಾ ದಲ್ಲಿ ಕುದುರೆಯವರು ಎಷ್ಟು ಚೆನ್ನಾಗಿ ಕೂರಿಸುತ್ತಾರೆ ಇಳಿಸುತ್ತಾರೆ,ಜೋಪಾನವಾಗಿ ಕರೆದುಕೊಂಡು ಹೋಗುತ್ತಾರೆ.ಎಲ್ಲ ಸೇರಿ ೭ ದಿನಕ್ಕೆ ೨೫೦೦/ರೂ, ಇಲ್ಲಿ ಕುದುರೆಯ ಮೇಲೆ ಕೂರಿಸುವುದಿರಲಿ ಅರ್ಧ ಕ್ಕಿಂತಾ ಹೆಚ್ಚು ದೂರ ನಡೆಸಿ ೩ ದಿನಕ್ಕೆ ೪೫೦೦/ರೂ.
ಆಶಾ ಅಥವಾ ಉಷಾ ಯಾರೋ ಹೊರ್ಲಿಕ್ಕ್ಸ್ ಬೆರೆಸಿ ಕೊಟ್ಟಂತೆ ನೆನಪು.ಕುಡಿದು ಮತ್ತೂ ಬಿದ್ದುಕೊಂಡಿದ್ದೆ.ರಾತ್ರಿ ರೋಟಿ ದಾಲ್ ಅಥವಾ ಅನ್ನ ದಾಲ್ ಇರಬಹುದು ಏನೋ ತಿಂದು ಮಲಗಿದೆವು. ಶಿವನೆ ನೀನೆ ಗತಿ ಎನ್ನುತ್ತಾ.
ಜ್ಹೊಂಗ್ ಜೆರ್ಬು ದಿಂದ ಮರಳಿ ಧಾರ್ಚೆನ್.
೨೬ಜುಲೈ.
ಅಂತೂ ಶಿವನ ದಯೆಯಿಂದ ಕಠಿಣವಾದ ಡೋಲ್ಮಾ ಪಾಸ್ ಪರೀಕ್ಷೆಯಲ್ಲಿ ಪಾಸಾಗಿದ್ದೆವು. ಇಂದು ಹೆಚ್ಚು ಏರು ಇಳಿತ ವಿಲ್ಲದ ನೇರ ದಾರಿ ೧೨km. ಆದರೂ ಬೆಳಿಗ್ಗೆ ಬೇಗ ಎದ್ದು ಹೊರಟೆವು. ಸ್ವಲ್ಪವಷ್ಟೇ ಕುದುರೆ ಉಳಿದಂತೆ ನಡೆದೆವು. ಮಧ್ಯಾಹ್ನ ೧೨ ಗಂಟೆಗೆಲ್ಲ ಧಾರ್ಚೆನ್ ತಲುಪಿದೆವು. ಕುದುರೆಯವರು ಗೌರಿ ಕುಂಡದ ಜಲ ತಂದಿಟ್ಟು ಟಿಪ್ಸ್ ಗಾಗಿ ಕಾಯುತ್ತಿದ್ದರು. ನನ್ನ ೪ ಕ್ಯಾನ್ ಗೆ ೩೦ ಯುವಾನ್ ಕೊಟ್ಟೆ. ಟಿಪ್ಸ್ ಎಂದು ರೂಂ ನ ಬಾಗಿಲಲ್ಲಿ ಥಳಾಯಿಸುತ್ತಿದ್ದರು.ಯಾರೂ ಟಿಪ್ಸ್ ಕೊಡಲು ಮುಂದಾಗಲಿಲ್ಲ. ಕೈಲಾಸ ಪರಿಕ್ರಮದ ೫೬km ನಲ್ಲಿ ಅರ್ಧಕ್ಕಿಂತ ಹೆಚ್ಚು ನಡೆದಿದ್ದೆವು.ಶಕ್ತಿ ಇದ್ದರೆ ಅಷ್ಟೂ ನಡೆಯುವ ಮನಸ್ಸಿತ್ತು. ಆದರೆ ಉಸಿರೇ ಆಡದಿದ್ದಾಗಲೂ ಕುದುರೆಗಳ ಮೇಲೆ ಕೂರಿಸದೆ ನಡೆಸಿದ್ದರು.ಸಂಜೆಗೆ ಧಾರ್ಚೆನ್ ಮಾರ್ಕೆಟ್ ನಲ್ಲಿ ಗಂಟೆ ಅದೂ ಇದೂ ಶಾಪಿಂಗ್ ಮಾಡಿದೆವು. ರೋಟಿ ದಾಲ್ ತಿಂದು ಸಂಜೆಗೆ ಭಜನ್ ಹಾಡಿದೆವು. ನಾವೆಲ್ಲಾ ನಮ್ಮ ಲೇಡೀಸ್ ರೂಂ ನಲ್ಲಿ ಯಶಸ್ವಿಯಾಗಿ ಕೈಲಾಸ ಪರಿಕ್ರಮ ಮಾಡಿದ ಸಂತೋಷಕ್ಕೆ ಫೋಟೋ ತೆಗೆದುಕೊಂಡೆವು.
ಅಷ್ಟಪಾದಕ್ಕೆ ಯಾತ್ರೆ.
೨೭ಜುಲೈ.
ಇವತ್ತು ಯಾವ ಅವಸರವಿಲ್ಲ ನಿಧಾನವಾಗಿ ಎದ್ದು ಎಂದಿನಂತೆ ಟಿಬೆಟ್ ನವರ ಬ್ರೆಡ್ ಶೇಂಗ ಬೀಜದ ಉಪಾಹಾರ ಮುಗಿಸಿ ಮಾನಸ ಸರೋವರದಿಂದ ಬರಬೇಕಾದ ನಮ್ಮ ತಂಡದ ಇನ್ನೊಂದು ಭಾಗದವರಿಗಾಗಿ ಕಾದೆವು. ಬೆಂಗಳೂರಿಗೆ ಫೋನ್ ಮಾಡಿ ಪರಿಕ್ರಮ ಮಾಡಿ ಬಂದ ವಿಚಾರ ತಿಳಿಸಿದೆ.
ಮಾನಸದಿಂದ ಬರುವವರು ಬಂದು ತಲುಪಿದ ಕೂಡಲೇ ಎಲ್ಲರೂ ಕೂಡಿ ಅಷ್ಟಪಾದಕ್ಕೆ ಹೊರಟೆವು.ದಾರಿ ಭಯಂಕರ,ನಮ್ಮ ಡ್ರೈವರ್ ಇನ್ನೂ ಭಯಂಕರ ವಾಗಿ ಡ್ರೈವ್ ಮಾಡುತ್ತಿದ್ದ. ೫ km ಧಡ ಧಡ ಎತ್ತಿಹಾಕಿ ಈಗ ಲ್ಯಾಂಡ್ cruiser ಒಂದು ಕಲ್ಲಿಗೆ ಢಿಕ್ಕಿ ಹೊಡೆದು.ನಿಂತು ಬಿಟ್ಟಿತು.ಇನ್ನೂ ೩km ಏರು ದಾರಿ ಕಷ್ಟಪಟ್ಟು ಏದುಸಿರು ಬಿಡುತ್ತಾ ಹತ್ತಲು ಪ್ರಾರಂಭಿಸಿದೆವು. ಅಲ್ಲಲ್ಲಿ ಕುಳಿತು ಸುಧಾರಿಸಿ ಕೊಳ್ಳುತ್ತಾ ಒಬ್ಬರಿಗೊಬ್ಬರು ಆಸರೆ ಯಾಗಿ ಯಾರಾದರೂ ಗಂಡಸರು ಬಂದರೆ ಅವರ ಸಹಾಯದಿಂದ ಹತ್ತಿ ಮೇಲೆ ಬಂದರೆ ಕೈಲಾಸಪತಿ ಮೋಡದಲ್ಲಿ ಮರೆಯಾಗಿದ್ದ. ಸ್ವಲ್ಪ ಹೊತ್ತು ಕಾದೆವು.ನಂದಿ ಪರ್ವತದ ದರ್ಶನ ಮಾತ್ರ ಚೆನ್ನಾಗಿ ಆಯಿತು. ಅಲ್ಲಿದ್ದ ಗೊಂಪಾಕ್ಕೆ ೮ ಪ್ರದಕ್ಷಿಣೆ ಹಾಕಿದೆವು.ಇನ್ನೂ ಸ್ವಲ್ಪ ಹೊತ್ತು ಕಾದಿದ್ದರೆ ಮೋಡಗಳು ಚದುರಿ ಕೈಲಾಸದ ದರ್ಶನವಾಗುತ್ತಿತ್ತೆನೋ, ಆದರೆ ನಮ್ಮ L.O. ಲ್ಯಾಂಡ್ ಕ್ರೂಸರ್ ನವರು ಕಾಯುವುದಿಲ್ಲ ಅವರೇನಾದರೂ ಹಾಗೆ ಹೋಗಿಬಿಟ್ಟರೆ ನಾವು ೮km ನಡೆಯಬೇಕಾ ಗುತ್ತೆ ಎಂದರು.೩km ನಡೆದು ಲ್ಯಾಂಡ್ ಕ್ರೂಸರ್ ಹತ್ತಿ ಧಾರ್ಚೆನ್ ಗೆ ವಾಪಸ್ಸು ಬಂದೆವು.
ಊಟ ಮುಗಿಸುವಾಗ ನಮ್ಮ ಇನ್ನೊಂದು ತಂಡದವರು ಕೈಲಾಸ ಪರಿಕ್ರಮಕ್ಕೆ ಹೊರಟರು.ಥಟ್ಟನೆ ನೆನಪಾಯಿತು,ಡೇರಾಪ್ಹುಕ್ ಗೆ ಹೋಗುವಾಗ ಪಟ್ಟ ಕಷ್ಟ.ಎಲ್ಲರಿಗೂ ಎರಡೆರಡು ಬಾರಿ ಎಚ್ಚರಿಸಿದೆ.ಬಸ್ ಇಳಿದನಂತರ ಕುದುರೆಗಳವರು ಬರುವುದು ೨ ಗಂಟೆ ತಡವಾಗುತ್ತದೆ. ಆದರೆ ಎಲ್ಲರೂ ಅಲ್ಲಿಯೇ ಕುಳಿತು ಕಾಯಬೇಕು,ಯಾರೂ ನಡೆದು ಆಯಾಸ ಮಾಡಿಕೊಳ್ಳಬಾರದು,ಶಕ್ತಿಯನ್ನು ಮರುದಿನದ ಡೋಲ್ಮಾಕ್ಕಾಗಿ ಉಳಿಸಿಕೊಳ್ಳಿ,ಎಲ್ಲರೂ ಕುದುರೆಗಳ ಮೇಲೆ ಹೋಗಿ ಎಂದು ನಾನು ಪಟ್ಟ ಭವಣೆಯನ್ನು ತಿಳಿಸಿದೆ. ಎಲ್ಲರೂ ಒಪ್ಪಿ ಹೊರಟರು.
ನಮ್ಮ ಬಸ್ ಈಗ ಮಾನಸ ಸರೋವರಕ್ಕೆ ಹೊರಟಿತು.೩ಗಂಟೆಗೆ ಹೊರೆ ಕ್ಯಾಂಪ್ ಬಂತು.ಇವತ್ತು ಇಲ್ಲೇ halt ಎಂದ ಡ್ರೈವರ್.ಈ ಕ್ಯಾಂಪ್ ಸ್ವಲ್ಪ ಕೊಳಕಾಗಿತ್ತು. ಯಾರೂ ಬಸ್ ನಿಂದ ಇಳಿಯಲಿಲ್ಲ. ಮುಂದಿನ ಕ್ಯೂಗು ಕ್ಯಾಂಪ್ ತಲುಪಿಸಬೇಕೆನ್ದೆವು. ೫ ಗಂಟೆಗೆ ಕ್ಯುಗು ತಲುಪಿದೆವು. ಮುಂದಿನ ಎರಡು ದಿನ ನಾವು ಅಲ್ಲಿಯೇ ತಂಗಿದೆವು.
ಮಾನಸ ಸರೋವರದಲ್ಲಿ ಸ್ನಾನ.
೨೮ ಜುಲೈ.
ದೆಹಲಿಯಲ್ಲಿ ರಾತ್ರಿ ಮಾನಸದಲ್ಲಿ ನಿದ್ರೆ ಮಾಡಿಬಿಡಬೇಡಿ. ರಾತ್ರಿ ದೈವೀ ಶಕ್ತಿಗಳು ನಾನಾರೂಪದಲ್ಲಿ ಕಾಣಿಸಿಕೊಳ್ಳುತ್ತವೆ ಎಂದು ಹೇಳಿದ್ದರು.ರಾತ್ರಿ ೨-೩ ಗಂಟೆಯ ವರೆಗೂ ಕಿಟಕಿಯಿಂದ ಹೊರಗೆ ನೋಡುತ್ತ ಕಾದೆವು.ಏನೂ ಕಾಣಲಿಲ್ಲ.ಹೋಗಿ ಮಲಗಿದೆವು. ಬೆಳಿಗ್ಗೆ ಎದ್ದರೆ ಮೋಡ ಕವಿದಿತ್ತು ಆದರೆ ಮಾನಸದಲ್ಲಿ ಸ್ನಾನ ಮಾಡುವ ಸಂಕಲ್ಪಮಾಡಿದ್ದೆವಲ್ಲ.೯ ಗಂಟೆಯ ಹೊತ್ತಿಗೆ ನಾನೂ ಸುಧಾ,ಬಟ್ಟೆ ಬರೆ ತೆಗೆದುಕೊಂಡು ಹೊರಟೆವು. ಸ್ನಾನವೆಂದರೆ ಮುಳುಗು ಹಾಕುವುದು ಮಾತ್ರ. ಸೋಪ್ ಅನ್ನು ಉಪ ಯೋಗಿಸಿದರೆ ದಡದಲ್ಲಿ ಮೈ ತೊಳೆದುಕೊಂಡು ಮತ್ತೆ ಮುಳುಗಬೇಕು. ನೀರು ಮಂಜಿನಂತೆ ಕೊರೆಯುತ್ತಿತ್ತು. ಸೂರ್ಯ ದೇವನಂತೂ ನಮಗೆ ಸವಾಲು ಎಸೆದು ಮೋಡದೊಳಗೆ ಕುಳಿತಿದ್ದ. ನಿಧಾನವಾಗಿ ಕುಳಿತು ಒಂದೊಂದೇ ಕೈ ಕಾಲನ್ನು ನೀರಿನಲ್ಲಿ ಮುಳುಗಿಸಿ ಸ್ವಲ್ಪ ಕಾಲ ಕೊರೆತವನ್ನು ಅನುಭವಿಸಿದೆವು. ಮುಖ ಮೈಗೆ ಸ್ವಲ್ಪ ನೀರು ಹಾಕಿಕೊಂಡೆವು. ಕೊನೆಗೆ ಧೈರ್ಯ ಮಾಡಿ ಮುಳುಗು ಹಾಕಿಯೇ ಬಿಟ್ಟೆವು. ೩ ದಿನ ಕೈಲಾಸ ಪರಿಕ್ರಮದಲ್ಲಿ ಸ್ನಾನ ಮಾಡಿರಲಿಲ್ಲ. ಒಮ್ಮೆಲೇ ಬಹಳ ಫ್ರೆಶ್ ಎನಿಸಿತು. ಅಷ್ಟು ಹೊತ್ತಿಗೆ ಸೂರ್ಯ ನಿಧಾನವಾಗಿ ತನ್ನ ಮುಖ ತೋರಿಸುತ್ತಿದ್ದ. ಎಲ್ಲರೂ ಒಬ್ಬೊಬ್ಬರೇ ಸ್ನಾನಕ್ಕೆ ಹೊರಟರು. ೩ ದಿನದ ಬಟ್ಟೆಯನ್ನು ಪಕ್ಕದಲ್ಲಿ ಹರಿಯುತ್ತಿದ್ದ ಝರಿ ಯೊಂದರಲ್ಲಿ ಒಗೆದು ಒಣಗಿಸಿದೆವು. ಊಟ ನಿದ್ರೆ ಮುಗಿಸಿ ಮತ್ತೆ ಕೈಲಾಸ ಮಾನಸದ ದರ್ಶನ ಮಾಡಿದೆವು. ಗೊಂಪಾದ ಒಳಗೆ ಹೋಗಿ ಒಂದೊಂದು ಯುವಾನ್ ಕೊಟ್ಟು ಬೆಣ್ಣೆ ದೀಪ ಹಚ್ಚಿದೆವು. ಇನ್ನೂ ಏನೇನೊ ಶಾಪಿಂಗ್ ಮಾಡಿದೆವು.
ರಾತ್ರಿ ಮಾನಸ ಸರೋವರಕ್ಕೆ ಎದುರಾಗಿದ್ದ ಕಂಬ ಒಂದರ ಹತ್ತಿರ ಇದ್ದ-ಬದ್ದ ಪ್ಲಾಸ್ಟಿಕ್ sheet ಗಳನ್ನೂ ಹಾಸಿ ರಜಾಯಿ ಹೊದ್ದುಕೊಂಡು ೧೨. ರಿಂದ ೨. ೩೦. ರ ವರೆಗೆ ಕಾದೆವು. ಕೊರೆಯುವ ಚಳಿಗಾಳಿಗೆ ನಡುಗಿದ್ದಷ್ಟೇ ಬಂತು.ಏನು ಕಾಣಲಿಲ್ಲ. ರೂಂ ಗೆ ಬಂದು ಮಲಗಿದೆವು.
ಮಾನಸ ಸರೋವರದ ದಡದಲ್ಲಿ ಹವನ. ೨೯ ಜುಲೈ.
ಸಂಜೆ ಸರೋವರದ ದಡದಲ್ಲಿ ಸುಧಾ ಲಲಿತಾ ಅಷ್ಟೋತ್ತರ ಪ್ರಾರಂಭಿಸಿದರು. ನಾನೂ ದನಿಗೂಡಿಸಿದೆ. ಸುಧಾ ರಮಾದೇವಿಯವರ ಭಕ್ತೆ. ಅವಳಿ ಮಕ್ಕಳಲ್ಲಿ ಒಬ್ಬ ಮಗಳನ್ನು ಕಳೆದುಕೊಂಡು ದುಃಖತಪ್ತಳಾಗಿ ದೇವಿಯ ಮೊರೆಹೊಕ್ಕಿದ್ದಳು. ರಾತ್ರಿಗೆ ಸುಧಾ ತಂದ ಡ್ರೈ ಫ್ರೂಟ್ ಬಾರ್ ನ್ನು ಹಾಕಿ ಪಾಯಸ ಮಾಡಿದರು.ಎಲ್ಲರೂ ಊಟ ಮಾಡಿದೆವು.
ದಿವ್ಯ ಜ್ಯೋತಿ ದರ್ಶನ.
ಇವತ್ತೂ ರಾತ್ರಿ ಜಾಗರಣೆ ಮಾಡಿ ಸರೋವರದ ದಡದಲ್ಲಿ ಕಾಯುವುದು ಎಂದಾಯಿತು. ನಾನು L.O. ಗೆ ಹೇಳಿದೆ.ಸುಮ್ಮನೆ ಎಲ್ಲರೂ ಕಾಯುವುದು ಬೇಡ.ನಾನು ಎಚ್ಚರವಿದ್ದು ಏನಾದರೂ ಕಂಡರೆ ಎಬ್ಬಿಸುವುದಾಗಿ ಹೇಳಿದೆ. ಕಿಟಕಿಯ ಬಳಿಯೇ ಇದ್ದ ಸುಧಾಳ cot ನಲ್ಲಿ ನಾನು ಮಲಗಿ ರಾತ್ರಿ ೩ ಗಂಟೆಯ ವರೆಗೆ ಕಣ್ಣರಳಿಸಿ ಮಾನಸ ಸರೋವರವನ್ನು ನೋಡುತ್ತಾ ಕುಳಿತುಕೊಂಡೆ. ಕತ್ತಲೆ,ನೀರವತೆ ಹೊರತು ಮತ್ತೇನೂ ಕಾಣಲಿಲ್ಲ. ನನ್ನ ಯಾತ್ರೆ ಪೂರ್ಣ ಸಫಲವಾಗಲಿಲ್ಲವೇನೋ ಎನ್ನಿಸಿ ದುಃಖವಾಯಿತು.ಜಪ ಮಾಡುತ್ತಾ ಮಲಗಿದೆ. ಕಣ್ಣು ಕೊಂಚ ಹತ್ತಿದಂತೆ ಆಗಿತ್ತು. ಯಾರೋ ಅಲುಗಿಸಿ ಎಬ್ಬಿಸಿದಂತೆ ಅನಿಸಿತು. ಟಾರ್ಚ್ ಹಾಕಿ ಗಂಟೆ ನೋಡಿದರೆ ೩. ೨೦. ಆಗಿತ್ತು. ಅದೇ ಕ್ಷಣ ಕಿಟಕಿಯಿಂದ ಹೊರಗೆ ನೋಡಿದರೆ ಕೈಲಾಸದಿಂದ ಜ್ಯೋತಿ ಯೊಂದು ಮಾನಸದಲ್ಲಿ ಇಳಿಯುತ್ತಿರುವುದು ಕಂಡಿತು. ಆಶಾ ಸುಧಾ ಎಂದು ಕೂಗಿಕೊಂಡೆ. ಅದೇ ಕ್ಷಣ ಎಲ್ಲರೂ ಕಿಟಕಿಯ ಬಳಿ ಧಾವಿಸಿ ನೋಡಿದರು. ಎಲ್ಲರಿಗೂ ರೋಮಾಂಚನ! ಓಂ ನಮಃ ಶಿವಾಯ ಎನ್ನುತ್ತಾ ಆ ಜ್ಯೋತಿಯು ಸರೋವರದಲ್ಲಿ ಲೀನವಾಗುವವರೆಗೆ ನೋಡಿದೆವು. ಎಲ್ಲಾ ೪ ಜನರೂ ದಿವ್ಯ ಜ್ಯೋತಿಯ ದರ್ಶನದಿಂದ ಸಂತೋಷ ಪಟ್ಟು ಎಚ್ಚರಿಸಿ ತೋರಿಸಿದ್ದಕ್ಕಾಗಿ ನನ್ನನ್ನು ಅಭಿನಂದಿಸಿದರು. ನಾವು ಸುಮಾರು ಒಂದು ನಿಮಿಷದಷ್ಟು ಕಾಲ ಜ್ಯೋತಿಯನ್ನು ವೀಕ್ಷಿಸಿದ್ದೆವು. ಉಷಾ ಮೊದಲು ನನಗೆ ನಂಬಿಕೆ ಇಲ್ಲ ಎನ್ನುತ್ತಿದ್ದವರು ಇದು ಬೀಳುವ ನಕ್ಷತ್ರವಲ್ಲ ದಿವ್ಯ ಜ್ಯೋತಿಯೇ ಸರಿಎಂದು ಒಪ್ಪಿದರು. ಮುಂದಿನ ೨೦ ನಿಮಿಷಗಳಲ್ಲಿ ಇದೇ ದೃಶ್ಯ ೨ ಬಾರಿ ಪುನರಾವರ್ತನೆ ಯಾಯಿತು. ಈಗ ನೆನಪಾಗಿ ನಾನು ಓಡಿಹೋಗಿ ಅಕ್ಕ ಪಕ್ಕದ ರೂಂ ನ ಬಾಗಿಲು ಬಡಿದೆ. ನಮ್ಮ L.O. ದರ್ವಾಜಾ ಖುಲಾ ಹೈ,ಆಜಾವೋ ಅನ್ನುತ್ತಿದ್ದಾರೆ, ಟೀ ಬಂದಿರಬೇಕೆಂದು! ನಾನು ಜೋರಾಗಿ ಖಿಡ್ಕಿಸೆ ಬಾಹರ್ ದೇಖಿಯೇ ಸರ್ ಎಂದು ಕೂಗಿದೆ. ಅಷ್ಟರಲ್ಲಿ ಜ್ಯೋತಿ ಮುಳುಗಿ ಬಿಟ್ಟಿತ್ತೆಂದು ಕಾಣುತ್ತದೆ. ಮತ್ತೂ ಒಂದು ಗಂಟೆ ಕಾದರೂ ಮತ್ತೆ ಜ್ಯೋತಿಯ ದರ್ಶನ ವಾಗೆಲಿಲ್ಲ. ಮೂರು ಸಲ ೩. ೨೦, ೩. ೪೦, ೩. ೫೦ ಹೀಗೆ ೩ ಬಾರಿ ಕಂಡಿತ್ತು. ಅಷ್ಟೇ ಮತ್ತೆ ಮಲಗಿದೆವು. ಮಹಾದೇವನನ್ನು ಬಾರಿ ಬಾರಿ ಕೊಂಡಾಡಿದೆವು. ಒಂದು ದಿನವಾದರೂ ಮಳೆಗೆ ನೆನಸಲಿಲ್ಲ, ಬಿಸಿಲಿಗೆ ಬಳಲಿಸಲಿಲ್ಲ, ಸುಸೂತ್ರವಾಗಿ ಯಾತ್ರೆ ಮಾಡಿಸಿದ.ಕೈಲಾಸದ ಅದ್ಭುತ ದರ್ಶನ ವಾಯಿತು. ಮಾನಸ ಸರೋವರದಲ್ಲಿ ಸ್ನಾನ ಹವನ ವಾಯಿತು. ಈಗ ದಿವ್ಯ ಜ್ಯೋತಿಯ ದರ್ಶನ ವಾಯಿತು. ನಮ್ಮ ಭಾಗ್ಯವೋ ಹಿರಿಯರ ಪುಣ್ಯದ ಫಲವೋ ಅಂತೂ ಯಾತ್ರೆ ಸಾಂಗವಾಗಿ ಆಯಿತು ಎಂದುಕೊಂಡು ನಿದ್ದೆ ಹೋದೆವು. ಸಂಜೆಗೆ ಮಾನಸದ ತೀರ್ಥವನ್ನು ಎಲ್ಲರೂ ತುಂಬಿಕೊಂಡಿದ್ದೆವು. ಯುವಕರೆಲ್ಲ ಸರೋವರದ ಮಧ್ಯದಿಂದ ನಮ್ಮ ಕ್ಯಾನ್ ಗಳನ್ನೆಲ್ಲ ತುಂಬಿಸಿ ಕೊಟ್ಟರು.
ಕ಼ುಗು ಇಂದ ಕಿಹೂ ಕ್ಯಾಂಪ್ ಗೆ. ೩೦ ಜುಲೈ.
ಇಂದು ನಮ್ಮ ಯಾತ್ರೆ ಕಿಹೂ ಕ್ಯಾಂಪ್ ಗೆ. ನಿನ್ನೆಯ ಪಾಯಸ ಮತ್ತು ಉಪ್ಪಿಟ್ಟಿನ ಉಪಾಹಾರ ಮುಗಿಸಿ ಹೊರಟೆವು. ಅಡಿಗೆಯವರು ಪಾಪ ನಮಗೆ ಬೇಯಿಸಿ ಹಾಕಿ,ಪಾತ್ರೆಗಳನ್ನು ತೊಳೆದು ಪ್ಯಾಕ್ ಮಾಡಿ ಸ್ಟವ್ ಸಮೇತ ಬಸ್ ಹೊರಡುವಷ್ಟರಲ್ಲಿ ಓಡಬೇಕು.
ದಾರಿಯಲ್ಲಿ ಗೋಸುಲ್ ಗೊಂಪ ಸಿಕ್ಕಿತು. ಶಕ್ತಿಯಿದ್ದವರು ಇಳಿದು ಬೆಟ್ಟ ಗುಹೆಗಳಲ್ಲಿ ಅಡಗಿದ್ದ ಗೊಮ್ಪ ನೋಡಲು ಹೋದರು. ತಲೆಯೆತ್ತಿ ನೋಡಿದರೆ ಬೆಟ್ಟದ ತುದಿಯವರೆಗೆ ಹತ್ತುವ ಸಾಹಸ ವಾಗಲಿಲ್ಲ. ಸರೋವರದ ದಡದಲ್ಲಿ ಮತ್ತಷ್ಟು ಚೆಂದ ಕಂಡ ಕಲ್ಲುಗಳನ್ನು ಆರಿಸಿ ಕೊಂಡೆ. ಕ್ಯಾಂಪ್ ಮುಟ್ಟಿದಾಗ ೧೧ ಗಂಟೆ. ration ಮುಗಿಯುತ್ತ ಬಂದಿತ್ತು.ಇನ್ನೂ ಎರಡು ದಿನ ಅಡ್ಜಸ್ಟ್ ಮಾಡಬೇಕಿತ್ತು. ಆದ್ದರಿಂದ ಪೂರಿ ಭಾಜಿ ಅಷ್ಟೇ ಮಾಡಿದ್ದರು. ಯಾರಿಗೂ ಹೆಚ್ಚು ಹಸಿವೆಯಾಗುತ್ತಿರಲಿಲ್ಲ. ೨-೨ ಪೂರಿ ಭಾಜಿ ತಿಂದೆವು. ಪುಟ್ಟದೊಂದು ನಿದ್ದೆ ಮಾಡಿದೆವು.
ಈ ಕ್ಯಾಂಪ್ ನಿಂದಲೂ ಕೈಲಾಸ ಚೆನ್ನಾಗಿ ಕಾಣುತ್ತಿತ್ತು. ಮತ್ತೆ ಕೈಲಾಸದ ಹಿನ್ನೆಲೆಯೊಂದಿಗೆ ಫೋಟೋ ತೆಗೆದುಕೊಂಡೆವು. ಮತ್ತೊಮ್ಮೆ ಮೂರನೆಯ ಬಾರಿ ಮಾನಸದಲ್ಲಿ ಮುಳುಗು ಹಾಕುವ ಆಸೆ ಕೈ ಗೂಡಲಿಲ್ಲ. ಇಲ್ಲಿ ಸರೋವರದ ದಡದಲ್ಲಿ ಕಾಲಿಟ್ಟರೆ ಸ್ಪಂಜಿನ ಮೇಲೆ ನಡೆದಂತೆ ಆಗುತ್ತಿತ್ತು. ನೀರಿನ ಬಳಿ ಹೋಗಬಾರದೆಂದು ತಂತಿಯ ಬೇಲಿ ಬೇರೆ! ಆದರೆ ಕೈಲಾಸ ದರ್ಶನವಂತೂ ಮನದಣಿಯೆ ಆಗುತ್ತಿತ್ತು. ಕೆಲ ವರ್ಷ ಗಳಿಂದ ಕಾಡುತ್ತಿದ್ದ ಕೈಲಾಸದ ಬಯಕೆ ಫಲಿಸಿತ್ತು.೬ ದಿನದಿಂದ ದಿನವೂ ಅವನ ದರ್ಶನ.ಬೆಳಿಗ್ಗೆ ಕೈಲಾಸವನ್ನು ನೋಡುತ್ತಲೇ ಎದ್ದು ಹಲ್ಲು ಉಜ್ಜುತ್ತಿದ್ದೆವು.ರಾತ್ರಿ ಕಣ್ಣು ಹತ್ತುವವರೆಗೂ ಕೈಲಾಸವನ್ನು ನೋಡುತ್ತಿದ್ದೆವು. ನಮ್ಮ ರೂಂ ನ ಕಿಟಕಿಯಿಂದಲೇ ನೋಡಬಹುದಾಗಿತ್ತು. ಊಟ ತಿಂಡಿಗೆ ಅಷ್ಟು ಹಸಿವೆ ಇರುತ್ತಿರಲಿಲ್ಲ. ಮಧ್ಯಾಹ್ನದ ಪೂರಿ ಅರಗಿರಲಿಲ್ಲ. ಸಂಜೆ ದಿನವೂ ಓಂ ಮಂಗಲಂ ಓಂಕಾರ ಮಂಗಲಂ, ಭೋಲೆ ಬಾಬಾನೇ ಐಸೆ ಬಜಾಯಾ ಡಮರೂ,ಮುಂತಾದ ಭಜನೆಗಳನ್ನು ಸುಧಾ ಚೆನ್ನಾಗಿ ಹಾಡುತ್ತಿದ್ದಳು,ನಾವಲ್ಲ ದನಿ ಗೂಡಿಸುತ್ತಿದ್ದೆವು. L.Oಗ಼ೆ ಹಿಂದಿಯಲ್ಲಿ ಬರೆದು ಕೊಟ್ಟಿದ್ದೆ.
ಇವತ್ತೂ ರಾತ್ರಿ ನಿದ್ದೆಗೆಟ್ಟು ಕಾಯುವುದು ಎಂದಾಯಿತು. ಎಲ್ಲರನ್ನೂ ೨ ಗಂಟೆಗೆ ಎಬ್ಬಿಸುವ ಹೊಣೆ ನನ್ನದು ಆದ್ದರಿಂದ ೧ ಗಂಟೆಗೆ ಎದ್ದು ೨ ಗಂಟೆಗೆ ಎಲ್ಲರನ್ನೂ ಎಬ್ಬಿಸಿದೆ. ಎಲ್ಲರೂ ರೂಂ ನ ಬಾಗಿಲಿನಲ್ಲಿ ರಜಾಯಿ ಹೊದ್ದುಕೊಂಡು ಕಾದೆವು. ನಿದ್ದೆ ಕೆಟ್ಟಿದ್ದಷ್ಟೇ ಬಂತು ಏನೂ ಕಾಣಲಿಲ್ಲ. ಬೆಳಿಗ್ಗೆ ನಿಧಾನವಾಗಿ ಏಳೋಣ ಎಂದು ನಿರ್ಧರಿಸಿ ೪ ಗಂಟೆಗೆ ಮಲಗಿದೆವು.
ಮರಳಿ ಧಾರ್ಚೆನ್ ಗೆ. ೩೧ ಜುಲೈ.
ಮಧ್ಯಾಹ್ನ ಊಟಕ್ಕೆ ಅರ್ಧ ಕಪ್ ಕಾರ್ನ್ flakes ತಿಂದು ಎಲ್ಲರೂ ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡಿ ೨ ದಿನದ ಬಟ್ಟೆ ಒಗೆದು ಒಣಗಿಸುವಾಗ ಬಿಸಿಲಿಗೆ ಬಾಯಾರಿ ಸುಸ್ತಾಗಿತ್ತು. ಈಗ ಹಸಿವು ಮೈಕೈ ನೋವು,ತಲೆನೋವು ಎಲ್ಲಾ ಕಾಣಿಸಿಕೊಂಡಿತು. ಆಶಾ ಬಿಸಿ ಕಾಫಿ ತಂದು ಕೊಟ್ಟರು ಥ್ಯಾಂಕ್ಸ್ ಹೇಳಿ ಕುಡಿದೆ ಸ್ವಲ್ಪ ಆರಾಮವೆನಿಸಿತು.
ದಿಂದ ಕಾಣುತ್ತಾರೆ. ಈ ತಕಲಾಕೋಟ ಊರೇ ಹಾಗೆ. ಚೈತನ್ಯ ರಹಿತ ನಿರ್ಜೀವ ಪ್ರದೇಶ. ಗೆಸ್ಟ್ ಹೌಸಿನ ಹಿಂಭಾಗದಲ್ಲಿ ಅಳಿದು ಉಳಿದ monestry ಗುಹೆಗಳು, ಧೂಳಿನಿಂದ ಕಪ್ಪಾದ ಅಂಗಡಿ ರಸ್ತೆಗಳು, ಕೊಚ್ಚೆಯ ಬಣ್ಣದ ನದಿನೀರು, ಹಸಿರಿನ ಹೆಸರೂ ಇಲ್ಲಾ. ಸಂಜೆ ೫. ೩೦ ಕ್ಕೆ ಊಟದ ಗಂಟೆಯಾಯಿತು. ಅವರಿಗೆ ಆಗ ೮ ಗಂಟೆ! ಏನೋ ಒಂದಿಷ್ಟು ತಿಂದು ಹರಟೆ ಹೊಡೆದು ಮಲಗಿದೆವು.
ಖೊಜರ್ನಾಥ್ ಗೆ ಯಾತ್ರೆ. ೧ ಆಗಸ್ಟ್.
ಬೆಳಿಗ್ಗೆ ಬ್ರೇಕ್ಫಾಸ್ಟ್ ಮುಗಿಸಿ ಮನೆಗೆ ಫೋನ್ ಮಾಡಿಬರುವಾಗ ಬಸ್ನಲ್ಲಿ ಎಲ್ಲರು ಖೊಜರ್ನಾಥ್ ಗೆ ಹೊರಟಿದ್ದರು.ರಸ್ತೆಯೇ ಇಲ್ಲದ ರಸ್ತೆ ಯಲ್ಲಿ ೧೨ km ಸಾಗಿ ಖೊಜರ್ನಾಥ್ ತಲುಪಿ ಗುಡಿಯನ್ನು ಹೊಕ್ಕೆವು.ರಾಮ ಸೀತೆ ಲಕ್ಷ್ಮಣ ರಂತೆ ಕಂಡ ಮೂರ್ತಿ ಗಳನ್ನು ನೋಡಿ ನಾನು ಆಂಜನೇಯನನ್ನು ಹುಡುಕಿದೆ. ಆದರೆ ಆಮೇಲೆ ತಿಳಿಯಿತು,ಅದು ಮಂಜುಘೋಶ, ಅವಲೋಕಿತೇಶ್ವರ, ಮತ್ತು ವಜ್ರಪಾಣಿಯ ವಿಗ್ರಹಗಳು ಎಂದು.ಒಂದು ಯುವಾನ್ ಕೊಟ್ಟು ಬೆಣ್ಣೆ ಯದೀಪ ಕೊಂಡುಆರತಿ ಎತ್ತಿದೆವು. ಲಾಮ ಎಲ್ಲರಿಗೂ ಆಶೀರ್ವಾದ ಮಾಡಿ ಟೀ ಮತ್ತು ಚಾಕಲೇಟ್ ಕೊಟ್ಟರು. ಒಂದು ಪ್ರದಕ್ಷಿಣೆ ಹಾಕಿ ಪಕ್ಕದಲ್ಲಿದ್ದ ಕಟ್ಟಡ ಹೊಕ್ಕೆವು. ಇಲ್ಲಿದ್ದ ಮೂರ್ತಿಗಳು ಭಯಾನಕ ವಾಗಿದ್ದವು. ಸತ್ತ ಮೃಗಗಳಲ್ಲಿ ಹತ್ತಿ ತುಂಬಿ ಜೀವಂತ ಪ್ರಾಣಿಗಳಂತೆ ಮಾಡಿಟ್ಟಿದ್ದರು. ದೊಡ್ಡ ದೊಡ್ಡ ವರ್ಣ ಚಿತ್ರಗಳೂ ಬೆಳ್ಳಿ ಬಂಗಾರದ ಪೂಜಾ ಪಾತ್ರೆಗಳೂ,ಇದ್ದವು. ಎಲ್ಲ ನೋಡಿ ಬಸ್ ಹತ್ತಿದೆವು. ಇಲ್ಲಿ ಕಾಶ್ಮೀರದ ಸೇನಾಪತಿಯಾಗಿದ್ದ ಜೋರಾವರ್ ಸಿಂಗ್ ಅವರ ಸಮಾಧಿ ಇದೆ.ಭಾರತೀಯರಿಗೆ ಪವಿತ್ರವಾಗಿರುವ ಕೈಲಾಸ ಮಾನಸಸರೋವರಗಳು ಭಾರತಕ್ಕೆ ಸೇರಬೇಕೆಂದು ಆತ ಮಿಂಚಿನ ಧಾಳಿ ಮಾಡಿ ಗೆದ್ದು ಆ ಪ್ರದೇಶವನ್ನೆಲ್ಲ ಕಾಶ್ಮೀರಕ್ಕೆ ಸೇರಿಸಿದನಂತೆ. ಆದರೆ ಟಿಬೆಟ್ ನವರು ಮರು ದಾಳಿ ಮಾಡಿ ಅವನನ್ನು ಕೊಂದು ಅವನ ಸೈನ್ಯವನ್ನು ಓಡಿಸಿಬಿಟ್ಟರಂತೆ. ಆದರೆ ಅವನ ಸಮಾಧಿ ಇದೆ,ಅವನ ಆಯುಧಗಳೂ ಮೊದಲಾದ ಕೆಲ ವಸ್ತುಗ;ಳನ್ನು ಇಟ್ಟಿದ್ದಾರೆ.
ತಕಲಾಕೊತ್ ತಲುಪಿದ ಮೇಲೆ ಗೈಡ್ ನಮ್ಮನ್ನು ಮಾರ್ಕೆಟ್ ಗೆ ಕರೆದುಕೊಂಡು ಹೋದ. ಉಷಾಗೆ ಒಂದು ಸ್ವೆಟರ್ ಕೊಳ್ಳೋಣ ಎಂದು ನಾನು ಹೋದೆ.ಸ್ವೆಟರ್ ಏನು ಚೆನ್ನಾಗಿ ಇರಲಿಲ್ಲ. ಒಂದು ಜಾಕೆಟ್ ಕೊಂಡೆ. ವಾಪಸ್ ಬರುವಾಗ ಎಲ್ಲರ ಊಟ ಮುಗಿದಿತ್ತು. ಅನ್ನ ಆರಿ ಅಕ್ಷತೆ ಆಗಿತ್ತು.ತಿನ್ನಲು ಸಾಧ್ಯವಾಗಲಿಲ್ಲ. ಅನಾನಸ್ ತಿಂದು ಹೊಟ್ಟೆ ತುಂಬಿಸಿ ಕೊಂಡೆವು. ಗುಜರಾತಿ ಹುಡುಗರಂತೂ ಟಿಬೆಟ್ ನವರ ಊಟ ತಿನ್ನುತ್ತಲೇ ಇರಲಿಲ್ಲ.ಊರಿನಿಂದ ತಂದ ಒಣ ತಿಂಡಿ ತಿಂದು ಹೊಟ್ಟೆ ತುಂಬಿಸಿ ಕೊಳ್ಳುತ್ತಿದ್ದರು. ಊಟವಾದ ನಂತರ ಮಲಗೋಣ ಎಂದುಕೊಂಡಿದ್ದೆ.ಅಷ್ಟರಲ್ಲಿ ಸ್ನಾನದ ನೀರು ಕಾದಿದೆ ಎಂದರು.ಸ್ನಾನ ಮಡಿ ಬಟ್ಟೆ ಒಗೆದು ಒಣಗಿಸಿ ಉಸ್ಸಪ್ಪ ಎಂದು ಮಲಗಿದರೆ ವೀಸಾ ಸ್ಟಾಂಪಿಂಗ್ ಎಂದು ಕರೆದರೂ.ಸರಿ ಅರ್ಧ ಗಂಟೆ ಹೋಗಿ ಕುಳಿತು ಕಾದೆವು. ವೀಸಾ ದವರು ಬರಲಿಲ್ಲ. ಸಮಯ ಕಳೆಯಲು ಆಶಾ ಸುಬ್ಬಯ್ಯ ಏನೇನೊ ಆಟಗಳನ್ನು ಆಡಿಸಿದರು. ಒಂದು ಗಂಟೆ ಕಾದರೂ ಯಾರೂ ಬರಲಿಲ್ಲ. ಎಂದಿನಂತೆ ೫. ೩೦.ಕ್ಕೆ ಊಟದ ಗಂಟೆ ಆಯಿತು. ಆಗಸ್ಟ್ ೧ ರೆಡ್ ಆರ್ಮಿ ಡೇ ಅಂತೆ. ಈ ವೀಸಾ ಅಧಿಕಾರಿಗಳು ಪಾರ್ಟಿ ಮಾಡಿಕೊಂಡಿದ್ದಾರೆಂದು ಕಾಣುತ್ತದೆ. ೯ ಗಂಟೆಯ ತನಕ ಭಜನೆ, ಜೋಕ್ಸ್, ಹಾಡುಗಳನ್ನು ಹೇಳಿಕೊಂಡು ಕಾದೆವು.ನಾನು ಜ್ಯೋತಿ ಶಿರೀಶ್ ನಮ್ಮ ರೂಂ ನಲ್ಲೇ ಮಾತನಾಡುತ್ತ ಕುಳಿತೆವು.
ಮರಳಿ ಭಾರತಕ್ಕೆ. ೨ ಆಗಸ್ಟ
ಬೆಳಿಗ್ಗೆ ನಿತ್ಯವಿಧಿಗಳನ್ನು ಮುಗಿಸಿ ತಿಂಡಿ ತಿಂದು ಪ್ಯಾಕಿಂಗ್ ಮಾಡಿ ರೆಡಿ ಆಗುವಾಗ ವೀಸಾ ಸ್ಟಾಂಪಿಂಗ್ ಎಂದು ಕರೆದರು. ಸರಿ ಯಲ್ಲರೂ ಸಾಲಾಗಿ ಹೋಗಿ ನಿಂತು ಮುಖ ತೋರಿಸಿ ಪಾಸ್ಪೋರ್ಟ್ ತೋರಿಸಿ ಬಂದು ಬಸ್ ಹತ್ತಿದೆವು.ಬೆಳಗಿನ ೭ ಗಂಟೆಗೆ. ೯km ಭಯಾನಕ ರಸ್ತೆಯನ್ನು ಕ್ರಮಿಸಿ, ಕುದುರೆಗಳು ನಿಂತಲ್ಲಿಗೆ ಬಂದೆವು.ಏನೋ ಗಲಾಟೆ ಸಂತೆಯನ್ತಿತ್ತು. ಅವರ ಭಾಷೆ ನಮಗೆ ತಿಳಿಯದು.ನಾವು ಹೇಳಿದ್ದು ಅವರಿಗೆ ತಿಳಿಯದು.ಯಾರೋ ನನ್ನನ್ನು ಒಂದು ಕುದುರೆಯ ಮೇಲೆ ಕೂರಿಸಿದರು. ದೇವರನ್ನು ನೆನೆಯುತ್ತ ಹತ್ತಿ ಕುಳಿತೆ. ನೋಡಿದರೆ ೧೦-೧೨ ರ ಹುಡುಗನೊಬ್ಬ ಕುದುರೆ ಹೊಡೆದು ಕೊಂಡು ಹೋಗುತ್ತಿದ್ದಾನೆ! ಆ ಕುದುರೆಯೋ ಬೆಟ್ಟದ ಪಕ್ಕದಲ್ಲಿ ನಡೆಯುವುದು ಬಿಟ್ಟು,ಕೊರಕಲಿನ ಬದಿಯಲ್ಲೇ ನಡೆಯುತ್ತಿದೆ. ನಾನು ಹುಡುಗನನ್ನು ಕೂಗಿ ಗದರಿದರೆ ಅವನಿಗೆ ಅರ್ಥವಾಗಬೇಕಲ್ಲ! ದೇವರೇ ನೀನು ನಡೆಸಿದಂತೆ ಆಗಲಿ ಎಂದು ಉಸಿರು ಬಿಗಿ ಹಿಡಿದು ಕುಳಿತೆ. ಅಂತೂ ೯ ಗಂಟೆಗೆ ಲಿಪು ಪಾಸು ಹತ್ತಿರಕ್ಕೆ ತಲುಪಿದೆವು.ಮತ್ತೆ ೩ km ಹಿಮದಲ್ಲಿ ಏಳುತ್ತಾ ಬೀಳುತ್ತಾ ಹತ್ತುವಾಗ ಮೇಲಿನಿಂದ ನನ್ನ ಹಳೆಯ ಪೋರ್ಟರ್ ಓಡಿಬಂದು, ನನ್ನ ಕೈ ಹಿಡಿದು ಹತ್ತಿಸಿದ. ಈ ಸಲ ಕುಕ್ ನ ಪಾಸು ಮಾಡಿಸಿಕೊಂಡು ೧೦ನೆ ತಂಡ ದೊಡನೆ ಕೈಲಾಸಕ್ಕೆ ಹೊರಟಿದ್ದ. ತನ್ನ ಒಬ್ಬ ಚೇಲಾನನ್ನು ನನಗೆ ಪೋರ್ಟರ್ ಮಾಡಿಕೊಟ್ಟ. ಟಿಬೆಟ್ ನವರು ನಮ್ಮ ಲಗೇಜ್ ಮತ್ತು ಮಾನಸ ಗೌರಿ ಕುಂಡಗಳ ತೀರ್ಥ ವನ್ನು ತಂದು ಕೊಟ್ಟರು. ಕುದುರೆಯ ಹುಡುಗನಿಗೆ ೫೦/ರೂ ತೀರ್ಥ ತಂದವನಿಗೆ ೫೦/ರು ಕೊಟ್ಟೆ. ಹುಡುಗನ ಕಣ್ಣುಗಳು ಖುಷಿಯಿಂದ ಮಿನುಗಿದವು. ನನ್ನ ಕುದುರೆಯ ಭರತ್ ಸಿಂಗ್ ಕೂಡ ಬಂದು ಕಾಯುತ್ತಿದ್ದ. ನನ್ನ ಬ್ಯಾಕ್ ಪ್ಯಾಕ್ ನ್ನು ಅವನ ಕೈಗೆ ಕೊಟ್ಟೆ. ಮತ್ತೆ ಲಿಪು ಪಾಸ್ ನಿಂದ ಭಾರತ ದ ಕಡೆ ಇಳಿಯುವಾಗ ಹಿಮದಲ್ಲಿ ಬಿದ್ದು ಎದ್ದು ಆಯಿತು. ಆದರೆ ಭಾರತಕ್ಕೆ ಮರಳಿ ಬಂದ ಸಂತಸದಲ್ಲಿ ಅದೆಲ್ಲ ಒಂದು ದೊಡ್ಡ ವಿಷಯ ಎನ್ನಿಸಲಿಲ್ಲ.ಆದರೆ ೮ ಲೀ ತೀರ್ಥದ ವ್ಯವಸ್ಥೆ ಆಗಬೇಕಿತ್ತು. ನನ್ನ ಪೋರ್ಟರ್ ತಾನು ಅದನ್ನು ನೇರವಾಗಿ ಧಾರ್ಚೆನ್ ತಲುಪಿಸುವುದಾಗಿ ಹೇಳಿದ. ಸರಿ ನನ್ನ ಜೊತೆ ಕುದುರೆಯವನು ಇದ್ದಾನಲ್ಲಾ ಎಂದು ಒಪ್ಪಿ ಕಳಿಸಿಬಿಟ್ಟೆ.
೧೦ನೆ ತಂಡದವರು ಓಂ ನಮಃ ಶಿವಾಯ ಎಂದು ನಮ್ಮನ್ನು ಎದುರುಗೊಂಡರು ಲಿಪು ನಲ್ಲಿ. ನಾವು ಯುದ್ಧ ಗೆದ್ದುಬಂದವರಂತೆ ನಗು ಮುಖದಿಂದ ಅವರನ್ನು ಎದುರುಗೊಂಡೆವು. ಅವರ ಮುಖಗಳಲ್ಲಿ ಆತಂಕ. ಒಬ್ಬರು I am alone from Bangalore in this batch ಎಂದರು. I am also alone from bangalore in my batch ಎಂದು ನಾನು ಹೇಳಿದೆ.ITBP ಯವರು ಎಂದಿನ ಪ್ರೀತಿ ಆದರ ಗಳಿಂದ ಸ್ವಾಗತಿಸಿದರು. ಭಾರತದ ಗಡಿಯೊಳಗೆ ಬಂದ ಕೂಡಲೇ ಸಿಕ್ಕ ಆ ಆದರ ವಿಶ್ವಾಸ ತಾಯಿಯ ಮಡಿಲಿಗೆ ಮರಳಿ ಬಂದಂತೆ ಎನ್ನಿಸಿತು. ಟಿಬೆಟ್ ನವರ ನಿರ್ಲಕ್ಷ್ಯ ಅನಾದರಗಳು ಅಲ್ಲಿಯ ಬೋಳುಗುಡ್ಡಗಳು ಎಲ್ಲಾ ಮರೆಯಾಗಿ ಮತ್ತೆ ಹಸಿರಿನ ಸೊಂಪು ಮನಸ್ಸಿಗೆ ಮುದ ಕೊಟ್ಟಿತು. ಲಿಪು ನಿಂದ ಇಳಿಯುತ್ತಿದ್ದಂತೆ altitude ಕಡಿಮೆಯಾದಂತೆ ಮೈ ಹತ್ತಿಯಂತೆ ಹಗುರಾಗಿತ್ತು. ಹಕ್ಕಿಗಳಂತೆ ತೇಲುತ್ತಾ ೧೧ ಗಂಟೆಗೆಲ್ಲ ನಭಿಡಾಂಗ್ ಸೇರಿಬಿಟ್ಟೆವು. ಎಲ್ಲರೂ ಅಭಿನಂದಿಸುವವರೇ. ಮಾಜೀ ಕೈಸಿ ರಾಹಿ ಯಾತ್ರಾ ಎಂದು ವಿಚಾರಿಸಿವವರೇ. ಹೋಗುವಾಗ ಎಷ್ಟು ಕಷ್ಟ ಪಟ್ಟೆವೋ ಬರುವಾಗ ಅಷ್ಟೇ ಸುಲಭವಾಗಿ ಬರುವಾಗ ಓಂ ಪರ್ವತವು ಸ್ಪಷ್ಟವಾಗಿ ದರ್ಶನ ಕೊಟ್ಟು ಸ್ವಾಗತಿಸಿತು. ಮತ್ತೆ ಫೋಟೋ ತೆಗೆದು ಕೊಂಡೆವು. ಶಿವನನ್ನು ಕೊಂಡಾಡಿದೆವು.ಬೆಟ್ಟದಂತೆ ಕಂಡಿದ್ದ ಯಾತ್ರೆಯು ಅವನ ದಯೆಯಿಂದ ಹೂ ಎತ್ತಿದಂತೆ ನಡೆದಿತ್ತು. ಕೈ ಕಾಲು ಮುಖ ತೊಳೆದುಕೊಂಡು ಚಪಾತಿ ಪಲ್ಯ,ಅನ್ನ ಕಡಿ ಊಟಮಾಡಿ ಮತ್ತೆ ಹೊರಟೆವು.ಕುದುರೆಯವನು ಬೈಥಿಯೇ ಮಾಜೀ ಎಂದ. ಸರಿ ಹತ್ತಿ ಕುಳಿತೆ.೭ km ಬರುವಾಗ ಕ್ಯಾಂಪ್ ನವರು ದಾರಿಯಲ್ಲೇ ಚಿಪ್ಸ್ ಮತ್ತು ಅದ್ರಕ್ ಚಾಯ್ ಕೊಟ್ಟರು. ಕುಡಿದು ಮತ್ತೆ ನಡೆದು ಕಾಲಾಪಾನಿ ತಲುಪಿದೆವು.
ಮರಳಿ ಗುಂಜಿಗೆ. ೩ ಆಗಸ್ಟ್.
ಇವೊತ್ತಿನ ಟ್ರೆಕ್ ಬರಿ ೯ km. ವೀಸಾ ಸ್ಟ್ಯಾಂಪ್ ಮಾಡಿಸಿಕೊಂಡು ಬಂದು ಕಾಲಿದೇವಿಗೆ ನಮಿಸಿ ಭರತ್ ಸಿಂಗ್ ಗೆ ನಾನು ನಡೆದೇ ಬರುವುದಾಗಿ ಹೇಳಿ ಹೊರಟೆ. ಪರ್ವತದ ಇಳಿಜಾರಿನಲ್ಲಿ ಸುಲಭವಾಗಿ ಇಳಿಯುತ್ತ ಪ್ರಕೃತಿಯನ್ನು ಪೂರ್ತಿಯಾಗಿ ಆಸ್ವಾದಿಸುತ್ತಾ ಜಪ ಭಜನೆಗಳನ್ನು ಹೇಳಿಕೊಳ್ಳುತ್ತಾ ಗಾಳಿಯಲ್ಲಿ ತೇಲುವಂತೆ ಬಂದೆ. ಹೀಗೆ ಹಿಮಾಲಯದಲ್ಲಿ ನಿಶ್ಚಿಂತೆಯಿಂದ ಅಲೆಯುವ ಪ್ರಕೃತಿಯಲ್ಲಿ ಭಗವಂತನ ಸಾನಿಧ್ಯವನ್ನು ಕಾಣುವ ಆಸೆ ಈಡೇರಿತ್ತು. ಇಂತಹದೊಂದು ಕನಸನ್ನು ನನಸು ಮಾಡಿಕೊಟ್ಟಿದ್ದಕ್ಕಾಗಿ ಭಗವಂತನನ್ನೂ ಗಂಡ ಮಕ್ಕಳನ್ನೂ ಬಾರಿ ಬಾರಿಗೂ ನೆನೆಸಿದೆ. ಕ್ಯಾಂಪ್ ತಲುಪುವಾಗ ಕ್ಯೋ ಆಶಾಜಿ ಬಹುತ್ ಖುಷ ಲಗ ರಹೇ ಹೈ ಎಂದು ಎಲ್ಲರೂ ಕೇಳುವವರೆ!
ಓಂ ನಮಃ ಶಿವಾಯದೊಂದಿಗೆ ರಸ್ನಾ ಬಂತು. ಪಾಪ ಸಂಜಯ್ ಕೊಥಾರಿಯವರು ಕುದುರೆ ಯಿಂದ ಬಿದ್ದು ಕೈ ಮುರಿದುಕೊಂಡಿದ್ದರು. ಆದರೆ ಸಹ ಯಾತ್ರಿಗಳೆಲ್ಲ ಅವರನ್ನು ತುಂಬಾ ಚೆನ್ನಾಗಿ ನೋಡಿಕೊಂಡು ಯಾತ್ರೆ ಮಾಡಿಸಿದರು. ಅಪ್ಪಾಜಿ ಆಪ್ಟೆ ಯವರಂತೂ ಜೊತೆಗೇ ಇದ್ದು ಸೇವೆ ಮಾಡಿದ್ದರು.
ಸ್ನಾನದ ಕ್ಯೂ ಹಚ್ಚಿದೆವು. ಈ ಸಲ ಆಶಿಶ್ ಪಟೇಲ್ ಬೆಂಕಿ ಉರಿಸಿ ನೀರು ಕಾಯಿಸಲು ಕುಳಿತಿದ್ದರು. ನನಗೇನಾದರೂ ಒಂದು ಬಕೆಟ್ ನೀರು ಕೊಟ್ತಾರೇನೋ ಎಂದು ಆಶೀಶ್ ಭ್ಯೈಯಾ ಮೇರಿ ಬಾರಿ ಕಬ್ ಆಯೆಗಿ ಎಂದು ಸ್ವಲ್ಪ ಮುಸ್ಕ ಹಚ್ಚಲು ಪ್ರಯತ್ನಿಸಿದೆ. ಮೇರೆ ಬಾದ್ ಎಂದು ಬಿಟ್ಟರು. ಇನ್ನು ಕಾದು ಪ್ರಯೋಜನವಿಲ್ಲ ಎಂದು ಅಡಿಗೆಮನೆಗೆ ಹೋಗಿ ಒಂದು ಬಕೆಟ್ ಬಿಸಿ ನೀರು ತೆಗೆದುಕೊಂಡು ಬಂದು ಸ್ನಾನ ಮಾಡಿ ಬಟ್ಟೆ ಒಗೆದು ಹಾಕಿದೆ. ಇಂದು ಗುಂಜಿ ಯಲ್ಲೂ ಬಡ ಖಾನಾ ಅಂತೆ ರುಚಿ ರುಚಿ ಯಾದ ಬಿಸಿ ಊಟ ಮತ್ತೆ ಕೇಳಿದಷ್ಟು ಮೊಸರು! ೩ ವಾರಗಳಿಂದ ಮೊಸರಿನ ಮುಖ ಕಂಡಿದ್ದಿಲ್ಲ. ಎಲ್ಲರೂ ಹೊಟ್ಟೆ ತುಂಬಾ ಊಟಮಾಡಿ ಬಂದು ಮಲಗಿದೆವು. ೪. ೩೦ಗ಼ೆ ಉಷಾ ಬಟಾಟ ವಡ ಕೆಚಪ್ ತಂದು ಎಬ್ಬಿಸಿದರು. ಪಾಪ ಜ್ಯೋತಿ ಎಲ್ಲರಿಗೂ ವಡಾ ಮಾಡಿ ತಿನ್ನಿಸಿದ್ದಳು. ಹುಡುಗರೆಲ್ಲ ಕ್ರಿಕೆಟ್ ಆಡಲು ಹೋಗಿದ್ದರು. ಅವರಿಗೆಲ್ಲ ಮತ್ತೆ ವಡಾ ಮಾಡಿ ಕೊಡುತ್ತೇನೆ ಎನ್ನುತ್ತಿದ್ದಳು. ಆದರೆ ಯಾರೋ ವಡಾ ತಿನ್ನದೇ ಕಸದ ಬುಟ್ಟಿಗೆ ಹಾಕಿದ್ದು ನೋಡಿ ಸಿಟ್ಟಾಗಿ ಬಿಟ್ಟಳು. ಟೀ ಕುಡಿದು ದಿನಚರಿಯೇ ಆಗಿಹೋಗಿದ್ದ ಪ್ಯಾಕಿಂಗ್ ಮುಗಿಸಿದೆವು. ನಾಳೆ ಲಗೇಜ್ ಸಿಗುವುದಿಲ್ಲ ಎಂದರು.ಸರಿ ಒಂದು ಜೊತೆ ಬಟ್ಟೆಯನ್ನು ಬ್ಯಾಕ್ ಪ್ಯಾಕ್ ಗೆ ಹಾಕಿಕೊಂಡೆ. ಹೇಗೂ ಯಾತ್ರೆ ಮುಗಿಯಿತಲ್ಲಾ ಎಂದು ಜಾಕೆಟ್ ಗಳನ್ನು ಭರತ್ ಸಿಂಗ್ ಗೆ ಕೊಟ್ಟೆ. ಸಂಜೆಗೆ ಭಜನೆ,ರಾತ್ರೆಗೆ kmvn ನವರಿಂದ ಪಾಯಸದ ಊಟ. ಬೆಳಿಗ್ಗೆ ೬ ಗಂಟೆಗೆ ಕ್ಯಾಂಪ್ ಬಿಡುವುದು ಎಂದಾಯಿತು. ನಾಳಿನ ಟ್ರೆಕ್ ೧೮km.
ಮತ್ತೆ ಬುಧಿಗೆ ೪ ಆಗಸ್ಟ್.
ಬೆಳಿಗ್ಗೆ ದೇವಸ್ಥಾನಕ್ಕೆ ಹೋಗಿ ನಮಿಸಿ ಬಂದು ಪೂರಿ ಭಾಜಿ ತಿಂದು bournvita ಕುಡಿದು ಹೊರಟೆವು. ನಿನ್ನೆಯಂತೆ ಇವತ್ತೂ ಪೂರ್ತಿ ನಡೆಯಬೇಕೆಂದು ಕೊಂಡಿದ್ದೆ. ೧೧km ಏರು ದಾರಿ ಹತ್ತಿ ಗರ್ಭ್ಯಾಂಗ್ ತಲುಪಿದಾಗ ೯. ೩೦ ಆಗಿತ್ತು. ಟೀ ಚಿಪ್ಸ್ ಕೊಟ್ಟರು.ಸ್ವಲ್ಪ ವಿಶ್ರಮಿಸಿ ಕೊಳ್ಳುವಾಗ ಮೇಲಿನಿಂದ ೧೧ ನೇ ತಂಡದವರು ಬಂದರು. ಭೇಟಿ ಮಾತುಕತೆ ಆಯಿತು.ಬೆಂಗಳೂರಿನಿಂದ ಆಶಾ ಲತಾ ಎಂಬುವವರು ಇದ್ದರಂತೆ. ನನಗೆ ಸಿಗಲಿಲ್ಲ.ಉಳಿದವರು ಯಾತ್ರೆಯ ಬಗ್ಗೆ ವಿಚಾರಿಸಿದರು. ಅವರ ಲೇಡಿ L.O. ಸುನೀತಾ ಅವರ ಜೊತೆ ಮಾತಾಡಿದೆವು. ೧೦ ನೇ ಬ್ಯಾಚ್ ನಲ್ಲಿ ೪೯ ಜನರಿದ್ದರಂತೆ. ಧಾರ್ಚೆನ್ ತಲುಪುವಾಗಲೇ ಸುಸ್ತಾಗಿ ೫ ಜನ ವಾಪಸ್ ಹೋದರಂತೆ.
ಉಳಿದ ೭km ದಾರಿ ನಡೆದು ಬುಧಿ ತಲುಪುವಾಗ ೧. ೩೦. ನಿಂಬೂ ಪಾನಿ ಕುಡಿದು ಸುಧಾರಿಸಿ ಕೊಂಡು ನೀರು ಕಾಯಿಸಿ ಸ್ನಾನ ಊಟ ಮಾಡಿ ಬೆಚ್ಚಗೆ ಹೊದ್ದು ಮಲಗಿದೆವು. ಟೀ ಬಿಸ್ಕೆಟ್ಸ್ ಬಂದಾಗಲೇ ಎಚ್ಚರ.ಕುಡಿದು ಹೊರಗೆ ಬಂದರೆ ಒಮ್ಮೆಲೇ ಮೈ ಮರೆತಂತಾಯಿತು. ಪರ್ವತದ ತಂಗಾಳಿ, ಹಿತವಾದ ಚಳಿ,ಕೈಗೆ ಎಟಕುವಷ್ಟು ಕೆಳಗಿಳಿದ ಮೋಡಗಳು, ಬೆಟ್ಟದಲ್ಲಿ ಕೊರದಿಟ್ಟಂತೆ ಮನೆಗಳು, ಆ ಸೊಬಗನ್ನು ವರ್ಣಿಸಲು ಕವಿಯ ಲೇಖನಿಗೆ ಸಾಧ್ಯ. ನಾವು ಮೌನವಾಗಿ ಆಸ್ವಾದಿಸಿದೆವು.
ಒಬ್ಬ ಗಿರಿಜನ ಮುದುಕ ಗಿಡ ಮೂಲಿಕೆ ಗಳನ್ನೂ ಭೋಜಪತ್ರ ಮುಂತಾದವನ್ನೂ ತಂದ ನಾವೆಲ್ಲಾ ಕೊಂಡುಕೊಂಡೆವು. ಬಿಸಿ ಸೂಪ್ ಕುಡಿದು ಭಜನೆ ಹಾಡಿದೆವು. ಅವತ್ತು ಅಮಾವಾಸ್ಯೆ ಎಂದು ಶೀತಲ್ ಬೆಳಗಿನಿಂದ ಉಪವಾಸವಿದ್ದರು. ರಾತ್ರಿಗೆ ಖಿಚಿಡಿ,ಪಾಲಕ್,ಕಡಿ,ಖೀರು ಮಾಡಿದ್ದರು.
ನಾಳೆಯ ಕೊನೆ ಟ್ರೆಕಿಂಗ್ ೨೧km. ಬೇಗ ಮಾಂಗ್ತಿ ತಲುಪಿದರೆ ೩-೪ ಗಂಟೆಯೊಳಗೆ ಬಸ್ನಲ್ಲಿ ಧಾರ್ಚುಲ ತಲುಪಿ ಬ್ರಿಜ್ ದಾಟಿ ನೇಪಾಳಕ್ಕೆ ಹೋಗಿ ಶಾಪಿಂಗ್ ಮಾಡಬಹುದು.ಆದರೆ ೭ ಗಂಟೆಗೆ ಬ್ರಿಜ್ ಮುಚ್ಚುವ ಮೊದಲೇ ವಾಪಾಸ್ ಬರದಿದ್ದರೆ ಅಲ್ಲೇ ಉಳಿಯಬೇಕು ರಾತ್ರಿ ಎಂದು L.O. ಹೇಳಿದರು.
ಅವಿಸ್ಮರಣೀಯ ಕೊನೆಯ ಚಾರಣ. ೫ ಆಗಸ್ಟ್.
ಬೆಳಿಗ್ಗೆ ಎದ್ದಾಗ ಮಳೆ ಬರುತ್ತಿತ್ತು. ರಾತ್ರಿಯಿಂದಲೂ ಸುರಿಯುತ್ತಿತ್ತಂತೆ. ಮಳೆಯೋ ಚಳಿಯೋ ಚಾರಣವಂತೂ ತಪ್ಪಿದ್ದಲ್ಲ ಬ್ರೇಕ್ಫಾಸ್ಟ್ ಮುಗಿಸುವಾಗ KMVN ನವರು ಬಂದು ಮಳೆ ಕಡಿಮೆಯಾಗಿದೆ ಹೊರಡಿ ಎಂದರು. ತಕಲಾಕೊಟ್ ನಲ್ಲಿ ಒಂದು ರೈನ್ ಪ್ಯಾಂಟ್ ಕೊಂಡಿದ್ದೆ.ಅದನ್ನು ಏರಿಸಿ ಅದರಮೇಲೆ ರೈನ್ ಜಾಕೆಟ್ ತೊಟ್ಟು ಹೊರಟೆ.ಮಳೆರಾಯ ಮಾತ್ರ ಬೆನ್ನು ಬಿಡಲಿಲ್ಲ. ಇಷ್ಟು ದಿನ ಚಾರಣದಲ್ಲಿ ಎಂದೂ ತೊಂದರೆಯಾಗಿರಲಿಲ್ಲ. ಪ್ರಕೃತಿಯ ಸಂಪೂರ್ಣ ಸಹಕಾರದೊಂದಿಗೆ ಯಾತ್ರೆ ಮಾಡಿದ್ದೆವು. ಇಂದು ಶುಕ್ರವಾರ. ಲಲಿತ ಸಹಸ್ರನಾಮ ಹೇಳಿಕೊಳ್ಳುತ್ತಾ ನಡೆದೆ. ಜಾಕೆಟ್ ಜೇಬಿನಲ್ಲಿ ಸಹಸ್ರನಾಮದ ಪುಸ್ತಕವನ್ನೂ ಇಟ್ಟುಕೊಂಡಿದ್ದೆ. ಈ ಮಳೆಗೆ ಈ ಜಾಕೆಟ್ ಏನೂ ಸಾಕಾಗಲಿಲ್ಲ.ತೊಟ್ಟ ೪ ಪದರ ಬಟ್ಟೆಯೂ ಒದ್ದೆ. ನನ್ನ ಬ್ಯಾಕ್ ಪ್ಯಾಕ್ ಅನ್ನು ಭರತನ ಕುದುರೆಯ ಮೇಲೆ ಕೊಟ್ಟಿದ್ದೆ.ಕ್ಯಾಮೆರಾ ವನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿ ಭರತ ತನ್ನ ಜಾಕೆಟ್ ಒಳಗೆ ಇಟ್ಟುಕೊಂಡಿದ್ದ. ಮಳೆಯಲ್ಲಿ ತೋಯ್ದು ನಡುಗುತ್ತಾ ನಡೆದೇ ನಡೆದೆವು. ಕೆಸರು ದಾರಿ.ಹೆಜ್ಜೆ ಇಟ್ಟರೆ ಕಚ ಪಚ ಕೊಚ್ಚೆಯಲ್ಲಿ ಒಂದು ಅಡಿ ಒಳಗೆ.ಶೂ,ಸಾಕ್ಸ್ ಪ್ಯಾಂಟ್ ಎಲ್ಲವೂ ಕೊಚ್ಚೆ.ಆದರೆ ಬೇರೇನೂ ದಾರಿಯಿಲ್ಲ ನಡೆದೇ ನಡೆದೆವು.
ಇಕ್ಕಟ್ಟಾದ ಪರ್ವತದ ಪಕ್ಕದಲ್ಲಿ ಕೆಸರು ದಾರಿ.ಪಕ್ಕದಲ್ಲಿ ಭೋರ್ಗರೆದು ಹರಿಯುತ್ತಿರುವ ಕಾಳಿ ನದಿ. ಸ್ವಲ್ಪ ಕಾಲು ಜಾರಿದರೂ ಕಾಳಿಯ ಪಾಲು. ಅವಳ ಭೋರ್ಗರೆತದಲ್ಲಿ ಪಕ್ಕದಲ್ಲೇ ಮಾತಾಡಿದರೂ ಕೇಳಿಸುತ್ತಿಲ್ಲ.ಸ್ವಲ್ಪ ಮೈಮರೆತರೂ ವೇಗವಾಗಿ ಕೊಚ್ಚಿಕೊಂಡು ಹೋಗುವುದು ಖಂಡಿತ. ೫ ನಿಮಿಷಕ್ಕೊಂದು ಜಲಧಾರೆ ನೆತ್ತಿಯಮೆಲಿಂದ ಸುರಿಯುತ್ತಿತ್ತು. ನನ್ನನ್ನೂ ಕುದುರೆಯನ್ನೂ ಸಂಭಾಳಿಸಲಾಗದೇ ಭರತ್ ಕುದುರೆ ತೆಗೆದುಕೊಂಡು ಮುಂದೆ ಹೋಗಿಬಿಟ್ಟ. ITBPಯ ಜವಾನ್ ಒಬ್ಬ ನನ್ನ ಕೈ ಹಿಡಿದು ನಡೆಸಿದ. ಎಷ್ಟು ನೆನೆದೆವೂ ಎಷ್ಟು ಜಲಧಾರೆಗಳಲ್ಲಿ ಮಿಂದೆವೋ ದೇವರಿಗೇ ಗೊತ್ತು. ನಡೆದೇ ನಡೆದೆವು.ನಡೆದೇ ನಡೆದೆವು. ಇತನಾ ಹಿ ಮಾಜೀ, ಆಗೇಸೆ ರಾಸ್ತಾ ಅಚ್ಚಾ ಹೈ ಎಂಬ ಆಶ್ವಾಸನೆ ಕೇಳುತ್ತಾ ಕೊಚ್ಚೆಯಲ್ಲಿ ನಡೆದೆವು.ದಾರಿ ದುರ್ಗಮವೆಂದರೆ ಏನೂ ಹೇಳಿದನ್ತಾಗಲಿಕ್ಕಿಲ್ಲ. ಒಂದು ಕಡೆ ದೊಡ್ಡ ಪರ್ವತವೊಂದು ಕುಸಿದಿದೆ ದಾರಿಯೇ ಇಲ್ಲ. ಕುಸಿದ ಪರ್ವತವನ್ನು ಬಳಸಿಕೊಂಡು ನಡೆದೆವು.ದೇವರ ದಯೆಯಿಂದ ಯಾವುದೇ ಪ್ರಾಣಹಾನಿಯಾಗಿರಲಿಲ್ಲ.ಆ ಪರ್ವತ ೨ ದಿನಗಳ ಹಿಂದೆ ಕುಸಿದಿತ್ತಂತೆ. ಭೀಮಾಕಾರದ ಬಂಡೆಗಳ ನಡುವೆ ದಾರಿ ಮಾಡಿಕೊಂಡು ನಡೆದೆವು. ನನ್ನ ಹಿಂದೆ ದೆಹಲಿಯ ಗುಪ್ತಾಜಿ ಇದ್ದರು. ನನ್ನ ಬೆಲ್ಟ್ ಪೌಚ್ ನಲ್ಲಿ ಇಟ್ಟುಕೊಂಡಿದ್ದ ದುಡ್ಡೆಲ್ಲ ಒದ್ದೆ ಮುದ್ದೆ ಯಾಗಿತ್ತು. ಈಗ ಗುಪ್ತಾಜಿಗೆ ಹೇಳಿದೆ ಈ ದುಡ್ಡು ಇಟ್ಟು ಕೊಳ್ಳಿ, ಕ್ಯಾಂಪ್ನಲ್ಲಿ ಇಸಿದು ಕೊಳ್ಳುತ್ತೇನೆ ಯಂದು. ನಾನೂ ಪೂರ್ತಿ ಒದ್ದೆ ಯಾಗಿದ್ದೇನೆ ಇರಲಿ ನಡೆಯಿರಿ ಎಂದರು. ಪುಣ್ಯಕ್ಕೆ ಪ್ಲಾಸ್ಟಿಕ್ ಕವರ್ ನಲ್ಲಿ ಇದ್ದ ಪಾಸು ಪೋರ್ಟ್ ನೆನೆದಿರಲಿಲ್ಲ. ಮಳೆಯಂತೂ ನಮ್ಮನ್ನು ಬಿಡುವಂತೆ ಕಾಣಿಸಲಿಲ್ಲ. ದಾರಿಯೂ ಸವೆದಂತೆ ಕಾಣಿಸುತ್ತಿಲ್ಲ.
ದಾರಿಯಲ್ಲಿ ಮರದ ಸೇತುವೆಯ ಹತ್ತಿರ ಬರುವಾಗ ಅಲ್ಲಿ ಒಬ್ಬ ಕುಳಿತಿದ್ದ.ನನ್ನನ್ನು ಕೈ ಹಿಡಿದು ನಡೆಸುತ್ತಿದ್ದ ಜವಾನ್ ಗೆ ಏನೋ ಹೇಳಿದ.ನನಗೆ ಕೇಳಿಸಲಿಲ್ಲ. ಬ್ರಿಜ್ ದಾಟುವಾಗ ನೋಡಿದರೆ ಮೇಲಿನಿಂದ ದೊಡ್ಡ ದೊಡ್ಡ ಬಂಡೆಕಲ್ಲುಗಳೇ ಕಾಳಿಯ ಭೋರ್ಗರೆತದೊಂದಿಗೆ ಕೆಳಗೆ ಬರುತ್ತಿವೆ! ಬ್ರಿಜ್ ಅರ್ಧ ಮುರಿದಿದೆ. ಮತ್ತೊಂದು ದೊಡ್ಡ ಬಂಡೆ ಸ್ವಲ್ಪವೆ ದೂರದಲ್ಲಿ ಬಂದು ಕುಳಿತಿದೆ. ಆ ರುದ್ರ ಭೀಕರ ತಾಂಡವ ವನ್ನು ನೋಡಲೂ ಸಮಯವಿರಲ್ಲ. ಏನಾಗುತ್ತಿದೆಯೆಂದು ನನಗೆ ತಿಳಿಯುವ ಮೊದಲೇ ಆ ಜವಾನ್ ನನ್ನನ್ನ ಎಳೆದುಕೊಂಡು ಓಡಲು ಪ್ರಾರಂಭಿಸಿದ. ಅಯ್ಯೋ ಈಗ ಬ್ರಿಜ್ ಮುರಿದರೆ ಏನು ಗತಿ,ನಮ್ಮವರೆಲ್ಲಾ ಇನ್ನೂ ಹಿಂದಿದ್ದಾರೆ ಎಂದೆ. ಆಪ್ ಆಯಿಯೇ ಮಾಜೀ ಎಂದು ಎಳೆದುಕೊಂಡು ಓಡಿದವನು ಅರ್ಧವೋ ಒಂದೋ km ನಂತರ ಕಲ್ಲುಗಳು ಬೀಳುವುದು ನಿಂತಮೇಲೆ ನನ್ನ ಕೈ ಬಿಟ್ಟ. ಓಡಿ ಓಡಿ ಸುಸ್ತು. ನಾನಂತೂ ಎಂದೂ ಅಷ್ಟು ಓಡಿರಲಿಲ್ಲ. ನಾವಂತೂ ಪಾರಾದೆವು ಉಳಿದವರ ಗತಿ ಏನು ಬ್ರಿಜ್ ಮುರಿದರೆ ಎಂದು ಚಿಂತೆಯಾಗಿತ್ತು. ಒಂದು ಟೀ ಶಾಪ್ ನಲ್ಲಿ ಭರತ್ ಕೂತಿದ್ದ.ನನ್ನನ್ನು ಏಕೆ ಬಿಟ್ಟು ಬಂದೆ ಎಂದರೆ ರಾಸ್ತಾ ಇತನಾ ತಂಗ್ ಥಾ ಮಾಜಿ,ಮೈ ಘೋಡೇ ಔರ್ ಆಪ್ ದೊನೊಂಕೋ ನಹಿ ಸಂಭಾಲ್ ಸಕಾ ಎಂದ. ಸರಿ ಮತ್ತೆ ನಡೆದೆವು, ದಿನ್ನೆಗಳನ್ನು ಹತ್ತಿ ಇಳಿದೆವು, ಹಳ್ಳ ತಿಟ್ಟು ಗಳನ್ನು ದಾಟಿದೆವು,ಜಲಧಾರೆಗಳಲ್ಲಿ ಮಿಂದೆವು,ಕೆಸರಿನ ರೋಚ್ಚಿನಲ್ಲಿ ಮೆತ್ತನೆಯ ಹಾಸಿಗೆಗಳ ಮೇಲೆ ನಡೆದಂತೆ ನಡೆದೆವು. ಆದರೆ ದಾರಿ ಸವೆಯುತ್ತಿಲ್ಲ,ಮಳೆ ನಿಂತಿಲ್ಲ.ಬೆಳಗಿನ ೫ ಗಂಟೆಯಿಂದ ಮಧಾಹ್ನ ಒಂದು ಗಂಟೆಯವರೆಗೆ ನೆನೆದು ತೊಪ್ಪೆಯಾಗಿ ನಡೆಯುತ್ತಿದ್ದೇವೆ. ಅಂತೂ ಬಸ್ ನಿಲ್ಲುವ ಜಾಗಕ್ಕೆ ಬಂದರೆ ಅರ್ಧ km ಆಚೆ ಭೂ ಕುಸಿತವಾಗಿದೆ ಎಂದು ಬಸ್ ಆಚೆಯೇ ನಿಂತಿತ್ತು. ಅಲ್ಲಿಯ ತನಕ ಮತ್ತೆ ನಡೆದೆವು. ಸುಖವಾಗಿ ಯಾತ್ರೆ ಮಾಡಿಸಿದೆ,ಆದರೆ ತಾನು ಅಷ್ಟು ಸುಲಭನಲ್ಲ ಎಂದು ತೋರಿಸಲು ಚೆನ್ನಾಗಿ ತೊಯಿಸಿಯೂ ಬಿಟ್ಟೆ ಮಹದೇವಾ ಎನ್ನುತ್ತಾ ನಡೆದೇ.ಇಂದಿನ ಚಾರಣದಲ್ಲಿ ಮಾತ್ರ ಒಂದು ಘಳಿಗೆಯೂ ಅವನ ನಾಮ ಮರೆತಿರಲಿಲ್ಲ. ಕಾಳಿಯ ಭೋರ್ಗರೆತ,ಆ ಕೆನ್ನೀರಿನ ರೌದ್ರಾವತಾರ, ೨ ನಿಮಿಷದಲ್ಲಿ ತಲೆ ತಿರುಗ ಬೇಕಿತ್ತು.ಆದರೆ ೮ ಗಂಟೆಗಳ ಕಾಲ ಅವಳ ಪಕ್ಕದಲ್ಲೇ ನಡೆದಿದ್ದೆವು. ಈಗ ಅನಿಸುತ್ತಿದೆ,ಮನುಷ್ಯನಿಗೆ ಭಯವೇ ವೈರಿ,ಭಯವನ್ನು ಗೆದ್ದವನೇ ಧೀರ ಎಂದು.
ಉಷಾ ಇಡೀ ಯಾತ್ರೆಯಲ್ಲಿ ಕುದುರೆ ಹತ್ತಿರಲಿಲ್ಲ. ಡೋಲ್ಮಾ ಪಾಸ್ ನಲ್ಲೂ ನಡೆದಿದ್ದಳು. ಆದರೆ ಇವತ್ತಿನ ಕಾಳಿಯ ಸ್ವರೂಪ ನೋಡಿ ತಲೆ ತಿರುಗಿತಂತೆ. ಒಂದು ತಿರುವಿನಲ್ಲಿ ನಾನು ಬಂದಾಗ ಇವಳು ಬಂಡೆಗೆ ಒರಗಿ ನಿಂತು ಬಿಟ್ಟಿದ್ದಾಳೆ, L.O., ರವೀoದ್ರ ಸಿಂಗ್ ಮುಂತಾದವರು ಇವಳನ್ನು ಸಮಾಧಾನ ಪಡಿಸುತ್ತಿದ್ದಾರೆ. ನನ್ನನ್ನು ಕಂಡವರೇ L.O. ಆಶಾಜಿ ಇನಕೋ ಸಂಭಾಲಿಯೇ ಎಂದರು. ನಾನೂ ೧೦ ನಿಮಿಷ ನಿಂತು ಮಾತನಾಡಿ ಧೈರ್ಯ ಕೊಟ್ಟು ಮುಂದೆ ನಡೆದೆ. ನಂತರ ITBP ಯ ಜವಾನ್ ಒಬ್ಬ ಪೂರ್ತಿ ಅವಳನ್ನು ಕೈ ಹಿಡಿದು ನಡೆಸಿದ.
ಕೊನೆಗೂ ಬಸ್ ನಿಂತ ಜಾಗಕ್ಕೆ ತಲುಪಿದಾಗ ೧. ೩೦ ನಿಮಿಷ ಆಗಿತ್ತು.ಜಡಿಮಳೆ ನಿಂತಿರಲಿಲ್ಲ.ತಲೆಯಿಂದ ಶೂ ವರೆಗೆ ನೀರಿಳಿಯುತ್ತಿತ್ತು.ಎದುರಿಗೇ L.O. ನಿಂತಿದ್ದರು. congrats ಆಶಾಜಿ ಎಂದರು. ಕಿಸ್ಲಿಯೇ ಎಂದರೆ ಯಾತ್ರಾ ಪೂರಿ ಕೀ ಆಪ್ನೆ ಇಸ್ಲಿಯೇ ಎಂದರು. ಮೈ ಪೂರಿ ಯಾತ್ರ ಪೈದಲ್ ನಹಿ ಕರ್ ಸಕಿ. ಆಪ್ನೆತೋ ಪೂರಿ ಯಾತ್ರಾ ಪೈದಲ್ ಹಿ ಕಿಯಾ ಹೈ ಸರ್ ಎಂದೇ. ಕೈಸೆ ಬ್ಹೊಲೆನಾಥ್ ಕಿ ಇಚ್ಚಾ ತಿ ವೈಸೇ ಕರಾಯಿ ಎಂದರು. ಆಜ್ಕಾ ರಾಸ್ತಾ ತೊ ಬಹುತ್ ಮುಶ್ಕಿಲ್ ಥಾ ಎಂದರೆ ಹಾ ತೋಡಾ ಇಂಟೆರೆಸ್ಟಿಂಗ್ ಥಾ ಎನ್ನುತ್ತಿದ್ದಾರೆ! ನಾನು ಸತ್ತೆನೋ ಬಿದ್ದೆನೋ ಎಂದು ನಡೆದಿದ್ದೆ! ಭರತ್ ಸಿಂಗ್ ಗೆ ಅವನ ಮಜೂರಿ ಕೊಟ್ಟು ಕಳಿಸಿದೆ ಮೇಲೆ ೧೦೦/ರೂ ಟಿಪ್ಸ್ ಕೊಟ್ಟೆ. ಖುಷಿಯಿಂದ ಓಡಿದ. ಕೈ ತೊಳೆದುಕೊಂಡು ಬಸ್ ಹತ್ತಿದೆ. ಬಸ್ನಲ್ಲಿ ಬಿಸಿ ಬಿಸಿ ಪಲಾವ್ ಮತ್ತು ಮೊಸರು ಕೊಡುತ್ತ ಇದ್ದರು. ೩೫km ಅಷ್ಟೇ ತಾನೇ ರೂಂ ಸೇರಿ ಬಟ್ಟೆ ಬದಲಾಯಿಸಿ ಊಟ ಮಾಡಬಹುದಿತ್ತು ಎನಿಸಿತು. ಆದರೆ ಊಟ ಮಾಡುವಾಗ ಗೊತ್ತಾಯಿತು ಎಷ್ಟು ಹಸಿವೆ ಆಗಿತ್ತು ಎಂದು. ಎರೆಡು ಎರೆಡು ಬಾರಿ ಪಲಾವ್ ಮತ್ತು ಮೊಸರು ಹಾಕಿಸಿಕೊಂಡು ತಿಂದೆ. ಇಂದಿನ ಚಾರಣ ೨೧ ರ ಬದಲಿಗೆ ಸುತ್ತಿಕೊಂಡು ಬರುವಾಗ ೨೪km ಆಗಿತ್ತಂತೆ!
ಅಂತೂ ಒಬ್ಬೊಬ್ಬರಾಗಿ ಎಲ್ಲರೂ ಬಂದು ಬಸ್ ಹತ್ತಿದರು. ಕುದುರೆಗಳ ಮೇಲೆ ಬಂದ ಲಗೇಜ್ ಎಲ್ಲ ಬಸ್ ಟಾಪ್ ಮೇಲೆ ಹಾಕಿಸಿದರು. ಗುಪ್ತಾಜಿ ನನ್ನೊಂದಿಗೆ ನಡೆಯುತ್ತಿದ್ದವರು ಕೊನೆಯಲ್ಲಿ ಹಿಂದೆ ಬಿದ್ದಿದ್ದರು. ಈಗ ಅವರು ಬಸ್ ಹತ್ತಿದವರೇ ಆಶಾಜಿ ಆಪ್ಕ ಹೊಸಲಾತೋ ಮುಝೆ ಹೋಸಲಾ ದೇತಾ ರಹಾ ಎಂದರು. ಅಂತೂ ೨. ೩೦ ಕ್ಕೆ ಬಸ್ ಹೊರಟಿತು.ಕೊನೆಯಲ್ಲಿ ಹತ್ತಿದ kmvn ಮ್ಯಾನೇಜರ್ ಅಬ್ ಏ ಗಾಡಿ ಆಗೇ ನಹಿ ಜಾಯೆಗಿ, ಜಿಸೆ ಚಲನಾ ಹೈ ಓ ಚಲ ಸಕತೆ ಹೈ,ಎಂದರು. ನಾವು ಕುಳಿತಲ್ಲೇ ಕುಸಿದೆವು. ಗಾಡಿ ಹೊರಟಿತು,ಇವರು ಕಣ್ಣು ಮಿಟುಕಿಸಿ ನಗುತ್ತಿದ್ದಾರೆ!
ಲ್ಯಾಂಡ್ ಸ್ಲೈಡ್ ಗಳನ್ನೂ ದಾಟುತ್ತಾ ೩೫km ಕ್ರಮಿಸಲು ೩ ಗಂಟೆ ಬೇಕಾಯಿತು. ಧಾರ್ಚುಲಾ ತಲುಪಿದಾಗ ೫. ೩೦.ನಿಮಿಷ. ಅದೇ ಗೆಸ್ಟ್ ಹೌಸ್ ಅದೇ ರೂಂ. ಮೊದಲು ಒದ್ದೆ ಬಟ್ಟೆ ಬಿಚ್ಚಿ ಎಸೆದು ತನ್ನೀರಿನಲ್ಲೇ ಸ್ನಾನ ಮಾಡಿ ನಡುಗುತ್ತಾ ಒಣಗಿದ ಬಟ್ಟೆ ತೊಟ್ಟೆ. ಬ್ಯಾಗ್ ನಲ್ಲಿದ್ದ ಪ್ರತಿಯೊಂದು ಸಾಮಾನೂ ಬಟ್ಟೆಯೂ ತೋಯ್ದಿತ್ತು.ಆದಷ್ಟು ಎಲ್ಲವನ್ನೂ ಬಿಚ್ಚಿ ಹರಡಿದೆ.ಕುದುರೆಗಳ ಮೇಲೆ ಬಂದ ಲಗೇಜ್ ನಲ್ಲಿ ಯಲ್ಲವನ್ನೋ ಪ್ರತ್ಯೇಕ ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿ ಇಟ್ಟಿದ್ದರಿಂದ ಅವು ನೆನೆದಿರಲಿಲ್ಲ. ಯಾರುಯಾರೋ ನೇಪಾಳ ಕ್ಕೆ ಶಾಪಿಂಗ್ ಎಂದು ಓಡಿದರು. ನಾನು ಲಲಿತಾ ಅಷ್ಟೋತ್ತರ ಪಾರಾಯಣ ಮಾಡಿ ಊಟ ಮಾಡಿ ಮಲಗಿದರೆ ಇವೊತ್ತು ಬೆಳಗಿನಿಂದ ಆದದ್ದೆಲ್ಲಾ ಸಿನಿಮಾ ದ ದೃಶ್ಯ ಗಳಂತೆ ಮತ್ತೆ ಮತ್ತೆ ಕಣ್ಣಿ ಗೆ ಕಟ್ಟುತ್ತಿದೆ. ನಡೆದದ್ದೆಲ್ಲ ನಿಜವೋ ಕನಸೋ ಎನಿಸುತ್ತಿದೆ, ಇವೊತ್ತಿನ ಚಾರಣ ವಾದರೆ ನಿಜವಾಗಿಯೂ adventurous trek ಎನಿಸಿತು.
ಪಾತಾಳ ಭುವನೇಶ್ವರನ ದರ್ಶನ. ೫-೬ ಆಗಸ್ಟ್.
ಮುಂದಿನ ಎರಡು ದಿನಗಳ ಯಾತ್ರೆ ಬಸ್ ನಲ್ಲಿ. ಹೆಚ್ಚಿ ವಿಶೇಷವೇನಿಲ್ಲಾ. ಉತ್ತರಾಂಚಲದ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ ದಾರಿ ಸವೆಯಿತು. ರಾತ್ರಿ ಜಗೇಶ್ವರದಲ್ಲಿ ಉಳಿದೆವು. ಬೆಳಿಗ್ಗೆ ಈಶ್ವರನ ದರ್ಶನ ಮಾಡಿದೆವು. ಪುರಾತನ ದೇವಾಲಯ,ಭಕ್ತಾದಿಗಳು ವಿವಿಧ ಸೇವೆ ಅರ್ಚನೆಗಳನ್ನು ಮಾಡಿಸುತ್ತಿದ್ದರು.ಅಲ್ಲಿಂದ ಹತ್ತಿರದಲ್ಲಿದ್ದ ಆಶ್ರಮ ವೊಂದಕ್ಕೆ ಹೋದೆವು. ಅಲ್ಲಿಯೂ ಯಾವುದೂ ಹೋಮದ ಸಿದ್ದತೆ ನಡೆದಿತ್ತು.ಅಲ್ಲಿನ ಬಾಬಾರ ಆಶೀರ್ವಾದ ಪಡೆದು ಮುಂದೆ ಹೊರಟೆವು.
ಮಧಾಹ್ನದ ಊಟ kmvn ಗೆಸ್ಟ್ ಹೌಸ್ ನಲ್ಲಿ ಮುಗಿಸಿ ಪಾತಾಳ ಭುವನೇಶ್ವರಕ್ಕೆ ಹೋದೆವು. ಅದೊಂದು ಗುಹೆ.ಚಿಕ್ಕ ದ್ವಾರದಿಂದ ಒಳಗೆ ನುಸುಳಿ,ಹಗ್ಗದ ಸಹಾಯದಿಂದ ನಿಧಾನವಾಗಿ ಕುಳಿತು ಜಾರುತ್ತಾ ಒಳಗೆ ಇಳಿದೆವು. ಅಲ್ಲಿ ಗೈಡ್ ಒಬ್ಬ ನಮಗೆ ನಾನಾ ತರದ ಬಿಂಬಗಳನ್ನು ತೋರಿಸಿದ. ಸುಣ್ಣ ಕಲ್ಲಿನ ಗುಹೆ. ಅಲ್ಲಿ ಕಾಮಧೇನುವಿನ ಕೆಚ್ಚಲು,ಕೇದಾರ ಅಮರನಾಥಗಳ ಲಿಂಗಗಳು,ಮುಂತಾಗಿ ಎಲ್ಲವನ್ನೂ ನೋಡಿದೆವು.ಕೊನೆಗೆ ಶಂಕರಾಚಾರ್ಯರಿಂದ ಪೂಜಿಸಲ್ಪಟ್ಟ ಶಿವಲಿಂಗ ಒಂದಕ್ಕೆ ಪೂಜಿಸಿ ನಮಿಸಿ ನಿಧಾನವಾಗಿ ಹೊರಗಡೆ ಬಂದೆವು.ಜಗೆಶ್ವರದಲ್ಲಿ ಉಷಾಗೆ ಶಾಲೊಂದನ್ನು ಕೊಂಡುಕೊಂಡೆ.
ಮಿರ್ಥಿಯಲ್ಲಿ ಮತ್ತೆ ನಮಗೆ ಸಂಭ್ರಮದ ಸ್ವಾಗತ.ಬಿಸಿ ಬಿಸಿ ಜಿಲೇಬಿ ಪಕೋಡ ಟೀಆಯಿತು.ಹೋಗುವಾಗ ತೆಗೆದುಕೊಂಡ ಗ್ರೂಪ್ ಫೋಟೋದ ಕಾಪಿ ಯನ್ನು ಎಲ್ಲರಿಗೂ ಕೊಟ್ಟರು. ಕಾಟಗೊದಾಂ ನಿಂದ ಮನೆಗೆ ಫೋನ್ಮಾಡಿದೆ. ಚಿಕ್ಕ ಬಸ್ ಗಳಿಂದ ಒಂದೇ ದೊಡ್ಡ ಬಸ್ನಲ್ಲಿ ಹೊರಟೆವು. ಸಂಜೆ ಮತ್ತೆ ಟೀ ಪಕೋಡ ಆಯಿತು. ಆದರೆ ಬಸ್ ನ ಟೈಯರ್ puncture ಆಗಿದ್ದರಿಂದ ಮತ್ತೆ ಒಂದು ಗಂಟೆ ಕಾಯಬೇಕಾಯಿತು. ದೆಹಲಿಯಲ್ಲಿ ಗುಜರಾತಿ ಭವನ ತಲುಪುವಾಗ ರಾತ್ರಿ ೧೦.೩೦. ಆಗಿತ್ತು.ಯಾರು ಯಾರೋ ಬಂದು ನಮ್ಮ ಕಾಲು ಮುಟ್ಟಿ ನಮಸ್ಕರಿಸಿದರು. ನಮ್ಮ ನಮ್ಮ ಲಗೇಜ್ ಗುರುತಿಸಿ ಹೊತ್ತುಕೊಂಡು ಬಂದೆವು. ರೂಮ್ಸ್ ಕಡಿಮೆ ಇದೆ ಎಂದು ೪-೪ ಜನರಿಗೆ ಒಂದೊಂದು ರೂಂ ಕೊಟ್ಟರು. ಅಂತೂ ಹಾಸಿಗೆಗೆ ಬೆನ್ನು ಕೊಡುವಾಗ ರಾತ್ರಿ ೧೨ ಗಂಟೆ. ಬೆಳಿಗ್ಗೆ ಬೇಗ ರೂಂ ಖಾಲಿ ಮಾಡಬೇಕೆಂದರು. ಸರಿ ಎಂದು ಮಲಗಿದೆವು.
ವಾಪಸ್ಸು ಬೆಂಗಳೂರಿಗೆ ೭-೮ ಆಗಸ್ಟ್.
ಬೆಳಿಗ್ಗೆ ಎದ್ದು ಪ್ಯಾಕಿಂಗ್ ಮಾಡಿದೆವು.ಕ್ಲೊಅಕ್ ರೂಮ್ನಲ್ಲಿ ಬಿಟ್ಟಿದ್ದ ಬ್ಯಾಗ್ ತಂದು ಎಲ್ಲಾ ಜೋಡಿಸಿದ್ದಾಯಿತು. ೮ ಲಿ ತೀರ್ಥದ್ದು ತುಂಬಾ ಯೋಚನೆ ಆಗಿತ್ತು.ಸ್ನಾನ ಉಪಾಹಾರ ಮುಗಿಸಿ ಭಾರತ ಸರಕಾರದ ವಿದೇಶಾಂಗ ಇಲಾಖೆಯಿಂದ ಬರಬೇಕಾಗಿದ್ದ ಸರ್ಟಿಫಿಕೇಟ್ ನ ದಾರಿ ಕಾಯುತ್ತ ಕುಳಿತೆವು. ಕೆಲವರಿಗೆ ೧೦ ಗಂಟೆಗೆ ಟ್ರೈನ್ ಇತ್ತು. ಉಷಾ ಸುಧಾ ಆಶಾ ರಾಣಿ ಎಲ್ಲರೂ ೧೨ ಗಂಟೆಗೆ ಬಂದರು. ಮತ್ತಷ್ಟು ಹರಟೆ ಕೊಚ್ಚಿದೆವು.ನಿನ್ನೆ ಸುಧಾ ಶೂ ಬಿಟ್ಟು ಹೋಗಿದ್ದರು,ನಾನು ನನ್ನ ರೂಮ್ನಲ್ಲಿ ತಂದು ಇಟ್ಟುಕೊಂಡಿದ್ದೆ. ಅವರಿಗೆ ಖುಶಿಆಯಿತು. ಎಲ್ಲರೂ ಒಟ್ಟಿಗೆ ಊಟ ಮಾಡಿದೆವು. ಆಶಾ ಸ್ವೀಟ್ಸ್ ತಂದರು. ಎಲ್ಲ ತಿಂದು ಹರಟೆ ಹೊಡೆಯುತ್ತಿದ್ದಾಗ ಗುಪ್ತಾಜಿ ಬಂದು ಎಲ್ಲರ ಸರ್ಟಿಫಿಕೇಟ್ ಕೊಟ್ಟರು. ನಂತರ ಯಲ್ಲರೂ ಹೊರಟರು. ನನ್ನ ಫ್ಲೈಟ್ ಇದ್ದಿದ್ದು ಮರುದಿನ. ಹಾಗಾಗಿ ನಾನ ನನ್ನ ಮೈದುನ ಕೃಷ್ಣಣ್ಣನ ಮನೆಗೆ ಹೋಗಬೇಕಾಗಿತ್ತು. ಅವರು ಕರೆದುಕೊಂಡು ಹೋಗಲು ಬರುತ್ತೇನೆ ಯಿಂದಿದ್ದರೂ ನಾನೇ ಬೇಡ ನಾನು ಆಟೋ ದಲ್ಲಿ ಬರುತ್ತೇನೆ ಎಂದು ಹೇಳಿದ್ದೆ. ರಾಣಿಯ ಡ್ರೈವರ್ ನನಗೆ ಒಂದು ಆಟೋ ತಂದು ಕೊಟ್ಟ. ರಾಜೋರಿ ಗಾರ್ಡನ್ ತಲುಪುವಾಗ ೩ ಗಂಟೆ.ನನಗಾಗಿ ನನ್ನ ಒರಗಿತ್ತಿ ವೃಂದ ಊಟಮಾಡದೆ ಕಾಯುತ್ತಾ ಇದ್ದರು. ನನ್ನ ಊಟವಾಗಿದೆ ಎಂದೆ. ಸಂಜೆ ದೋಸೆ ಕಾಫಿ ಹರಟೆ ಎಲ್ಲಾ ಮುಗಿಸಿ ಸ್ವಲ್ಪ ಶಾಪಿಂಗ್ ಮಾಡಿದೆವು. ಊಟ ಮುಗಿಸಿ ಮಾತನಾಡುತ್ತಾ ಮಲಗಿದೆವು.
ಬೆಳಿಗ್ಗೆ ೧೧ ಗಂಟೆಗೆ ಟ್ಯಾಕ್ಸಿಯಲ್ಲಿ ವಿಮಾನ ನಿಲ್ದಾಣಕ್ಕೆ ಹೊರಟೆವು. ಇಬ್ಬರೂ ನನ್ನನ್ನು ನಿಲ್ದಾಣದ ವರೆಗೂ ಬಂದು ಬೀಳ್ಕೊಟ್ಟರು. ಅವರ ಪ್ರೀತಿ ವಿಶ್ವಾಸ ಆದರ ನನಗೆ ಮಾತು ಮರೆಸಿತು. ಎರಡು ಬ್ಯಾಗ್ ನ್ನು ಚೆಕ್ ಇನ್ ಮಾಡಿದೆ ತೀರ್ಥ ಇದ್ದ ಬ್ಯಾಗ್ ನ್ನು ಕ್ಯಾಬಿನ್ ನಲ್ಲಿ ಇಟ್ಟುಕೊಳ್ಳುತ್ತೇನೆ ಎಂದೆ. ಮೊದಲು ಒಪ್ಪಲಿಲ್ಲ.ಆದರೆ ಇದು ಮಾನಸ ಸರೋವರದ ತೀರ್ಥ,ಚೆಲ್ಲಬಾರದು ಎಂದೆಲ್ಲ ರಿಕ್ವೆಸ್ಟ್ ಮಾಡಿದ ನಂತರ ಒಪ್ಪಿದಳು. ಆದರೂ ಇದನ್ನು ಎತ್ತಿಕೊಂಡು ಫ್ಲೈಟ್ ಹೇಗೆ ಹತ್ತುತ್ತಿ ಎಂದು ಕೇಳಿದಳು. ಹೇಗಾದರೂ ಮ್ಯಾನೇಜ್ ಮಾಡುತ್ತೇನೆ ಆದರೆ ಚೆಕ್ ಇನ್ ಮಾಡುವುದು ಬೇಡ ಎಂದೆ. ಆದರೂ ಇದನ್ನು ಎತ್ತಿಕೊಂಡು ಹತ್ತುವುದು ಹೇಗೆ ಎಂದು ಚಿಂತೆ ಮಾಡುವಾಗ ಕೊಂಕಣಿ ಮಾತನಾಡುವ ಮಂಗಳೂರಿನ ಒಂದು ಸಂಸಾರ ಸಿಕ್ಕಿತು. ಅವರ ಹತ್ತಿರ ನನ್ನ ಕಷ್ಟ ಹೇಳಿದೆ. ಅವರು ಸಂತೋಷ ದಿಂದ ನನ್ನ ಬ್ಯಾಗ್ ಹೊತ್ತು ಹತ್ತಿದ್ದಲ್ಲದೆ, ಬೆಂಗಳೊರು ವಿಮಾನ ನಿಲ್ದಾಣದಲ್ಲಿ ಇಳಿಸಿಯೂ ಕೊಟ್ಟರು. ತೀರ್ಥವನ್ನು ಹೊತ್ತು ತಮಗೂ ಸ್ವಲ್ಪ ಪುಣ್ಯ ಬಂತು ಎಂದರು.
ನನ್ನ ಪತಿ ಕಾಯುತ್ತಾಇದ್ದರು. ಮನೆ ಬಿಟ್ಟು ಸರಿಯಾಗಿ ಒಂದು ತಿಂಗಳಾಗಿತ್ತು. ಊಟ ವಿಮಾನದಲ್ಲೇ ಆಗಿದ್ದರಿಂದ ಬಟ್ಟೆ ಒಗೆದು ಮನೆ ಸ್ವಲ್ಪ ಕ್ಲೀನ್ ಮಾಡುವಾಗ ನನ್ನ ಮಗಳು ಬಂದಳು. ಅಮ್ಮಾ ಅದೆಷ್ಟು ಕಪ್ಪಾಗಿದ್ದಿಯಲ್ಲಾ ಎಂದಳು.ಕಪ್ಪಾದರೇನಂತೆ ಕನಸಂತೂ ನನಸಾಯಿತಲ್ಲಾ ಎಂದೆ!
ಕೊನೆಯ ಮಾತು.
ಕುಮಾವೋ ಮಂಡಲ್ ವಿಕಾಸ್ ನಿಗಮ್ ಈ ಯಾತ್ರೆಯಲ್ಲಿ ತುಂಬಾ ಚೆನ್ನಾಗಿ ನಮ್ಮನ್ನು ನೋಡಿಕೊಂಡಿದ್ದಾರೆ.ಯಾವುದೇ ತೊಂದರೆ ಯಾಗದಂತೆ ಕಾಲಕಾಲಕ್ಕೆ ಟೀ ಕಾಫಿ ಊಟ ವಸತಿ,ರಸ್ನಾ ಸೂಪ್ ಎಂದು ಉಪಚಾರ ಮಾಡಿದ್ದರೆ. ಇನ್ನು ITBP ಯವರ ಪಾತ್ರ ತುಂಬಾ ಹೆಚ್ಚಿನದು. ಕೈಲಾಸ ಯಾತ್ರೆ ಮಾಡಿಸುವುದರಲ್ಲಿ ಇವರ ಉಪಕಾರ ಚಿರಸ್ಮರಣೀಯ. ಚಾರಣ ಪ್ರಾರಂಭವಾದಾಗಿನಿಂದ ಟಿಬೆಟ್ ಬಾರ್ಡರ್ ತನಕ ಮತ್ತೆ ಲಿಪು ನಿಂದ ಮಿರ್ತಿ ತನಕ ನಮ್ಮನ್ನು ಯಾವುದೇ ತೊಂದರೆ ಯಾಗದಂತೆ ನೋಡಿಕೊಂಡಿದ್ದಾರೆ. ಯಾತ್ರೆಯ ಪುಣ್ಯ ಅವರಿಗೂ ಸೇರಬೇಕು. ಇನ್ನು ನಮ್ಮ L.O. ಅತುಲ್ ಕಾರ್ವಾಲ್ ಇಡೀ ತಂಡವನ್ನು ತಮ್ಮ ಪರಿವಾರದಂತೆ ಯಾತ್ರೆ ಮಾಡಿಸಿಕೊಂಡು ಬಂದಿದ್ದಾರೆ.ಅವರು ಪೋಲಿಸ್ ಆಫೀಸರ್ ಎಂಬುದನ್ನು ಮರತೆ ಬಿಟ್ಟಿದ್ದೆವು ನಾವೆಲ್ಲಾ. ಎಲ್ಲರನ್ನೂ ಪ್ರೋತ್ಸಾಹಿಸುತ್ತಾ ಕಷ್ಟ ಸುಖಗಳನ್ನು ಕೇಳಿಕೊಳ್ಳುತ್ತಾ ನಡೆಯುತ್ತಿದ್ದರು. ನಡೆಯಲಾರದೆ ನಡೆಯುತ್ತಿದ್ದಾಗ ಅವರ ಮಾತುಗಳು ಮಾರ್ಗಾಯಾಸವನ್ನು ತುಸು ಮರೆಸುತ್ತಿತ್ತು. ನಮ್ಮ ತಮ್ಮನೇ ಒಬ್ಬ ನಮ್ಮೊಂದಿಗಿದ್ದಂತೆ ಇತ್ತು. ಇನ್ನು ಸಹ ಯಾತ್ರಿಗಳೂ ಯಾವುದೇ ಕಿರಿಕಿರಿ ಯಿಲ್ಲದೆ ಯಾತ್ರೆ ಮಾಡಿದರು.ಒಂದೆರಡು ಪ್ರಸಂಗ ಬಿಟ್ಟರೆ ಒಟ್ಟಿನಲ್ಲಿ ಇಡೀ ತಂಡ ಒಗ್ಗಟ್ಟಾಗಿ ಇತ್ತು.ಎಲ್ಲರೂ ಒಬ್ಬಳೇ ಬಂದಿದ್ದ ನನಗೆ ಒಂದೊಂದು ಸಲವಾದರೂ ಸಹಾಯ ಮಾಡಿದವರೇ. ಅದರಲ್ಲೂ ಕೊಡಗಿನ ಸ್ನೇಹಿತೆಯರು,ನಾನು ದಣಿದು ಮಲಗಿದಾಗ ಕಾಫಿ ಹೊರ್ಲಿಕ್ಕ್ಸ್ ಮಾಡಿ ಕುಡಿಸಿದ್ದಾರೆ. ಜ್ಯೋತಿ ಶಿರೀಶ್ ಭಾವೆ ಕೂಡ ಎಷ್ಟೋ ಸಹಾಯ ಮಾಡಿದ್ದಾರೆ. ಎಲ್ಲರೂ ಸಹಾಯ ಮಾಡಿದರೋ ಅಥವಾ ಆ ಪರಶಿವನೇ ಅವರ ಮೂಲಕ ಸಹಾಯ ಮಾಡಿದನೋ ಗೊತ್ತಿಲ್ಲ. ಅವನ ಲೀಲೆ ಅಪಾರ ವಲ್ಲವೇ?
ಓಂ ನಮಃ ಶಿವಾಯ.